‘ಶಿವಾನಂದ ವೃತ್ತ ಸ್ಟೀಲ್‌ ಬ್ರಿಜ್‌ 2020ರ ಮೇ ವೇಳೆಗೆ ಪೂರ್ಣ’

By Kannadaprabha NewsFirst Published Aug 22, 2019, 8:54 AM IST
Highlights

ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಮತ್ತೊಮ್ಮೆ ತನ್ನ ಡೆಡ್ ಲೈನ್ ಕಳೆದಿದೆ. 2020ರ ವೇಳೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಮೇಯರ್ ಹೇಳಿದ್ದಾರೆ.

ಬೆಂಗಳೂರು [ಆ.22]:  ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆಯ ನಕ್ಷೆ ಬದಲಾವಣೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, 2020ರ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಮೇಯರ್‌ ಗಂಗಾಂಬಿಕೆಗೆ ಮಾಹಿತಿ ನೀಡಿದ್ದಾರೆ.

ಬುಧವಾರ ಮೇಯರ್‌ ಗಂಗಾಂಬಿಕೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ನಗರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ರಮೇಶ್‌, ಯೋಜನೆ ಆರಂಭದಲ್ಲಿ 326.25 ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಿಸುವುದಕ್ಕೆ ತೀರ್ಮಾನಿಸಿ, ಕಾಮಗಾರಿ ಆರಂಭಿಸಲಾಯಿತು. ಆದರೆ, ನಂತರದಲ್ಲಿ ಸೇತುವೆಯ ಉದ್ದವನ್ನು 482 ಮೀಟರ್‌ಗೆ ಹೆಚ್ಚಿಸಿದ್ದರಿಂದ ಮೇಲ್ಸೇತುವೆ ಕಂಬಗಳ ಸಂಖ್ಯೆ 6 ರಿಂದ 16ಕ್ಕೆ ಹೆಚ್ಚಳವಾಗಿ ಭೂಸ್ವಾಧೀನದ ಪ್ರಮಾಣ ಅಧಿಕಗೊಂಡಿದ್ದರಿಂದ ಯೋಜನೆಯ ಮೊತ್ತ .49 ಕೋಟಿಗಳಿಂದ .60 ಕೋಟಿಗೆ ಹೆಚ್ಚಳವಾಯಿತು. ಜತೆಗೆ ನಕ್ಷೆ ಬದಲಾವಣೆ ಮತ್ತು ಯೋಜನೆಯ ಮೊತ್ತ ಹೆಚ್ಚಳÜಕ್ಕೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಆದರೆ, ಸರ್ಕಾರ ಇನ್ನೂ ಅನುಮೋದನೆ ನೀಡದೇ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಸರ್ಕಾರ ಅನುಮೋದನೆ ನೀಡಿದ ಕೂಡಲೇ ಕಾಮಗಾರಿ ಮುಗಿಸುತ್ತೇವೆ ಎಂದು ತಿಳಿಸಿದರು.

 ‘2 ನೀರು, 2 ಸ್ಯಾನಿಟರಿ ಕೊಳವೆ ಬದಲಿಸಬೇಕು’

2017ರ ಜೂನ್‌ನಿಂದ ಆರಂಭವಾದ ಕಾಮಗಾರಿ ಈಗಾಗಲೇ ಎರಡು ವರ್ಷ ಪೂರ್ಣಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಮೂರು ನೀರು ಹಾಗೂ ಎರಡು ಸ್ಯಾನಿಟರಿ ಕೊಳವೆ ಬದಲಾಯಿಸಬೇಕಿದೆ. ಆ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಒಟ್ಟಾರೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಒಂಬತ್ತು ತಿಂಗಳು ಅಂದರೆ, 2020ರ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ರಮೇಶ್‌ ಅವರು ಮೇಯರ್‌ಗೆ ಮಾಹಿತಿ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಗಂಗಾಂಬಿಕೆ, ಸರ್ಕಾರದಿಂದ ಅನುಮೋದನೆ ಸಿಕ್ಕ ಕೂಡಲೇ ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಮುಗಿಸಬೇಕು. ಜಲಮಂಡಳಿ ಅಧಿಕಾರಿಗಳ ಜತೆ ಸಭೆ ನಡೆಸಿ ಕೊಳವೆ ತ್ವರಿತವಾಗಿ ಬದಲಾಯಿಸುವಂತೆ ಸೂಚಿಸಿದರು.

ಅಲ್ಲದೇ ಶಿವಾನಂದ ವೃತ್ತದ ಬಳಿಯ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಮಳೆ ನೀರು ನಿಂತಿರುವುದನ್ನು ಕಂಡ ಮೇಯರ್‌, ಗುತ್ತಿಗೆದಾರರನ್ನು ಕರೆಸಿ ಕೂಡಲೆ ದುರಸ್ತಿ ಕಾಮಗಾರಿ ನಡೆಸುವಂತೆ ಸೂಚಿಸಿದರು. ಸೇತುವೆ ಕಾಮಗಾರಿ ಮುಗಿಯುವವರೆಗೆ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ತಾಕೀತು ಮಾಡಿದರು.

click me!