ಭಗ್ನಪ್ರೇಮಿಯಿಂದ ವಧುವಿನ ಮೇಲೆ ಗುಂಡಿನ ದಾಳಿ?

By Kannadaprabha News  |  First Published Jan 10, 2021, 11:52 AM IST

ಅಂಕೋಲಾ ತಾಲೂಕಿನ ಅವರ್ಸಾದ ಸಕಲಬೇಣ ಗ್ರಾಮದಲ್ಲಿ ಘಟನೆ | ಯಾರಿಗೂ ಅಪಾಯವಾಗಿಲ್ಲ, ಆರೋಪಿ ಶೋಧಕ್ಕೆ ಪೊಲೀಸರ ಜಾಲ


ಉತ್ತರಕನ್ನಡ(ಜ.10): ಭಗ್ನಪ್ರೇಮಿಯೊಬ್ಬ ಹುಡುಗಿಯ ಮದುವೆ ದಿನ, ಆಕೆಯ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಶನಿವಾರ ಬೆಳಗಿನ ಜಾವ ಅಂಕೋಲಾ ತಾಲೂಕಿನ ಅವರ್ಸಾದ ಸಕಲಬೇಣ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟಾವಶಾತ್‌ ಯಾರಿಗೂ ಅಪಾಯವಾಗಿಲ್ಲ.

ನಡೆದಿದ್ದೇನು?:

Latest Videos

undefined

ಮೂಲತಃ ಸುಂಕಸಾಳದ ದುಗ್ಗದಬೈಲಿನ ದಿವ್ಯಾ ನಂದಾ ಗಾಂವಕರ ಅವರ ಮದುವೆಯು ಶನಿವಾರ ಅವರ್ಸಾದ ಸಭಾಭವನವೊಂದರಲ್ಲಿ ನಿಶ್ಚಯವಾಗಿದ್ದು, ಕಳೆದ ವಾರದಿಂದ ಅವರ್ಸಾದ ಸಕಲಬೇಣದಲ್ಲಿರುವ ದೊಡ್ಡಮ್ಮನ ಮನೆಯಲ್ಲಿ ಮದುಮಗಳು ಉಳಿದುಕೊಂಡಿದ್ದರು.

ಶನಿವಾರ ಮದುವೆ ಇದ್ದಿದ್ದರಿಂದ ಮನೆಯಲ್ಲಿದ್ದ ಎಲ್ಲರೂ ಬೇಗನೆ ಎದ್ದು ಚಟುವಟಕೆಯಲ್ಲಿದ್ದರು. ಬೆಳಗ್ಗೆ 4.10ಕ್ಕೆ ದಿವ್ಯಾ ಗಾಂವಕರ ಊಟದ ಕೋಣೆಯಲ್ಲಿರುವಾಗ, ಕೋಣೆಯ ಕಿಟಗಿಯಿಂದ ನಾಡ ಬಂದೂಕಿಂದ ಹಾರಿಬಂದ ಗುಂಡುಗಳು ಅಡುಗೆ ಕೋಣೆಯ ಗೋಡೆಗಳನ್ನು ಪ್ರವೇಶ ಮಾಡಿದ್ದವು. ಅದೃಷ್ಟವಶಾತ್‌ ದಿವ್ಯಾ ಗಾಂವಕರಗೆ ಯಾವುದೇ ಅಪಾಯವಾಗಿಲ್ಲ. ಭಾರಿ ಸದ್ದಿಗೆ ಮನೆಯಿಂದ ಹೊರ ಓಡಿ ಬರುತ್ತಿದ್ದಂತೆ ಯಾರೋ ಓಡಿ ಹೋಗುತ್ತಿರುವುದನ್ನು ಮನೆಯವರು ಗಮನಿಸಿದ್ದಾರೆ. ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿದ್ದಾರೆ.

ದೂರಿನಲ್ಲಿರುವ ಆರೋಪಿ:

ಈ ಭಯಾನಕ ಘಟನೆ ನಡೆಯುತ್ತಿದ್ದಂತೆ ಯುವತಿಯ ಸಹೋದರ ಸಂದೀಪ ಉಮೇಶ ತಳೇಕರ ಅವರು ಪೊಲೀಸ್‌ ಠಾಣೆಗೆ ಆಗಮಿಸಿ ವಜ್ರಳ್ಳಿ ರಾಜೇಶ ಗಣಪತಿ ಗಾಂವಕರ ಎಂಬಾತನೇ ಈ ಕೃತ್ಯ ನಡೆಸಿರಬಹುದು. ಈತ ನನ್ನ ಸಹೋದರಿ ದಿವ್ಯಾಳನ್ನು ಪ್ರೀತಿ ಮಾಡುವಂತೆ ಗೋಗರೆಯುತ್ತಿದ್ದ. ಆದರೆ ಈತನನ್ನು ನನ್ನ ತಂಗಿ ನಿರಾಕರಿಸಿದ್ದಳು. ಈ ಹಿನ್ನೆಲೆ ದಿವ್ಯಾಳನ್ನು ಕೊಲೆ ಮಾಡುವ ಉದ್ದೇಶದಿಂದ ಈತನೇ ಗುಂಡು ಹಾರಿಸಿರಬಹುದು. ಅವನನ್ನು ವಿಚಾರಣೆಗೆ ಒಳಪಡಿಸಿ, ನಮಗೆ ರಕ್ಷಣೆಗೆ ಒದಗಿಸಿ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಯಾರೀತ ರಾಜೇಶ?:

ರಾಜೇಶನ ಪೂರ್ವಾಪರಗಳನ್ನು ಅವಲೋಕಿಸಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈತ 2013ರಲ್ಲಿ ಯಲ್ಲಾಪುರಲ್ಲಿ ನಡೆದ ಕೊಲೆ ಪ್ರಕರಣ ಆರೋಪಿ. ಅಲ್ಲದೇ 2017ರಲ್ಲಿ ವಜ್ರಳ್ಳಿಯ ಹೈಲ್ಯಾಂಡ್‌ ಹೊಟೇಲ್‌ ಬಳಿ ರಾತ್ರಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳ ಸಿಬ್ಬಂದಿಗಳಿರುವ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪವೂ ಇದೆ. ಅಲ್ಲದೇ ಅರಣ್ಯಗಳ್ಳತನದ 8 ಪ್ರಕರಣಗಳು ದಾಖಲಾಗಿದೆ. ಇವೆಲ್ಲ ಪ್ರಕಣಗಳ ಮೇಲೆ ನ್ಯಾಯಾಲಯದಿಂದ ಜಾಮೀನು ಪಡೆದ ರಾಜೇಶ ವಜ್ರಳ್ಳಿಯಲ್ಲೆ ಕೆಲಸ ಮಾಡಿಕೊಂಡಿದ್ದ.

ಕೇಸ್‌ ದಾಖಲಿಸಿದ್ದ ಕುಟುಂಬದವರು:

ರಾಜೇಶ ತಂದೆ ಗಣಪತಿ ಗಾಂವಕರ ಅವರು ಜ. 6ರಂದು ಅಂಕೋಲಾ ಠಾಣೆಯಲ್ಲಿ, ನನ್ನ ಮಗ ರಾಜೇಶ ಜ. 5ರಂದು ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಜೇಶ ಪತ್ತೆಗೆ ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆಯೆ ರಾಜೇಶನ ವಿರುದ್ಧ ಕೊಲೆ ಪ್ರಯತ್ನ ಆರೋಪದ ಎದುರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಧಿಕಾಗೆ ಸಿಸಿಬಿ ಸಂಕಷ್ಟ: ಮಂಡ್ಯ ಅಭಿಮಾನಿಯಿಂದ ಉರುಳು ಸೇವೆ

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬದ್ರಿನಾಥ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಕೃಷ್ಣಾನಂದ ನಾಯ್ಕ, ಪಿಎಸ್‌ಐ ಸಂಪತ್ತು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸ್‌ ಭದ್ರತೆಯಲ್ಲಿ ಮದುವೆ

ಗುಂಡಿನ ದಾಳಿಯಿಂದ ಆತಂಕಗೊಂಡಿದ್ದ ವಧುವಿನ ಕುಟುಂಬದವರಿಗೆ ಪೊಲೀಸ್‌ ಭದ್ರತೆ ನೀಡಿ ವಿವಾಹ ಕಾರ್ಯವನ್ನೂ ಸುಗಮವಾಗಿ ನಡೆಸಲು ಅವಕಾಶ ಒದಗಿಸಲಾಯಿತು.

click me!