ನಾಲ್ಕನೇ ಲಾಕ್‌ಡೌನ್ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ರಸ್ತೆಗಿಳಿದಿದ್ದು, ಮಂಗಳವಾರವಾದ ಇಂದಿನಿಂದ ಶಿವಮೊಗ್ಗದಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಮೇ.19): ಕೊನೆಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಜಿಲ್ಲೆಗಳ ನಡುವೆ ಸಂಚರಿಸುವ ಕಾಲ ಬಂದಿದೆ. ಎರಡು ತಿಂಗಳ ಕಾಲದ ಲಾಕ್‌ಡೌನ್‌ನಿಂದ ಅಂತರ್ ಜಿಲ್ಲಾ ಪ್ರಯಾಣಿಕರಿಗೆ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ.
ಮೇ 19 ಮಂಗಳವಾರದಿಂದ ಅಂತರ್ ಜಿಲ್ಲೆಯ ನಡುವೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸಲಿದ್ದು, ಇದಕ್ಕಾಗಿ ಕೆಎಸ್‌ಆರ್‌ಟಿಸಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಲಾಕ್‌ಡೌನ್ 3 ರ ಪ್ರಕಾರ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಸಂಚಾರ ಎಂದಿನಂತೆ ಇರಲಿದ್ದು, ಜೊತೆಗೆ ಅಂತರ್ ಜಿಲ್ಲೆಯ ಪ್ರಯಾಣಕ್ಕೂ ವ್ಯವಸ್ಥೆಯಾಗಿದೆ.
ಬೆಂಗಳೂರು-ಶಿವಮೊಗ್ಗ- ಶಿಕಾರಿಪುರ ಮಾರ್ಗವಾಗಿ ಹುಬ್ಬಳ್ಳಿ, ಶಿವಮೊಗ್ಗ-ಹೊನ್ನಾಳಿ-ಹರಿಹರ, ಶಿವಮೊಗ್ಗ-ಎನ್.ಆರ್.ಪುರ,ಕೊಪ್ಪ, ಶೃಂಗೇರಿ, ಶಿವಮೊಗ್ಗ-ತರಿಕೆರೆ-ಚಿಕ್ಕಮಗಳೂರು, ಶಿವಮೊಗ್ಗ- ಹೊಳೆಹೊನ್ನೂರು - ಚಿತ್ರದುರ್ಗಕ್ಕೆ ಸೀಮಿತ ಬಸ್ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿಗೆ ತೆರಳುವವರು ಆನ್‌ಲೈನ್ ಬುಕ್ಕಿಂಗ್ ಕಡ್ಡಾಯವಾಗಿದೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಬಸ್ ಉಭಯ ಜಿಲ್ಲೆಗಳ ನಡುವೆ ಸಂಚರಿಸಲಿವೆ. ದಾವಣಗೆರೆ ಕಂಟೊನ್ಮೆಂಟ್ ಏರಿಯಾದಲ್ಲಿದ್ದು, ಹರಿಹರದವರೆಗೆ ಮಾತ್ರ ಬಸ್ ಸಂಚರಿಸಲಿದೆ.
ಹೊರರಾಜ್ಯದಿಂದ ಬಂದವರಿಂದಲೇ ಶಿವಮೊಗ್ಗ ಜಿಲ್ಲೆಯ ಜನರ ನೆಮ್ಮದಿಗೆ ಭಂಗ: ಸಚಿವ ಈಶ್ವರಪ್ಪ
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ. ಎರಡು ಸೀಟಿನಲ್ಲಿ ಒಬ್ಬರು ಮತ್ತು ಮೂರು ಸೀಟಿನಲ್ಲಿ ಇಬ್ಬರಿಗೆ ಪ್ರಯಾಣಕ್ಕೆ ಅವಕಾಶವಿದೆ. ಸಾಧ್ಯವಾದಷ್ಟುಆನ್‌ಲೈನ್ ಬುಕ್ಕಿಂಗ್ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಚಾಲನಾ ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗಿದೆ.
ಖಾಸಗಿ ಬಸ್ ಸೇವೆ ಇಲ್ಲ:
ಮಲೆನಾಡಿನಲ್ಲಿ ಖಾಸಗಿ ಬಸ್ಸುಗಳ ಸೇವೆಯೇ ಪ್ರಾಮುಖ್ಯವಾಗಿದೆ. ಆದರೆ ತೆರಿಗೆ ಸಂಬಂಧಿತ ವಿವಾದಗಳಿಂದಾಗಿ ಖಾಸಗಿ ಸಾರಿಗೆ ಸಂಸ್ಥೆಗಳು ತಮ್ಮೆಲ್ಲಾ ಬಸ್ ಸಂಚಾರದ ಪರವಾನಗಿಯನ್ನು ಸರಂಡರ್ ಮಾಡಿವೆ. ಹೀಗಾಗಿ ಮಂಗಳವಾರದಿಂದ ಖಾಸಗಿ ಬಸ್ ಸಂಚಾರ ಇರುವುದಿಲ್ಲ.
ಈ ಹಿಂದಿನ ವ್ಯವಸ್ಥೆಯಲ್ಲಿಯೇ ಬಸ್ ಓಡಿಸುವುದು ನಷ್ಟಎಂಬ ತೀರ್ಮಾನಕ್ಕೆ ಬಂದಿದ್ದ ಖಾಸಗಿ ಸಾರಿಗೆ ವಲಯ ಲಾಕ್‌ಡೌನ್ ಅವಧಿಯಲ್ಲಿ ಕೇವಲ 25 ಜನರನ್ನು ಕೂರಿಸಿಕೊಂಡು ಬಸ್ ಓಡಿಸುವುದು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಸರ್ಕಾರ ತನ್ನ ನೀತಿ ಬದಲಿಸಿಕೊಳ್ಳಬೇಕಾಗಿದೆ. ಹಾಗಿದ್ದಲ್ಲಿ ಮಾತ್ರ ಖಾಸಗಿ ಬಸ್ಸುಗಳು ಓಡಾಡಲಿವೆ. ಆದರೆ ಸರ್ಕಾರ ಇದುವರೆಗೆ ಖಾಸಗಿ ಬಸ್ಸುಗಳ ವಿಚಾರದಲ್ಲಿ ತನ್ನ ನೀತಿಯ ಕುರಿತು ಯಾವುದೇ ನಿಲುವಿಗೆ ಬಂದಂತೆ ಕಾಣುತ್ತಿಲ್ಲ. ಮಲೆನಾಡಿನಲ್ಲಿ ಖಾಸಗಿ ಬಸ್ಸುಗಳ ಸಂಚಾರವಿಲ್ಲದೆ ಸಾರಿಗೆ ವ್ಯವಸ್ಥೆಯೇ ಅಪೂರ್ಣವಾಗುತ್ತದೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಬಯಲು ನಾಡಿಗೂ, ಮಲೆನಾಡಿಗೂ ಸಾರಿಗೆ ವ್ಯವಸ್ಥೆಯಲ್ಲಿನ ಇರುವ ಅಂತರವನ್ನು ಸರ್ಕಾರಕ್ಕೆ ಸರಿಯಾಗಿ ತಿಳಿ ಹೇಳುವ ಕೆಲಸ ನಡೆಯಬೇಕಿದೆ.