ಗಜೇಂದ್ರಗಡದಲ್ಲಿ ಯುರೋಪ್, ಮಧ್ಯ ಏಷ್ಯಾದ ವಲಸೆ ಹಕ್ಕಿ 'ಸಣ್ಣ ಕೊಂಬಿನ ಗೂಬೆ' ಗೋಚರ!

Published : Feb 08, 2026, 07:15 AM IST
Short horned owl

ಸಾರಾಂಶ

ಯುರೋಪ್ ಮತ್ತು ಮಧ್ಯ ಏಷ್ಯಾದ ವಲಸೆ ಹಕ್ಕಿಯಾದ ಸಣ್ಣ ಕೊಂಬಿನ ಗೂಬೆಯನ್ನು ಗಜೇಂದ್ರಗಡದಲ್ಲಿ ಮೊದಲ ಬಾರಿಗೆ ಗುರುತಿಸಲಾಗಿದೆ. ಜೀವ ವೈವಿಧ್ಯ ಸಂಶೋಧಕರು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಈ ಗೂಬೆ, ಕೀಟಗಳನ್ನು ನಿಯಂತ್ರಿಸುವ ಮೂಲಕ ರೈತ ಮಿತ್ರನಾಗಿದ್ದು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಯುರೋಪ್ ಮತ್ತು ಮಧ್ಯ ಏಷ್ಯಾದ ವಲಸೆ ಪಕ್ಷಿಯಾದ ಸಣ್ಣ ಕೊಂಬಿನ ಗೂಬೆ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜೀವ ವೈವಿಧ್ಯ ಸಂಶೋಧಕರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಈ ಗೂಬೆ ಪ್ರಭೇದವನ್ನು ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಬೆಂಗಳೂರು ಮತ್ತು ಹಾಸನ, ತುಮಕೂರಿನಲ್ಲಿ ಪತ್ತೆಯಾಗಿತ್ತು. ಅಲ್ಲದೇ ಕಳೆದ ವರ್ಷ ರಾಯಚೂರು ಜಿಲ್ಲೆಗಳಲ್ಲಿ ಗುರುತಿಸಲಾಗಿತ್ತು.

ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಹೊಂದಿಕೊಂಡಿರುವ ಗುಡ್ಡಗಾಡು ಪ್ರದೇಶದಲ್ಲಿ ಇತ್ತೀಚೆಗೆ ಅವನತಿ ಅಂಚಿನಲ್ಲಿರುವ ಪಕ್ಷಿಗಳು ಹಾಗೂ ಪ್ರಾಣಿಗಳು ಕಾಣಸಿಗುತ್ತಿರುವುದು ಇಲ್ಲಿನ ಜನತೆಗೆ ಹಾಗೂ ಪ್ರವಾಸಿಗರಿಗೆ ಖುಷಿ ತಂದಿದೆ. ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯವಾಗಿ ಗೋಚರಿಸಿದ್ದು ತೀರಾ ವಿರಳ. ಈ ಗೂಬೆ ಪ್ರಭೇದವು ಸಾಮಾನ್ಯವಾಗಿ ಹುಲ್ಲುಗಾವಲು ಮತ್ತು ಸರೋವರ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಸಣ್ಣ ಕೊಂಬೆಯ ಗೂಬೆಗಳು ತಮ್ಮ ವಿಶಿಷ್ಟ ಮತ್ತು ವಿಶೇಷ ನಡವಳಿಕೆಗೆ ಹೆಸರುವಾಸಿಯಾಗಿವೆ. ಅವುಗಳ ಹಾರಾಟ, ಬೇಟೆಯಾಡುವ ಸಾಮರ್ಥ್ಯಗಳು ಮತ್ತು ಪ್ರಣಯ ಪ್ರದರ್ಶನ ತುಂಬಾ ವಿಶೇಷ.

ಸ್ಟ್ರಿಗಿಡೇ ಕುಟುಂಬ

ಹುಲ್ಲುಗಾವಲಿನ ಪರಿಸರ ವ್ಯವಸ್ಥೆಯ ಪ್ರಭೇದವಾಗಿದೆ. ಆಸಿಯೋ ಕುಲಕ್ಕೆ ಸೇರಿದ ಗೂಬೆಗಳನ್ನು ಕಿವಿಯ ಗೂಬೆಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಸಸ್ತನಿಗಳ ಕಿವಿಗಳನ್ನು ಹೋಲುವ ಗರಿಗಳನ್ನು ಹೊಂದಿವೆ, ಈ "ಕಿವಿ" ಗೊಂಚಲುಗಳು ಗೋಚರಿಸಬಹುದು ಅಥವಾ ಗೋಚರಿಸದೇ ಇರಬಹುದು. ಸಣ್ಣ ಕೊಂಬಿನ ಗೂಬೆ ತನ್ನ ಸಣ್ಣ ಟಫ್ಟ್(ಗರಿಗಳ ಗುಚ್ಛ)ಗಳನ್ನು ರಕ್ಷಣಾತ್ಮಕ ಭಂಗಿಯಲ್ಲಿ ಮಾತ್ರ ಪ್ರದರ್ಶಿಸುತ್ತದೆ.

ಸಾಮಾನ್ಯವಾಗಿ ಕೊಂಬಿನ ಗುಚ್ಛ ಗೋಚರಿಸುವುದಿಲ್ಲ. ಸಣ್ಣ ಕೊಂಬಿನ ಗೂಬೆ ಮಧ್ಯಮ ಗಾತ್ರದ ಗೂಬೆಯಾಗಿದ್ದು, 34-43 ಸೆಂಮೀ ಉದ್ದ ಮತ್ತು 206ರಿಂದ 475 ಗ್ರಾಂ ತೂಕವಿದೆ. ಇದು ದೊಡ್ಡ ಕಣ್ಣುಗಳು, ದೊಡ್ಡ ತಲೆ, ಸಣ್ಣ ಕುತ್ತಿಗೆ ಮತ್ತು ಅಗಲವಾದ ರೆಕ್ಕೆಗಳನ್ನು ಹೊಂದಿದೆ. ಈ ಗೂಬೆಗಳು ಚಿಕ್ಕ ಬಲವಾದ ಕಪ್ಪು ಬಣ್ಣದ ಕೊಕ್ಕೆ ಹೊಂದಿವೆ. ಈ ಗೂಬೆ ಪ್ರಭೇದದ ಪುಕ್ಕಗಳು ಬಾಲ ಮತ್ತು ರೆಕ್ಕೆಗಳೊಂದಿಗೆ ಕಂದು ಬಣ್ಣವನ್ನು ಹೊಂದಿರುತ್ತವೆ. ಅವುಗಳ ಹಾರಾಟವು ವೈಶಿಷ್ಟದಿಂದ ಕೂಡಿದೆ.

ಚಿಕ್ಕ ಕೊಂಬಿನ ಗೂಬೆಗಳು ಪಾತ್ರ

ಈ ಗೂಬೆಗಳು ಇಲಿಗಳು, ಹೆಗ್ಗಣಗಳು ಮತ್ತು ಇತರ ಸಣ್ಣ ಸಸ್ತನಿಗಳನ್ನು ಭಕ್ಷಿಸುವುದರ ಮೂಲಕ ಇವುಗಳ ಜನಸಂಖ್ಯೆಯನ್ನು ನಿಯಂತ್ರಿಸುತ್ತವೆ. ಇವು ಕೃಷಿ ಭೂಮಿಯಲ್ಲಿ ಬೆಳೆ ನಾಶ ಮಾಡುವ ಕೀಟಗಳನ್ನು ತಿನ್ನುವುದರಿಂದ ರೈತರಿಗೆ "ಮಿತ್ರಪಕ್ಷಿ"ಯಾಗಿ ಕೆಲಸ ಮಾಡುತ್ತವೆ. ಪರಿಸರ ಸಮತೋಲನ ಹುಲ್ಲುಗಾವಲುಗಳಲ್ಲಿ ಸಣ್ಣ ಪ್ರಾಣಿಗಳ ಅತಿಯಾದ ಸಂತಾನೋತ್ಪತ್ತಿಯನ್ನು ತಡೆಯುವ ಮೂಲಕ ಇವು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುತ್ತವೆ.

ಬಹಳ ಹಿಂದೆಯೇ ಸಣ್ಣ ಕೊಂಬಿನ ಗೂಬೆ ದಾಖಲೆಗಳನ್ನು ಬೆಂಗಳೂರಿನ ಹೆಸರಘಟ್ಟದಲ್ಲಿ(2020) ದಾಖಲಿಸಲಾಗಿತ್ತು. ಆದರೆ ಈಗ ಗಜೇಂದ್ರಗಡ ಬೆಟ್ಟದ ಹುಲ್ಲುಗಾವಲಿನ ಮೇಲೆ ಮಂಜುನಾಥ ಎಸ್. ನಾಯಕ ಸಂಗಮೇಶ್ ಕಡಗದ, ಹರೀಶ ಎನ್., ರಾಜು ಮಂತಾ, ಶರಣು ಗೌಡರ ಮತ್ತು ಗಣೇಶ ಕೊಡಕೇರಿ ಅವರು ಸಣ್ಣ ಕೊಂಬಿನ ಗೂಬೆ, ವಲಸೆ ಹಕ್ಕಿ ಪ್ರಭೇದವನ್ನು ಸೆರೆಹಿಡಿದಿದ್ದಾರೆ.

ಆಹಾರ ಸರಪಳಿ

ಹುಲ್ಲುಗಾವಲುಗಳ ನಾಶ(ಬೆಂಕಿ ಹಚ್ಚುವ ಕೃತ್ಯ) ಮತ್ತು ಕೃಷಿಯಲ್ಲಿ ಕೀಟನಾಶಕಗಳ ಅತಿಯಾದ ಬಳಕೆಯಿಂದ ಈ ಗೂಬೆಗಳ ಸಂತತಿಗೆ ಭೀತಿ ಇದೆ. ಇವುಗಳ ಸಂರಕ್ಷಣೆ ಹುಲ್ಲುಗಾವಲು ಪರಿಸರ ವ್ಯವಸ್ಥೆಯ ಉಳಿವಿಗೆ ಅತ್ಯಗತ್ಯ. ಆಹಾರ ಸರಪಳಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದರು.

ವಲಸೆ

ಈ ವಲಸೆ ಹಕ್ಕಿಗಳ ವಲಸೆ ಕ್ರಮ ಹುಟ್ಟೂರಿನಿಂದ(ಇನಸ್ಟಿಕ್ಟ್ ಬೈ ಬರ್ಥ್) ಬಂದಿರುತ್ತದೆ. ಅವುಗಳ ಪೂರ್ವಜರು ಒಮ್ಮೆ ಒಂದು ಸ್ಥಳಕ್ಕೆ ವಲಸೆ ಬಂದು ಅದು ಸುರಕ್ಷಿತವೆನಿಸಿದರೆ ಪ್ರತಿ ವಲಸೆ ಋತುವಿನಲ್ಲಿ ಆ ಪ್ರದೇಶ ಅಥವಾ ಸುತ್ತಮುತ್ತಲಿನ ಪ್ರದೇಶಕ್ಕೆ ವಲಸೆ ಬರುತ್ತವೆ ಎಂದು ಸಹ ಸಂಶೋಧಕ ಸಂಗಮೇಶ ಕಡಗದ ತಿಳಿಸಿದರು.

PREV
Read more Articles on
click me!

Recommended Stories

ಕನ್ನಡದಲ್ಲಿ ಪರೀಕ್ಷೆ ಇಲ್ಲದಿದ್ದರೆ ರೈಲ್ವೆಗೆ ಬಹಿಷ್ಕಾರ: ಹೊರಟ್ಟಿ ಎಚ್ಚರಿಕೆ
ವಿಜಯನಗರ 3ನೇ ಹಂತದಲ್ಲಿ ಒತ್ತುವರಿಯಾಗಿದ್ದ 140 ಕೋಟಿ ಮೌಲ್ಯದ 7 ಎಕರೆ ಜಾಗ ಎಂಡಿಎ ವಶಕ್ಕೆ