Love Breakup: ಪ್ರಿಯತಮೆ ದೂರವಾದ ಕೋಪಕ್ಕೆ ಇಂಥಾ ಕೃತ್ಯ? ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿ ಬಂಧನ

Published : Aug 31, 2026, 03:37 PM IST
Pagal Premi Shivamogga

ಸಾರಾಂಶ

ಬ್ರೇಕ್‌ಅಪ್ ಬಳಿಕವೂ ಶಿವಮೊಗ್ಗದಲ್ಲಿ ಮಾಜಿ ಪ್ರಿಯತಮೆಯ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಆರೋಪ. ಕೃತ್ಯ ಸಿಸಿಟಿವಿಯಲ್ಲಿ ಸೆರೆ; ಜಯನಗರ ಠಾಣೆ ಪೊಲೀಸರು ಮಣಿಯನ್ನು ಬಂಧಿಸಿದ್ದಾರೆ.

ಶಿವಮೊಗ್ಗ (ಆ.31): ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟ ಇದೀಗ ಆತಂಕಕ್ಕೆ ಕಾರಣವಾಗಿದೆ. ತನ್ನಿಂದ ದೂರವಾಗಿದ್ದ ಪ್ರಿಯತಮೆಯ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಈ ಘಟನೆ ಶಿವಮೊಗ್ಗದ ವೆಂಕಟೇಶ ನಗರದ ಐದನೇ ಕ್ರಾಸ್ ಬಳಿ ನಡೆದಿದೆ. ಮಧ್ಯರಾತ್ರಿ ನಡೆದ ಈ ಕೃತ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಮಿಳುನಾಡು ಮೂಲದ ಮಣಿ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಶಿವಮೊಗ್ಗದ ಕಾಶಿಪುರದಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಮಣಿಗೆ ಅನುಷಾ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು. ಆದರೆ ಮಣಿ ಗಾಂಜಾ ಹಾಗೂ ಮದ್ಯದ ವ್ಯಸನ ಹೊಂದಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅನುಷಾ ಆತನಿಂದ ದೂರವಾಗಿದ್ದರು.

ಆದರೆ ಬ್ರೇಕ್‌ಅಪ್ ಬಳಿಕವೂ ಮಣಿ ಅನುಷಾಳನ್ನು ಬೆಂಬಿಡದೆ ಕಾಡುತ್ತಿದ್ದ ಎನ್ನಲಾಗಿದೆ. ಮಣಿಯ ಕಾಟದಿಂದಾಗಿ ಅನುಷಾ ಕುಟುಂಬ ಶಿವಮೊಗ್ಗದ ಬೊಮ್ಮನಕಟ್ಟೆ, ಕಾಶಿಪುರ ಸೇರಿದಂತೆ ಹಲವು ಕಡೆ ಮನೆ ಬದಲಾಯಿಸಿದ್ದರೂ, ಆತನ ಕಾಟ ಮಾತ್ರ ನಿಂತಿರಲಿಲ್ಲ ಎನ್ನಲಾಗಿದೆ. ಇದರ ನಡುವೆ, ಸುಮಾರು ಒಂದು ವರ್ಷದ ಹಿಂದೆ ಅನುಷಾ ಮತ್ತು ಅಂತೋನಿ ರಾಜ್ ಎಂಬುವವರ ನಿಶ್ಚಿತಾರ್ಥ ನಡೆದಿತ್ತು. ಮುಂದಿನ ತಿಂಗಳು ಮದುವೆ ನಡೆಸುವ ಕುರಿತು ಕುಟುಂಬಸ್ಥರು ಮಾತುಕತೆ ನಡೆಸಿದ್ದರು.

ಇದನ್ನು ತಿಳಿದಿದ್ದ ಮಣಿ, ಅಂತೋನಿ ರಾಜ್ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಅಂತೋನಿ ರಾಜ್ ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೀಗ ಮತ್ತೊಮ್ಮೆ ಅನುಷಾ ಮನೆ ಮುಂದೆ ಬಂದ ಮಣಿ, ರಾತ್ರಿ ಸುಮಾರು 11 ಗಂಟೆಗೆ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಬೆಳಗಿನ ಜಾವ ಸುಮಾರು 2 ಗಂಟೆಗೆ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬ್ರೇಕ್‌ಅಪ್ ಬಳಿಕ ಬ್ಲ್ಯಾಕ್‌ಮೇಲ್

ಅನುಷಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಂತೋನಿ ರಾಜ್‌ಗೆ ಸೇರಿದ ಒಂದು ಬೈಕ್ ಹಾಗೂ ಆಕೆಯ ಸಹೋದರ ಧನುಷ್‌ಗೆ ಸೇರಿದ ಮತ್ತೊಂದು ಬೈಕ್ ಬೆಂಕಿಗಾಹುತಿಯಾಗಿದೆ. ಇಷ್ಟೇ ಅಲ್ಲದೆ, ಬ್ರೇಕ್‌ಅಪ್ ಬಳಿಕ ಅನುಷಾಳಿಗೆ ಮಣಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಹಾಗೂ ಆಗಾಗ್ಗೆ ಹಣ ಪಡೆಯುತ್ತಿದ್ದ ಎನ್ನುವ ಆರೋಪವೂ ಕೇಳಿಬಂದಿದೆ. ಮಣಿಯ ನಿರಂತರ ಕಾಟದಿಂದ ಬೇಸತ್ತ ಅನುಷಾ ಕುಟುಂಬ ಇದೀಗ ಪೊಲೀಸರ ಮೊರೆ ಹೋಗಿದೆ.

ಈ ಸಂಬಂಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಣಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರೇಮದ ಹೆಸರಿನಲ್ಲಿ ಶುರುವಾದ ಪರಿಚಯ.. ಬ್ರೇಕ್‌ಅಪ್ ಬಳಿಕ ಕಿರುಕುಳಕ್ಕೆ ತಿರುಗಿ, ಕೊನೆಗೆ ಬೈಕ್‌ಗಳಿಗೆ ಬೆಂಕಿ ಹಚ್ಚುವ ಹಂತಕ್ಕೆ ತಲುಪಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

PREV
Read more Articles on
click me!

Recommended Stories

ಸರ್ಕಾರವೇ ಬ್ಯಾನ್ ಮಾಡಿದ ಗಿಡಗಳು ಲಾಲ್‌ಬಾಗ್‌ನಲ್ಲಿ ಮಾರಾಟ; ಈ ಗಿಡವಿದ್ದರೆ ಉಸಿರಾಟಕ್ಕೆ ಸಮಸ್ಯೆ ಖಚಿತ!
ಇದೊಂದು ದಾಖಲೆ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಆಗಲಿದೆ ನಿಮ್ಮ ಹೆಸರು!