
ಮೋಹನ ಹಂಡ್ರಂಗಿ
ಬೆಂಗಳೂರು [ಸೆ.01]: ನಷ್ಟದ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಸೌರವಿದ್ಯುತ್ ಬಳಕೆ ಮಾಡಿಕೊಂಡು ವಿದ್ಯುತ್ ಬಿಲ್‌ನಲ್ಲಿ ಉಳಿತಾಯ ಮಾಡಲು ಮುಂದಾಗಿದೆ. ಇದಕ್ಕಾಗಿ ನಿಗಮಕ್ಕೆ ಸೇರಿದ ಕಟ್ಟಡಗಳ ಮೇಲೆ ಸೌರವಿದ್ಯುತ್ ಉತ್ಪಾದನೆ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದೆ.
ಸುಮಾರು 22.05 ಕೋಟಿ ರು. ವೆಚ್ಚದಲ್ಲಿ ನಿಗಮದ 9 ಸಂಚಾರ ಸಾಗಣೆ ನಿರ್ವಹಣಾ ಕೇಂದ್ರ(ಟಿಟಿಎಂಸಿ), 45 ಘಟಕ (ಡಿಪೋ), ಎರಡು ಪ್ರಮುಖ ಬಸ್ ನಿಲ್ದಾಣ ಹಾಗೂ ಮೂರು ಕೇಂದ್ರೀಯ ಕಾರ್ಯಾಗಾರಗಳ ಕಟ್ಟಡಗಳ ಮೇಲೆ ಸೌರವಿದ್ಯುತ್ ಉತ್ಪಾದಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಟೆಂಡರ್ ಆಹ್ವಾನಿಸಲಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಬಿಎಂಟಿಸಿ ವಿದ್ಯುತ್ ಶುಲ್ಕದ ರೂಪದಲ್ಲಿ ಪ್ರತಿ ತಿಂಗಳು ಬೆಸ್ಕಾಂಗೆ ಸುಮಾರು 36 ಲಕ್ಷ ರು. ದಂತೆ ವಾರ್ಷಿಕ 4.32 ಕೋಟಿ ರು. ಪಾವತಿ ಮಾಡುತ್ತಿದೆ. ಸೋಲಾರ್ ಉತ್ಪಾದಿತ ವಿದ್ಯುತ್ ಬಳಕೆಯಿಂದ ನಿಗಮಕ್ಕೆ ವಾರ್ಷಿಕ 4.32 ಕೋಟಿ ರು. ಉಳಿತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ನಿಗಮದ ಕಟ್ಟಡಗಳನ್ನು ಬಳಸಿಕೊಂಡು ‘ಸೋಲಾರ್ ಪ್ಯಾನೆಲ್’ ಅಳವಡಿಸಿ ಮಾಸಿಕ 5 ಸಾವಿರ ಕಿಲೋ ವ್ಯಾಟ್ (4.50 ಲಕ್ಷ ಯೂನಿಟ್) ಸೌರ ವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸೋಲಾರ್ ಪ್ಯಾನೆಲ್ ಅಳವಡಿಸಿ ವಿದ್ಯುತ್ ಉತ್ಪಾದಿಸಲು ಕನಿಷ್ಠ ಒಂದು ವರ್ಷ ಸಮಯ ಬೇಕಾಗುತ್ತದೆ. ಹಾಗಾಗಿ 2020ರ ಅಂತ್ಯದ ವೇಳೆಗೆ ಎಲ್ಲ ಪ್ರಕ್ರಿಯೆ ಮುಗಿದು ಟಿಟಿಎಂಸಿಗಳು, ಡಿಪೋಗಳು ಹಾಗೂ ಪ್ರಮುಖ ಬಸ್ ನಿಲ್ದಾಣಗಳನ್ನು ಸೌರ ವಿದ್ಯುತ್‌ನಿಂದ ನಿರ್ವಹಣೆ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ವೆಚ್ಚಕ್ಕೆ ಕತ್ತರಿ: ಸತತ ನಾಲ್ಕು ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿರುವ ಬಿಎಂಟಿಸಿ ನಿಗಮದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಖರ್ಚು-ವೆಚ್ಚಗಳಿಗೆ ಕತ್ತರಿ ಹಾಕುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಮಾರ್ಗಗಳಲ್ಲಿ ಬಸ್ ಸಂಖ್ಯೆ ಕಡಿತಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ. ಇದರ ಬೆನ್ನಲ್ಲೇ ವಿದ್ಯುತ್ ಶುಲ್ಕ ಉಳಿಸಲು ತಮ್ಮದೇ ಸಂಪನ್ಮೂಲ ಬಳಸಿಕೊಂಡು ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಿದೆ.
ಸೋಲಾರ್ ಪ್ಯಾನೆಲ್ : ಬಿಎಂಟಿಸಿ ನಿಗಮದ ಯಶವಂತಪುರ, ಕೆಂಗೇರಿ, ದೊಮ್ಮಲೂರು, ಐಟಿಪಿಎಲ್, ಜಯನಗರ, ಕೋರಮಂಗಲ, ಬನಶಂಕರಿ, ಬನ್ನೇರುಘಟ್ಟಹಾಗೂ ವಿಜಯನಗರ ಟಿಟಿಎಂಸಿ, ಶಿವಾಜಿನಗರ ಬಸ್ ನಿಲ್ದಾಣ, ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಮೂರು ಕೇಂದ್ರೀಯ ಕಾರ್ಯಾಗಾರಗಳ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲು ತೀರ್ಮಾನಿಸಲಾಗಿದೆ.
ಬೆಸ್ಕಾಂ ಜತೆಗೆ ಒಪ್ಪಂದ : ಬಿಎಂಟಿಸಿ ಸೌರ ವಿದ್ಯುತ್ ಉತ್ಪಾದನೆ ಸಂಬಂಧ ಬೆಸ್ಕಾಂ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಬಿಎಂಟಿಸಿ ‘ಬೈ ಡೈರೆಕ್ಷನಲ್ ಮೀಟರ್’ ಅಳವಡಿಕೆ ಮಾಡುವುದರಿಂದ ಬಳಕೆಯಾಗುವ ಸೌರ ವಿದ್ಯುತ್ ಹಾಗೂ ಬೆಸ್ಕಾಂ ವಿದ್ಯುತ್ ಲೆಕ್ಕ ಸಿಗಲಿದೆ. ಒಂದು ವೇಳೆ ಉತ್ಪಾದನೆಗಿಂತ ಹೆಚ್ಚು ಬಳಕೆ ಮಾಡಿದರೆ, ಬೆಸ್ಕಾಂಗೆ ಶುಲ್ಕ ಪಾವತಿಸಬೇಕು. ಉತ್ಪಾದನೆಗಿಂತ ಕಡಿಮೆ ಬಳಕೆ ಮಾಡಿದರೆ ಹೆಚ್ಚುವರಿ ವಿದ್ಯುತ್‌ಗೆ ಬೆಸ್ಕಾಂ, ಬಿಎಂಟಿಸಿಗೆ ಹಣ ಪಾವತಿಸಲಿದೆ.
ಬಿಎಂಟಿಸಿಯ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಸಂಬಂಧ ಯೋಜನೆ ರೂಪಿಸಿ, ಟೆಂಡರ್ ಆಹ್ವಾನಿಸಲಾಗಿದೆ. ನಿಗಮಕ್ಕೆ ವಿದ್ಯುತ್ ಶುಲ್ಕ ಉಳಿತಾಯದ ಜತೆಗೆ ನಿಗಮದ ಟಿಟಿಎಂಸಿ ಕೇಂದ್ರಗಳನ್ನು ಸುಸ್ಥಿರಗೊಳಿಸುವುದು ಈ ಯೋಜನೆಯ ಪ್ರಮುಖ ಉದೇಶವಾಗಿದೆ.
-ಸಿ.ಶಿಖಾ, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ.