ಮತ್ತೆ ಗಡಿ ವಿವಾದ ಕೆದಕಿದ ಶಿವಸೇನೆ| ಶಿವಸೇನೆ ಮುಖಪತ್ರ ಸಾಮ್ನಾದಲ್ಲಿ ಕರ್ನಾಟಕ ಬಿಜೆಪಿ ಸರ್ಕಾರ ವಿರುದ್ಧ ಲೇಖನ ಪ್ರಕಟ| ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ನ್ಯಾಯ ಕೇಳಿದ್ರೆ ಗುಂಡು ಬೀಳುತ್ತೆ| ನ್ಯಾಯ ಕೇಳಿದ್ರೆ ಬಂದೂಕಿನ ಗುಂಡು ಬೀಳುತ್ತೆ ಅಂತಾ ಖಾತ್ರಿಯಾಗಿದೆ ಎಂದು ಬರೆದುಕೊಂಡ ಶಿವಸೇನೆ| ಪದೆ ಪದೇ ಗಡಿವಿವಾದ ಕೆದಕುತ್ತಿದ್ದರೂ ರಾಜ್ಯ ಸರ್ಕಾರ ಮೌನ|
ಬೆಳಗಾವಿ(ಡಿ.28): ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಧ್ಯೆ ಇರುವ ಗಡಿ ವಿವಾದವನ್ನು ಶಿವಸೇನೆ ಪಕ್ಷ ಮತ್ತೆ ಕೆದಕಿದೆ. ಗಡಿ ವಿವಾದದ ಸಂಬಂಧ ಶಿವಸೇನೆ ಮುಖಪತ್ರ ಸಾಮ್ನಾದಲ್ಲಿ ಕರ್ನಾಟಕ ಬಿಜೆಪಿ ಸರ್ಕಾರ ವಿರುದ್ಧ ಲೇಖನ ಪ್ರಕಟವಾಗಿದೆ.
ಲೇಖನದಲ್ಲಿ ಏನಿದೆ?
ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಅವರ ಹೇಳಿಕೆಯನ್ನ ಪ್ರಸ್ತಾಪಿಸಿ 'ಸಾಮ್ನಾ'ದಲ್ಲಿ ಲೇಖನವೊಂದು ಪ್ರಕಟವಾಗಿದೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ನ್ಯಾಯ ಕೇಳಿದ್ರೆ ಗುಂಡು ಬೀಳುತ್ತೆ, ನ್ಯಾಯ ಕೇಳಿದ್ರೆ ಬಂದೂಕಿನ ಗುಂಡು ಬೀಳುತ್ತೆ ಅಂತಾ ಖಾತ್ರಿಯಾಗಿದೆ. ಒಂದೆಡೆ ತಮ್ಮದು ಹಿಂದೂತ್ವ ಪಕ್ಷ ಅಂತಾ ಬಿಜೆಪಿ ಹೇಳಿಕೊಳ್ಳುತ್ತದೆ. ಮತ್ತೊಂದೆಡೆ ಎಂಇಎಸ್ ನಾಯಕರನ್ನು ಗುಂಡಿಕ್ಕಿ ಎಂಬ ಹೇಳಿಕೆಗಳು ಕೇಳಿ ಬರುತ್ತಿವೆ. ಮರಾಠಿ ಭಾಷಿಕರು ಸಹ ಹಿಂದೂಗಳೇ ಇದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾ ಧ್ವಜ ಹಾರಿಸಿದರೆ ಕ್ರಮ ಕೈಗೊಳುತ್ತಾರೆ. ಇದೇನಾ ನಿಮ್ಮ ಹಿಂದೂತ್ವ? ಅಂತಾ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಲೇಖನ ಪ್ರಕಟವಾಗಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕರ್ನಾಟಕದ ಗಡಿಭಾಗಗಳಾದ ಬೆಳಗಾವಿ, ನಿಪ್ಪಾಣಿ, ಕಾರವಾರ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ(POK) ಅಂತಾ ಹೇಳಿಕೆ ನೀಡಿದ್ದರು. ಠಾಕ್ರೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆಯನ್ನು ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಅವರು ತೀವ್ರವಾಗಿ ಖಂಡಿಸಿದ್ದರು. ಗಡಿ ವಿವಾದ ಕ್ಯಾತೆ ತಗೆಯುವ ಎಂಇಎಸ್ ನಾಯಕರ ವಿರುದ್ಧ ಭೀಮಾಶಂಕರ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಎಂಇಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹಾಕಬೇಕು ಎಂದು ಹೇಳಿದ್ದರು.
ಈ ಹೇಳಿಕೆಯನ್ನೇ ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಾಮ್ನಾದಲ್ಲಿ ಲೇಖನ ಪ್ರಕಟವಾಗಿದೆ. ಶಿವಸೇನೆ ಪದೆ ಪದೇ ಗಡಿವಿವಾದ ಕೆದಕುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಮೌನ ವಹಿಸಿದೆ. ರಾಜ್ಯ ಸರ್ಕಾರದ ನಡೆಗೆ ಕನ್ನಡ ಪರ ಸಂಘಟನೆಗಳ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿವೆ.