ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಟ್ಟು ಮೂಕ ಮತ್ತು ಕಿವುಡ ಮಕ್ಕಳಿಗೆ ಉಚಿತ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ನಡೆಸುವುದರೊಂದಿಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಹತ್ವದ ಸಾಧನೆ ಮಾಡಿದೆ. ಸಂಸ್ಥೆಯ ಇಎನ್‌ಟಿ ವಿಭಾಗವು 15 ಮಕ್ಕಳಿಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ.
ಮಂಡ್ಯ ಮಂಜುನಾಥ
ಮಂಡ್ಯ : ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಟ್ಟು ಮೂಕ ಮತ್ತು ಕಿವುಡ ಮಕ್ಕಳಿಗೆ ಉಚಿತ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ನಡೆಸುವುದರೊಂದಿಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಹತ್ವದ ಸಾಧನೆ ಮಾಡಿದೆ. ಸಂಸ್ಥೆಯ ಇಎನ್‌ಟಿ ವಿಭಾಗವು 15 ಮಕ್ಕಳಿಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ.
undefined
ಮಂಡ್ಯ ಸೇರಿದಂತೆ ಕಲಬುರಗಿ, ರಾಯಚೂರು, ಚಾಮರಾಜನಗರ ಜಿಲ್ಲೆಗಳ 8 ಹೆಣ್ಣು ಹಾಗೂ 7 ಗಂಡು ಮಕ್ಕಳು ಸೇರಿ ಒಟ್ಟು 15 ಮಕ್ಕಳಿಗೆ ಖ್ಯಾತ ಇಎನ್‌ಟಿ ತಜ್ಞ ಡಾ.ಶಂಕರ್ ಮಡಿಕೇರಿ ಮಾರ್ಗದರ್ಶನದಲ್ಲಿ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಯನ್ನು ಮಿಮ್ಸ್ ಇಎನ್‌ಟಿ ವಿಭಾಗದ ಸರ್ಜನ್‌ಗಳು ಯಶಸ್ವಿಯಾಗಿ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಯ ಮೂರು ವಾರಗಳ ನಂತರ ಶಸ್ತ್ರಚಿಕಿತ್ಸೆಗೆ ಒಳಪಡಿಸಿದವರನ್ನು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಸಂಸ್ಥೆಯಲ್ಲಿ ಶ್ರವಣ ಮೌಖಿಕ ತರಬೇತಿಗೆ ಕಳುಹಿಸಲಾಗುವುದು. ಒಂದು ವರ್ಷದವರೆಗೆ ಮಕ್ಕಳಿಗೆ ತರಬೇತಿ ಮುಂದುವರೆಯುತ್ತದೆ. ಈಗಾಗಲೇ ತರಬೇತಿ ಮುಗಿಯುವ ಹಂತದಲ್ಲಿರುವ ಇಬ್ಬರು ಮಕ್ಕಳು ಎರಡಕ್ಷರದ ಪದಗಳನ್ನು ಉಚ್ಛಾರ ಮಾಡುತ್ತಿರುವುದು ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯ ಸಾಧನೆಯಾಗಿದೆ.
ಮಿಮ್ಸ್ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಡಿ.ರವಿ, ಇಎನ್‌ಟಿ ತಜ್ಞರಾದ ಡಾ.ಎನ್.ಕೆ.ಬಾಲಾಜಿ, ಡಾ.ಜಿ.ಶಿವಕುಮಾರ್, ಡಾ.ಕೃಷ್ಣ, ಮಿಮ್ಸ್ ಅರಿವಳಿಕೆ ವಿಭಾಗ, ಆಡಿಯಾಲಜಿಸ್ಟ್‌ಗಳಾದ ನೇಹಾ ಮತ್ತು ತೇಜಸ್ ಹಸುಳೆಗಳ ಬಾಯಲ್ಲಿ ಧ್ವನಿಯನ್ನು ಆಲಿಸುವ ಸೌಭಾಗ್ಯ ಕರುಣಿಸಲು ಪ್ರಮುಖ ಕಾರಣೀಭೂತರಾಗಿದ್ದಾರೆ.
ಪತ್ತೆ ಮಾಡುವುದು ಹೇಗೆ?
ಮಗು ಹುಟ್ಟಿದ ಕೂಡಲೇ ಶ್ರವಣದೋಷವನ್ನು ಪತ್ತೆಹಚ್ಚಬಹುದು. ಆನಂತರ ಮೂರು ತಿಂಗಳವರೆಗೆ ವಿವಿಧ ಪರೀಕ್ಷೆ ನಡೆಸಲಾಗುವುದು. ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಮಾಡಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶ್ರವಣ ಮೌಖಿಕ ತರಬೇತಿಗೆ ಕಳುಹಿಸಲಾಗುವುದು. ಥೆರಪಿ ಚಿಕಿತ್ಸೆಯಿಂದಲೂ ಎರಡೂ ಕಿವಿ ಶೇ.೯೦ರಷ್ಟು ಕೇಳಿಸದಿದ್ದರೆ ಮಾತ್ರ ಅಂತಹ ಮಕ್ಕಳನ್ನು ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು. ಒಂದು ಕಿವಿ ಕೇಳಿಸುತ್ತಿದ್ದು, ಮತ್ತೊಂದು ಕಿವಿ ಕೇಳಿಸದಿದ್ದರೆ ಶ್ರವಣದೋಷವಿರುವ ಕಿವಿಗೆ ಸಾಧನ ಅಳವಡಿಸಲಾಗುತ್ತದೆ. ಕಿವುಡತನ ಹೊಂದಿರುವ ಮಕ್ಕಳಿಗೆ ೨ ರಿಂದ ೩ ವರ್ಷದೊಳಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಅಲ್ಲದೆ, ಪ್ರತಿ ತಿಂಗಳು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಉಚಿತ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ ಶ್ರವಣದೋಷವಿರುವ ಮಕ್ಕಳನ್ನು ಗುರುತಿಸಲಾಗುತ್ತಿದೆ. ಅಂತಹ ಮಕ್ಕಳಿಗೆ ಅಗತ್ಯ ಸಾಧನಗಳನ್ನು ವಿತರಿಸುವ, ಪೂರ್ಣ ಕಿವಿ ಕೇಳಿಸದ 6 ವರ್ಷದ ಮಕ್ಕಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಕಾರ್ಯ ನಡೆಸಲಾಗುತ್ತಿದೆ.
ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿನ ಕಿವಿಗೆ ಸಾಧನ ಅಳವಡಿಸಲಾಗಿರುತ್ತದೆ. ಕಿವಿಯೊಳಗೆ ಕಸಿ ಮಾಡಿದ ಸಾಧನವಿರುತ್ತದೆ. ಮೇಲ್ಭಾಗದ ಸಾಧನ ಉತ್ತಮವಾಗಿ ನಿರ್ವಹಣೆ ಮಾಡಿದರೆ ೫ ರಿಂದ ೬ ವರ್ಷ ಬಾಳಿಕೆ ಬರುತ್ತದೆ. ಆನಂತರ ಅದರಲ್ಲಿ ದೋಷ ಕಂಡುಬಂದರೆ ಬದಲಾಯಿಸಬೇಕು. ಅದಕ್ಕೆ ಕನಿಷ್ಠ ೪ ಲಕ್ಷ ರು.ವರೆಗೆ ಖರ್ಚಾಗಲಿದೆ ಎಂದು ಇಎನ್‌ಟಿ ವಿಭಾಗದ ತಜ್ಞರು ಹೇಳಿದರು.
2 ಮಕ್ಕಳಿಗೆ ಆಸ್ಪತ್ರೆಯಲ್ಲಿಯೇ ಶಸ್ತ್ರಚಿಕಿತ್ಸೆ
ಮಿಮ್ಸ್ ಇಎನ್‌ಟಿ ವಿಭಾಗದಿಂದ ಕಾಕ್ಲಿಯರ್ ಇಂಪ್ಲಾಂಟ್ ತಜ್ಞ ಡಾ.ಶಂಕರ್ ಮಡಿಕೇರಿ ಮತ್ತು ಡಾ.ಎನ್.ಕೆ.ಬಾಲಾಜಿ ಅವರು ಶುಕ್ರವಾರ ನಡೆದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯ ನೇರ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು. ಇಬ್ಬರು ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಗಮನಸೆಳೆದರು. ಈ ಸಮಯದಲ್ಲಿ ಆಯುಷ್ ಮೈಸೂರು ಸಂಸ್ಥೆಯ ನಿರ್ದೇಶಕಿ ಡಾ.ಪಿ.ಮಂಜುಳಾ, ಕಾಕ್ಲಿಯರ್ ಇಂಪ್ಲಾಂಟ್ ರೇಡಿಯಯಾಲಜಿಕಲ್ ಮೌಲ್ಯಮಾಪನ ವಿಭಾಗದ ಡಾ.ಆಶಾ ಯತಿರಾಜ್ ಶಸ್ತ್ರಚಿಕಿತ್ಸೆ ನಂತರದ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಿದರು.
8 ರಿಂದ 10 ಲಕ್ಷ ರು.ವರೆಗೆ ವೆಚ್ಚ
ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸುವುದಾದರೆ ಕನಿಷ್ಠ ೮ ರಿಂದ ೧೦ ಲಕ್ಷ ರು.ವರೆಗೆ ವೆಚ್ಚವಾಗಲಿದೆ. ಬಡವರಿಗೆ ಈ ಶಸ್ತ್ರಚಿಕಿತ್ಸೆ ಎಟುಕದಂತಾಗಿತ್ತು. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲೇ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸುತ್ತಿರುವುದು ಕಿವುಡುತನವಿರುವ ಬಡ ಮಕ್ಕಳಿಗೆ ವರದಾನವಾಗಿದೆ. ಇದರಿಂದಾಗಿ ಮಾತು, ಅಕ್ಷರಾಭ್ಯಾಸ, ಆಟ-ಪಾಠ, ಕಲಿಕೆ, ಕಲಾಚಟುವಟಿಕೆಗಳಿಂದ ದೂರ ಉಳಿದಿದ್ದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೆರವು ದೊರಕಿದಂತಾಗಿದೆ.
ನನ್ನ ಮಗಳು ಹುಟ್ಟಿದ ಆರು ತಿಂಗಳವರೆಗೆ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅನುಮಾನ ಬಂದು ಪರೀಕ್ಷಿಸಿದಾಗ ಎರಡೂ ಕಿವಿಯಲ್ಲಿ ದೋಷವಿರುವುದಾಗಿ ವೈದ್ಯರು ಹೇಳಿದರು. ಮೈಸೂರಿನಲ್ಲಿ ೬ ತಿಂಗಳು ಥೆರಪಿ ಚಿಕಿತ್ಸೆ ಕೊಡಿಸಿದರೂ ಸರಿಹೋಗಲಿಲ್ಲ. ಕೊನೆಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿದೆವು. ಈಗ ಮಗಳು ಸ್ವಲ್ಪ ಸ್ವಲ್ಪ ಮಾತನಾಡುತ್ತಾಳೆ.
- ಅಶ್ವಿನಿ, ಕಲಬುರಗಿ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ರಾಜ್ಯ ಸರ್ಕಾರ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯನ್ನು ಪ್ರಾರಂಭಿಸಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಟ್ಟು ಮೂಕ ಮತ್ತು ಕಿವುಡ ಮಕ್ಕಳನ್ನು ಉಚಿತ ತಪಾಸಣಾ ಶಿಬಿರಗಳ ಮೂಲಕ ಗುರುತಿಸಲಾಗುವುದು ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ಹೊಂದಿಕೊಳ್ಳುವ ಅರ್ಹ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್‌ನ್ನು ಅಳವಡಿಸಲಾಗುತ್ತದೆ. ರಾಜ್ಯ ಸರ್ಕಾರದಿಂದ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಇದಕ್ಕೆ ಎಲ್ಲ ವರ್ಗದ ಜನರು ಅರ್ಹರು.
-ಡಾ.ಶಂಕರ್ ಮಡಿಕೇರಿ, ಖ್ಯಾತ ಕಾಕ್ಲಿಯರ್ ಇಂಪ್ಲಾಂಟ್ ತಜ್ಞರು
ಮಿಮ್ಸ್ ಇಎನ್‌ಟಿ ವಿಭಾಗ 15 ಮಕ್ಕಳಿಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ನಡೆಸಿರುವುದು ಹೊಸ ಸಾಧನೆಯಾಗಿದೆ. ಕಿವುಡುತನದಿಂದ ಸಂವಹನದಿಂದ ದೂರ ಉಳಿದಿದ್ದ ಮಕ್ಕಳು ಮುಖ್ಯವಾಹಿನಿಗೆ ಬಂದಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 8 ರಿಂದ 10 ಲಕ್ಷ ರು. ಖರ್ಚಾಗುವ ಶಸ್ತ್ರಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ಮಾಡಿಕೊಡುತ್ತಿರುವುದು ಬಡವರಿಗೆ ನೆಮ್ಮದಿ ಮೂಡಿಸಿದೆ.
- ಡಾ.ಬಿ.ಜೆ.ಮಹೇಂದ್ರ, ನಿರ್ದೇಶಕರು, ಮಿಮ್ಸ್