ಪ್ರತಿವರ್ಷ ಸುವರ್ಣ ವಿಧಾನಸೌಧದಲ್ಲಿ 10 ದಿನ ವಿಧಾನಮಂಡಳ ಚಳಿಗಾಲದ ಅಧಿವೇಶನ ನಡೆಸಿದರೆ ಯಾವುದೇ ಪ್ರಯೋಜನವಾಗದು. ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸಬೇಕು. ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಚರ್ಚೆಯಾಗುತ್ತವೆ. ಹಾಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಭಾಗದ ಜನರ ಬೇಡಿಕೆಗಳ ಕುರಿತು ಚರ್ಚೆಯಾಗಬೇಕು: ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡ ಅಶೋಕ ಪೂಜಾರಿ
ಬೆಳಗಾವಿ(ಡಿ.10): ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದು ಸರ್ಕಾರ ಘೋಷಿಸಬೇಕು ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡ ಅಶೋಕ ಪೂಜಾರಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧಕ್ಕೆ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿಕೇಂದ್ರವಾಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿವರ್ಷ ಸುವರ್ಣ ವಿಧಾನಸೌಧದಲ್ಲಿ 10 ದಿನ ವಿಧಾನಮಂಡಳ ಚಳಿಗಾಲದ ಅಧಿವೇಶನ ನಡೆಸಿದರೆ ಯಾವುದೇ ಪ್ರಯೋಜನವಾಗದು. ತಿಂಗಳಿಗೊಮ್ಮೆ ಸಚಿವ ಸಂಪುಟ ಸಭೆ ನಡೆಸಬೇಕು. ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಚರ್ಚೆಯಾಗುತ್ತವೆ. ಹಾಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಭಾಗದ ಜನರ ಬೇಡಿಕೆಗಳ ಕುರಿತು ಚರ್ಚೆಯಾಗಬೇಕು. ಈ ಬಾರಿ ಅಧಿವೇಶನದಲ್ಲಿ ಮೊದಲ ವಾರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಯಾರೂ ಗಟ್ಟಿಯಾಗಿ ಧ್ವನಿ ಎತ್ತಿಲ್ಲ. ಮುಂದಿನ ವಾರದ ಮೊದಲೆರಡು ದಿನಗಳಲ್ಲಾದರೂ ಆ ಬಗ್ಗೆ ಗಂಭೀರವಾಗಿ ಚರ್ಚೆಯಾಗಬೇಕು. ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಮೀಸಲಾತಿಗಾಗಿ ಮತ್ತೆ ಹೋರಾಟಕ್ಕೆ ಅಣಿಯಾದ ಪಂಚಮಸಾಲಿ ಸಮಾಜ..!
ನಿಜವಾದ ಆಡಳಿತ ವಿಕೇಂದ್ರೀಕರಣಕ್ಕೆ ಸುವರ್ಣ ವಿಧಾನಸೌಧ ಕಟ್ಟಡಕ್ಕೆ ರಾಜ್ಯಮಟ್ಟದ ಕಾರ್ಯದರ್ಶಿ, ನಿರ್ದೇಶಕರ ಕಚೇರಿಗಳನ್ನು ಸ್ಥಳಾಂತರಿಸಬೇಕು. ಈ ಭಾಗದ ಅಂತಿಮ ಆದೇಶ ಇಲ್ಲಿಂದಲೇ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ. ಬೆಳಗಾವಿ ಗಡಿ ವಿವಾದಕ್ಕೆ ಅಂತಿಮ ವಿದಾಯ ಹೇಳಲು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು. ಈ ಬಗ್ಗೆ ಉತ್ತರ ಕರ್ನಾಟಕ ಭಾಗದ ಸಚಿವರು, ಶಾಸಕರು ಗಟ್ಟಿ ಧ್ವನಿ ಎತ್ತುವ ಮೂಲಕ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಗೊಂಡು ದಶಕ ಕಳೆದರೂ ಈ ಭಾಗದ ಜನತೆಯ ಮೂಲ ಉದ್ದೇಶ ಈಡೇರಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಬೇಡಿಕೆಗಳ, ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚೆ ನಡೆಸಬೇಕು. ಕೇವಲ ಕಾಟಾಚಾರಕ್ಕೆ ಎನ್ನುವಂತೆ ಚರ್ಚೆ ನಡೆಸಬಾರದು ಎಂದು ತಿಳಿಸಿದರು.