ಶಿವಮೊಗ್ಗದ ಸುದ್ದಿಗಳು: ಜಿಲ್ಲೆಯಾದ್ಯಂತ ರೆಸಾರ್ಟ್ ಗಳ ಮೇಲೆ ಪೊಲೀಸರ ದಿಢೀರ್ ಭೇಟಿ, ಶರಾವತಿ ಯೋಜನೆಗೆ ವಿರೋಧ

Published : Aug 18, 2025, 07:42 PM IST
Shivamogga news

ಸಾರಾಂಶ

ಶಿವಮೊಗ್ಗದಲ್ಲಿ ಪೊಲೀಸರು ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿದ್ದಾರೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವಂತೆ ಪರಿಸರಾಸಕ್ತರು ಆಗ್ರಹಿಸಿದ್ದಾರೆ. ತೀರ್ಥಹಳ್ಳಿ ದೇವಾಲಯದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.

ಶಿವಮೊಗ್ಗ: ಜಿಲ್ಲೆಯದ್ಯಂತ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರವರ ನೇತೃತ್ವದಲ್ಲಿ ಸಿಬ್ಬಂಧಿಗಳ ತಂಡವು ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಲಾಡ್ಜ್, ಪೇಯಿಂಗ್ ಗೆಸ್ಟ್ ಮತ್ತು ಹೋಂ ಸ್ಟೇಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ತಪಾಸಣೆಯ ಸಂದರ್ಭದಲ್ಲಿ ಲಾಡ್ಜ್, ಪಿ.ಜಿ. ಮತ್ತು ಹೋಂ ಸ್ಟೇಗಳಿಗೆ ಬಂದು ತಂಗಿರುವ ಗ್ರಾಹಕರ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ನಮೂದು ಮಾಡಿರುವುದನ್ನು ಮತ್ತು ಲಾಡ್ಜ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಬಗ್ಗೆ ಹಾಗೂ ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಸುತ್ತಿರುವ ಬಗ್ಗೆ ಹಾಗೂ ವಿಶೇಷವಾಗಿ ಕಳೆದ 15 ದಿನಗಳಲ್ಲಿ ಬಂದು ತಂಗಿದ್ದ ಗ್ರಾಹಕರ ಮಾಹಿತಿಯನ್ನು ಪರಿಶೀಲನೆ ಮಾಡಿದ್ದಾರೆ. ಆನಂತರ ಲಾಡ್ಜ್, ಪಿಜಿ ಮತ್ತು ಹೋಂ ಸ್ಟೇಗಳ ವ್ಯವಸ್ಥಾಪಕರಿಗೆ ತಂಗಲು ಬರುವ ಗ್ರಾಹಕರುಗಳ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದತೆ ಸಂಪೂರ್ಣ ಮಾಹಿತಿಯನ್ನು ಪಡೆದು ರಿಜಿಸ್ಟರ್ ನಲ್ಲಿ ನಮೂದು ಮಾಡಲು, ಗ್ರಾಹಕರು ನೀಡುವ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಅವರದ್ದೇ ಮೊಬೈಲ್ ನಂಬರ್ ಎಂದು ಖಚಿತ ಪಡಿಸಿಕೊಳ್ಳಲು, ಗ್ರಾಹಕರ ಐಡಿ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಪಡೆಯಲು, ಲಾಡ್ಜ್ ಗೆ ಬರುವ ಗ್ರಾಹಕರ ತಂಗುವ ಉದ್ದೇಶವನ್ನು ಕೇಳಿ ಪಡೆದು ರಿಜಿಸ್ಟರ್ ನಲ್ಲಿ ನೋಂದಾಯಿಸಲು ಸೂಚನೆ ನೀಡಿದ್ದಾರೆ.ಒಂದುವೇಳೆ ಗ್ರಾಹಕರುಗಳ ಬಗ್ಗೆ ಯಾವುದೇ ಅನುಮಾನ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪಶ್ಚಿಮ ಘಟ್ಟಕ್ಕೆ ಮಾರಕ

ಶರಾವತಿ ಕಣಿವೆಯ 18 ಸಾವಿರ ಎಕರೆ ದಟ್ಟ, ನೈಸರ್ಗಿಕ ಅರಣ್ಯವನ್ನು ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ಈಗಾಗಲೇ ನಾಶ ಮಾಡಿದೆ. ಅಳಿದುಳಿದ ಅರಣ್ಯ ಭೂಮಿಯನ್ನೂ ನಾಶ ಮಾಡುವ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಚಳವಳಿ ರೂಪಿಸುವುದು ಸೇರಿ ಪ್ರಮುಖ ನಾಲ್ಕು ನಿರ್ಣಯಗಳನ್ನು ಪರಿಸರಾಸಕ್ತರು ಕೈಗೊಂಡಿದ್ದಾರೆ. ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್ ಹಾಗೂ ಪರಿಸರಾಸಕ್ತರ ಆಶ್ರಯದಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧದ ಜನಾಗ್ರಹ ಸಭೆ ನಡೆಸಿದ ಪರಿಸರಾಸಕ್ತರು, ಶರಾವತಿ ವನ್ಯಜೀವಿ ಧಾಮದ ಗಣನೀಯ ಭಾಗವನ್ನು ನಾಶಪಡಿಸುವ, ಅಳಿವಿನ ಅಂಚಿನಲ್ಲಿರುವ ಸಿಂಹಬಾಲದ ಸಿಂಗಳೀಕಗಳ ನೆಲೆಯನ್ನು ನುಂಗಿಹಾಕುವ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು. ಪರಿಸರಕ್ಕೆ ವಿರುದ್ಧವಾದ ವಿದ್ಯುತ್‌ ಯೋಜನೆ ಬದಲು ಬ್ಯಾಟರಿ ಪವರ್ ಸ್ಟೋರೇಜ್ ಸಿಸ್ಟಂ ಹಾಗೂ ಸ್ಮಾರ್ಟ್ ಗ್ರಿಡ್‌ನಂತಹ ಆಧುನಿಕ ಉಪಕ್ರಮ ಕೈಗೊಳ್ಳಬೇಕು. ಪಂಪ್ ಸ್ಟೋರೇಜ್ ಆರ್ಥಿಕವಾಗಿ ನಷ್ಟದ ಯೋಜನೆ. ಈ ಕಾರಣಗಳಿಂದ ಇದನ್ನು ವಿರೋಧಿಸುತ್ತೇವೆ ಹಾಗೂ ಸರ್ಕಾರ ತಕ್ಷಣವೇ ಯೋಜನೆ ಕೈಬಿಡಬೇಕೆಂದು ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ, ಪರಿಸರ ತಜ್ಞ ಡಾ. ಎಲ್.ಕೆ.ಶ್ರೀಪತಿ,, ಅಖಿಲೇಶ್ ಚಿಪ್ಪಳ್ಳಿ ಮೊದಲಾದವರು ಒತ್ತಾಯಿಸಿದರು.ಲೇಖಕಿ ಶಾರದಾ ಗೋಪಾಲ ಮತ್ತು ನಾಗೇಶ್ ಹೆಗಡೆ ವಿರಚಿತ ಡಾ. ಮಾಧವ ಗಾಡ್ಗೀಳ್ ಅವರ ಆತ್ಮಕತೆಯ ಕನ್ನಡ ಅವತರಣಿಕೆ ಹಾಗೂ ಡಾ. ಎಲ್.ಕೆ.ಶ್ರೀಪತಿ ವಿರಚಿತ ಪಶ್ಚಿಮಘಟ್ಟ ಅಧ್ಯಯನ ವರದಿಗಳ ಸಂಕ್ಷಿಪ್ತ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ರಾಮೇಶ್ವರ ದೇಗುಲದ ಕಳವು ಪ್ರಕರಣದ ಆರೋಪಿ ಬಂಧನ

ತೀರ್ಥಹಳ್ಳಿಯ ರಾಮೇಶ್ವರ ದೇವಾಲಯದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ದಾವಣಗೆರೆ ಜಿಲ್ಲೆಯ ಆರೋಪಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾವಣಗೆರೆಯ ಬಾಷಾ ನಗರದ ನಿವಾಸಿ ಸೈಯದ್ ಉಮರ್ (30) ಬಂಧಿತ ಆರೋಪಿ . ಬಂಧಿತನಿಂದ ಕಳವು ಮಾಡಿದ್ದ 20,523 ನಗದು, 25 ಸಾವಿರ ರೂ. ಮೌಲ್ಯದ 2 ಮೊಬೈಲ್ ಪೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗುಂಜಿ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಇಮ್ರಾನ್ ಬೇಗ್ ನೇತೃತ್ವದಲ್ಲಿ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದ ನಿತ್ಯ ಅನ್ನದಾಸೋಹ ಸಭಾ ಭವನದಲ್ಲಿ ಆಗಸ್ಟ್ 12 ರೈ ರಾತ್ರಿ ಕಳವು ನಡೆದಿತ್ತು.ಕಾಣಿಕೆ ಹುಂಡಿಯ ಹಣ, ಮೊಬೈಲ್ ಪೋನ್ ಕಳ್ಳತನ ಮಾಡಲಾಗಿತ್ತು. ಈ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

PREV
Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ