
ಶಿವಮೊಗ್ಗ[ಆ.09]: ಶಿವಮೊಗ್ಗ ನಗರ ಕ್ಷೇತ್ರ ಶಾಸಕರು ಯಾರು? ಕೆ.ಬಿ. ಪ್ರಸನ್ನಕುಮಾರ್, ಸಾಗರಕ್ಕೆ ಕಾಗೋಡು ತಿಮ್ಮಪ್ಪ, ತೀರ್ಥಹಳ್ಳಿಗೆ ಕಿಮ್ಮನೆ ರತ್ನಾಕರ್, ಸೊರಬ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾರದಾ ಪೂರ್ಯನಾಯ್ಕ್, ಇನ್ನು ಭದ್ರಾವತಿ ಕ್ಷೇತ್ರಕ್ಕೆ ಎಂ.ಜೆ. ಅಪ್ಪಾಜಿ!
ಅತ್ಯಾಶ್ಚರ್ಯ ಆಗಿರಬೇಕಲ್ಲವೇ? ಖಂಡಿತಾ, ಏಕೆಂದರೆ, ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ http://www.shimoga.nic.in/zpshimoga ವೆಬ್‌ಸೈಟ್ ಜಾಲಾಡುವವರಿಗೆ ಸಿಗುವ ಶಿವಮೊಗ್ಗ ಜಿಲ್ಲೆ ಶಾಸಕರು ಇವರೇ!
ಹೌದು. ನಿಮ್ಮ ಊಹೆ ಖಂಡಿತಾ ನಿಜ. ಇದು ನೂತನ ಶಾಸಕರ ಹೆಸರುಗಳನ್ನು ಇನ್ನೂ ಅಪ್‌ಡೇಟ್ ಮಾಡದಿರುವುದಕ್ಕೆ ಸಾಕ್ಷಿ. ಹಿಂದಿನ ಅವಧಿಯ ಶಾಸಕರ ಹೆಸರುಗಳೆ ವೆಬ್‌ಸೈಟ್‌ನಲ್ಲಿ ಗೋಚರಿಸುತ್ತಿವೆ. ಇದರಿಂದ ಜನರಿಗೆ ಗೊಂದಲವೋ ಗೊಂದಲ ಆಗುತ್ತಿದೆ. ಈಗಾಗಲೇ ವಿಧಾನಸಭೆಗೆ ಚುನಾವಣೆ ನಡೆದು, ಶಾಸಕರು ಆಯ್ಕೆಯಾಗಿ 3 ತಿಂಗಳುಗಳೇ ಕಳೆದಿವೆ. ಶಿವಮೊಗ್ಗ ನಗರ ಕ್ಷೇತ್ರಕ್ಕೆ ಕೆ.ಎಸ್. ಈಶ್ವರಪ್ಪ, ತೀರ್ಥಹಳ್ಳಿ ಕ್ಷೇತ್ರಕ್ಕೆ ಆರಗ ಜ್ಞಾನೇಂದ್ರ, ಸೊರಬಕ್ಕೆ ಕುಮಾರ್ ಬಂಗಾರಪ್ಪ, ಗ್ರಾಮಾಂತರಕ್ಕೆ ಅಶೋಕ್ ನಾಯ್ಕ್, ಸಾಗರಕ್ಕೆ ಹರತಾಳು ಹಾಲಪ್ಪ ಹಾಗೂ ಭದ್ರಾವತಿ ಕ್ಷೇತ್ರದಿಂದ ಬಿ.ಕೆ. ಸಂಗಮೇಶ್ವರ ಶಾಸಕರಾಗಿದ್ದಾರೆ. ಆದರೆ ಜಿಪಂ ವೆಬ್‌ಸೈಟ್‌ನಲ್ಲಿ ಮಾತ್ರ ಕಳೆದ ಅವಧಿಯ ಶಾಸಕರ ಹೆಸರುಗಳೇ ಚಾಲ್ತಿಯಲ್ಲಿವೆ.
ಅಲ್ಲದೆ, ಜಿಲ್ಲೆಯಿಂದ ರಾಜ್ಯ ವಿಧಾನ ಪರಿಷತ್‌ಗೆ ಪ್ರತಿನಿಧಿಸುತ್ತಿರುವವರ ಹೆಸರುಗಳನ್ನೂ ಆಪ್‌ಡೇಟ್ ಮಾಡದಿರುವುದು ಕಂಡುಬಂದಿದೆ. ಈಗಾಗಲೇ ಪದವೀಧರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ ಆಯ್ಕೆಯಾಗಿದ್ದಾರೆ. ಆದರೆ ಡಿ.ಎಚ್. ಶಂಕರಮೂರ್ತಿ ಅವರ ಹೆಸರಿದೆ. ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ನ ಭೋಜೇಗೌಡ ಪ್ರತಿನಿಧಿಸುತ್ತಿದ್ದಾರೆ. ಆದರೆ ಗಣೇಶ್ ಕಾರ್ಣಿಕ್ ಹೆಸರು ಕಾಣುತ್ತಿದೆ!
ಕಾಗುಣಿತ, ತಪ್ಪಕ್ಷರಗಳೂ ರಾರಾಜಿಸುತ್ತಿವೆ. ಡಿ.ಎಚ್. ಶಂಕರಮೂರ್ತಿ ಬದಲಿಗೆ ಶಂಕರಮುರ್ತಿ ಎಂದಿದೆ. ಬಿ.ಎಸ್. ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ, ಮಧು ಬಂಗಾರಪ್ಪ ಕರ್ನಾಟಕ ಜನ ಪಕ್ಷ ಹೀಗೆ ತೋಚಿದನ್ನು ಗೀಚಿದಂತಿದೆ.
- ವರದಿ: ಕನ್ನಡಪ್ರಭ