ಜ. 12ರಂದು ಕೊಪ್ಪಳದ ಕುಂಭಮೇಳ, 15 ಲಕ್ಷ ಭಕ್ತರಿಗೆ ದಾಸೋಹದ ವ್ಯವಸ್ಥೆ

By Suvarna News  |  First Published Jan 2, 2020, 11:40 AM IST

ಮಹಾದಾಸೋಹಕ್ಕೆ ಭವನ ನಿರ್ಮಾಣ, ಭರದ ಸಿದ್ಧತೆ| ಜ.12ರಿಂದ ಜ.24ರ ವರೆಗೆ ನಡೆಯಲಿದೆ ಮಹಾ ದಾಸೋಹ| ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸುವುದು ಈ ಜಾತ್ರೆಯ ವಿಶೇಷ|  ಲಕ್ಷಾನುಗಟ್ಟಲೇ ರೊಟ್ಟಿ, ತರಕಾರಿ, ಸಿಹಿ ಪದಾರ್ಥ ಮುಂತಾದ ಸಾಮಗ್ರಿಗಳ ದೇಣಿಗೆ ನೀಡುವ ಭಕ್ತರು|


ಕೊಪ್ಪಳ(ಜ.02): ಲಕ್ಷ ಲಕ್ಷ ಭಕ್ತರಿಗೂ ಪ್ರಸಾದ ನೀಡುವ ಸಂಪ್ರದಾಯವನ್ನು ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ರೂಢಿಸಿಕೊಳ್ಳಲಾಗಿದ್ದು, ಇದಕ್ಕಾಗಿ ಮಹಾದಾಸೋಹ ಭವನವನ್ನು ಪ್ರತ್ಯೇಕವಾಗಿಯೇ ಸಿದ್ಧ ಮಾಡಲಾಗುತ್ತದೆ. ಸುಮಾರು ನಾಲ್ಕೂವರೆ ಎಕರೆ ಪ್ರದೇಶ ವಿಶಾಲವಾದ ಜಾಗದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.

ಈ ವರ್ಷದ ಜಾತ್ರೆಯಲ್ಲಿ ಮಹಾ ರಥೋತ್ಸವದ ದಿನವಾದ ಜ. 12ರಂದು ಪ್ರಾರಂಭವಾಗುವ ಮಹಾದಾಸೋಹ ಜ. 24 ರಾತ್ರಿ ಅಮಾವಾಸ್ಯೆ ವರೆಗೆ ಲಕ್ಷಾಂತರ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀ ಗವಿಮಠದ ಬಲಭಾಗದಲ್ಲಿರುವ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್‌ ಗಾರ್ಡನ್‌ನಲ್ಲಿರುವ ಸುಮಾರು ನಾಲ್ಕು ಎಕರೆಯಷ್ಟು ವಿಶಾಲವಾದ ಆವರಣದಲ್ಲಿ (75 ಸಾವಿರ ಚದರ ಅಡಿ) ಭವ್ಯವಾದ ಅಡುಗೆ ಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ ಹಾಗೂ ಪ್ರಸಾದ ಸ್ವೀಕರಿಸಲು ವಿಶಾಲವಾದ ಸ್ಥಳಾವಕಾಶ ಕಲ್ಪಿಸಿಕೊಡುವ ಕಾರ್ಯ ಭರದಿಂದ ಸಾಗಿದೆ.

ಇದರಲ್ಲಿ 3 ಮಾದಲಿ ಕಟ್ಟೆ, 2 ಕೈ ತೊಳೆಯುವ ಸ್ಥಳ, ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಾಣ ಮಾಡಲಾಗುವುದು. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಪ್ರಸಾದ ಸ್ವೀಕರಿಸಲು 15+15 ಕೌಂಟರ್‌ಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೇ 4 ಪ್ರವೇಶ ದ್ವಾರಗಳು, 65 ಅಡಿಯ ಅನ್ನ ಸಂಗ್ರಹಣಾ ಕಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು. ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಒಳಾಂಗಣ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಜಾತ್ರಾಮಹೋತ್ಸವ ಮಹಾದಾಸೋಹದಲ್ಲಿ ಒಂದು ದಿನಕ್ಕೆ 300 ರಿಂದ 400 ವರೆಗೆ ಭಕ್ತರು ಪ್ರಸಾದ ತಯಾರಿಸುವ ಸೇವೆಗೈಯಲಿದ್ದಾರೆ. ಪ್ರಸಾದ ವಿತರಣೆಯಲ್ಲಿ 500 ರಿಂದ 600 ಭಕ್ತರು ಪಾಲ್ಗೊಳ್ಳುವರಿದ್ದು, ಜಾತ್ರಾಮಹೋತ್ಸವ ಪ್ರಾರಂಭದಿಂದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿ ಸುಮಾರು 25 ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 15 ಲಕ್ಷ ಭಕ್ತರು ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ.

ಈ ಜಾತ್ರೆಯ ಮಹಾದಾಸೋಹದಲ್ಲಿ ರೊಟ್ಟಿ, ಪಲ್ಯ, ಸಿಹಿ ಪದಾರ್ಥ, ಅನ್ನ, ಸಾಂಬಾರ್‌, ಕಡ್ಲಿ ಚಟ್ನಿ, ಉಪ್ಪಿನಕಾಯಿ ಮುಂತಾದ ನಮೂನೆ ಪ್ರಸಾದವನ್ನು ಮಹಾದಾಸೋಹ ಭವನದಲ್ಲಿ ವಿತರಿಸಲಾಗುವುದು. ರಥೋತ್ಸವ ದಿನದಿಂದ ಅಮಾವಾಸ್ಯೆ ವರೆಗೆ ನಡೆಯುವ ಈ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸುವುದು ಈ ಜಾತ್ರೆಯ ವಿಶೇಷವಾಗಿದೆ. ಎಷ್ಟೋ ಮಭಕ್ತರು ತಮ್ಮ ನೆಗಳಿಂದ ಲಕ್ಷಾನುಗಟ್ಟಲೇ ರೊಟ್ಟಿ, ತರಕಾರಿ, ಸಿಹಿ ಪದಾರ್ಥ ಮುಂತಾದ ಸಾಮಗ್ರಿಗಳ ದೇಣಿಗೆ ನೀಡುವರು.

ಏನೇನು ವೆಚ್ಚವಾಗಬಹುದು?

1. ರೊಟ್ಟಿ ಸುಮಾರು 14ರಿಂದ 15 ಲಕ್ಷ

2. ಅಕ್ಕಿ 600 ಕ್ವಿಂಟಲ್‌

3. ಸಿಹಿ ಪದಾರ್ಥಗಳು 700 ಕ್ವಿಂಟಲ್‌

4. ತರಕಾರಿ 200 ಕ್ವಿಂಟಲ್‌

5. ದ್ವಿದಳ ಧಾನ್ಯಗಳು 250 ಕ್ವಿಂಟಲ್‌

6. ಹಾಲು 10 ಸಾವಿರ ಲೀಟರ್‌

7. ತುಪ್ಪ ಒಂದು ಸಾವಿರ ಕೆ.ಜಿ.

8. ಉಪ್ಪಿನಕಾಯಿ 5000 ಕೆಜಿ

9. ಪುಟಾಣಿ ಚಟ್ನಿ 15 ಕ್ವಿಂಟಲ್‌

10. ಕೆಂಪು ಚಟ್ನಿ 5 ಕ್ವಿಂಟಲ್‌

11. 20 ಕ್ವಿಂಟಲ್‌ ಕಡ್ಲೆಬೆಳೆ ಮಿರ್ಚಿ

ಜಾತ್ರೆಯಲ್ಲಿ ಸಾಹಸ, ದಾಲಪಟ, ಕರಾಟೆ ಪ್ರದರ್ಶನ

ಶ್ರೀ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಮಹಾರಥೋತ್ಸವದ ದಿನ ಜ. 12ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಸಾಹಸ, ದಾಲಪಟ ಹಾಗೂ ಕರಾಟೆ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಸಹಯೋಗದೊಂದಿಗೆ ನಡೆಯಲಿರುವ ಈ ಸಾಹಸ ಪ್ರದರ್ಶನವನ್ನು ಆಸಕ್ತ ಭಕ್ತಾದಿಗಳು ಜಾತ್ರೆಯಲ್ಲಿ ವೀಕ್ಷಣೆ ಮಾಡಬಹುದೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

ಜಾತ್ರೆಯಲ್ಲಿ ಶ್ರೀ ಗವಿಸಿದ್ಧೇಶ್ವರ ನಾಟಕ ಪ್ರದರ್ಶನ

ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಶ್ರೀಗವಿಸಿದ್ಧೇಶ್ವರ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮಹಾರಥೋತ್ಸವದ ದಿನ ಜ. 12 ಹಾಗೂ ಜ. 13ರಂದು ರಾತ್ರಿ 10.30ಕ್ಕೆ ಶ್ರೀಮತಿ ಶಾರದಮ್ಮ ವಿ. ಕೊತಬಾಳ ಕಾಲೇಜು ಆವರಣದಲ್ಲಿ ಹಿರೇಬಗನಾಳದ ಶ್ರೀ ಗವಿಸಿದ್ಧೇಶ್ವರ ಸೇವಾ ನಾಟ್ಯ ಸಂಘದವರು ಶ್ರೀ ಗವಿಸಿದ್ಧೇಶ್ವರ ನಾಟಕ ಪ್ರದರ್ಶನ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ವೀಕ್ಷಣೆ ಮಾಡಬೇಕು ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

ವಾಲಿಬಾಲ್‌ ಪಂದ್ಯಾವಳಿ

ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಆಹ್ವಾನಿತ ಮಹಿಳೆಯರ ವಾಲಿಬಾಲ್‌ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ. ಜ. 13 ಹಾಗೂ 14ರಂದು ಬೆಳಗ್ಗೆ 9 ಗಂಟೆಗೆ ಶ್ರೀಗವಿಮಠದ ಆವರಣ ಆವರಣದಲ್ಲಿ ಪಂದ್ಯಾವಳಿಗಳನ್ನು ಜರುಗಿಸಲಾಗುತ್ತದೆ. ಕೊಪ್ಪಳ ವಾಲಿಬಾಲ್‌ ಅಸೋಸಿಯೇಷನ್‌ ಸಹಯೋಗದಲ್ಲಿ ನಡೆಯುವ ಪಂದ್ಯಾವಳಿಗಳು ಭಕ್ತಾದಿಗಳಿಗೆ ನೋಡಲು ಅವಕಾಶವಿರುತ್ತದೆ ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
 

click me!