ಭದ್ರಾವತಿ (ಸೆ.12): ತಾಲೂಕಿನ ಕಂಬದಾಳ್ - ಹೊಸೂರಿನಲ್ಲಿ ಜೀವಂತ ಬೀದಿನಾಯಿಗಳ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಮಪಂಚಾಯಿತಿ ಸದಸ್ಯ , ಪಂಚಾಯಿತಿ ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್ ಸೇರಿದಂತೆ 12 ಮಂದಿಯನ್ನು ಇಂದು ಬಂಧಿಸಲಾಗಿದೆ.
ಭದ್ರಾವತಿ: 150 ನಾಯಿಗಳನ್ನ ಜೀವಂತವಾಗಿ ಹೂತ ದುರುಳರು..!
ಈ ಸಂಬಂಧ ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯ, ಕಾರ್ಯದರ್ಶಿ ಸೇರಿ ಅನೇಕ ಮಂದಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಇದೀಗ 12 ಮಂದಿ ಪ್ರಕರಣ ಸಂಬಂಧ ಬಂಧಿತರಾಗಿದ್ದಾರೆ.
ಎರಡು ಗುಂಡಿಗಳನ್ನ ಜೆಸಿಬಿಯಲ್ಲಿ ಅಗೆದು ಬೀದಿನಾಯಿಗಳನ್ನ ಹೂತು ಹಾಕಲಾಗಿತ್ತು. ಒಂದು ಗುಂಡಿಯಲ್ಲಿ 60 ನಾಯಿಗಳನ್ನು ಹೊರ ತೆಗೆಯಲಾಗಿತ್ತು. ಬಳಿಕ ಪಶುಸಂಗೋಪನೆ ಇಲಾಖೆಯ ವೈದ್ಯರಿಂದ ನಾಯಿಗಳ ಮರುಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಬಳಿಕ ನಾಯಿಗಳ ಮೂಳೆ , ಚರ್ಮ , ಕೂದಲು ಹಾಗೂ ಕಿಡ್ನಿಯನ್ನ ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು.
ಮಾರಕ ಚುಚ್ಚುಮದ್ದನ್ನ ನಾಯಿಗಳಿಗೆ ನೀಡಿ ಗುಂಡಿಯಲ್ಲಿ ಹೂಳಲಾಗಿತ್ತು ಎನ್ನಲಾಗಿದೆ. ಗ್ರಾಮಸ್ಥರ ಪ್ರಕಾರ 150 ಕ್ಕೂ ಹೆಚ್ಚು ಬೀದಿನಾಯಿಗಳನ್ನ ಜೀವಂತ ಹೂತು ಹಾಕಿರುವ ಶಂಕೆ ಇದೆ. ಈ ಸಂಬಂಧ ಎಫ್‌ಐಆರ್ ಪ್ರಕಾರ 120 ಕ್ಕೂ ಹೆಚ್ಚು ನಾಯಿಗಳನ್ನ ಜೀವಂತ ಹೂತುಹಾಕಲಾಗಿದೆ ಎನ್ನಲಾಗಿದೆ.
ಗ್ರಾಮದಲ್ಲಿ ನಾಯಿಗಳ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದಲೇ ಮೈಸೂರಿನಿಂದ ನಾಯಿ ಹಿಡಿಯುವರನ್ನ ಕರೆಯಿಸಲಾಗಿತ್ತು. ಸೆ .3 ರಂದು ಬೀದಿ ನಾಯಿಗಳನ್ನ ಹಿಡಿದ ಟಾಟಾ ಏಸ್ ಚಾಲಕ ತಾಲೂಕಿನ ಎಂಪಿಎಂ ತಮ್ಮಡಿಹಳ್ಳಿ ಅರಣ್ಯದಲ್ಲಿ ಎರಡು ಗುಂಡಿಗಳನ್ನ ಜೆಸಿಬಿಯಿಂದ ಅಗೆದು ಹೂತಿದ್ದನು ಎನ್ನಲಾಗಿದೆ. ಈತ ನಾಯಿಗಳಿಗೆ ಚುಚ್ಚುಮದ್ದು ನೀಡಿ ಸಾಯಿಸಿ ಹೂತು ಹಾಕಿದ್ದನೆನ್ನಲಾಗಿದೆ.