ಶಿವಮೊಗ್ಗ : ವೃದ್ಧ ದಂಪತಿ ನಿಗೂಢ ಸಾವಿನ ರಹಸ್ಯ ಬಯಲು

Kannadaprabha News   | Kannada Prabha
Published : Jan 22, 2026, 10:12 AM IST
Shivamogga

ಸಾರಾಂಶ

ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿಯಲ್ಲಿ ವೃದ್ಧ ದಂಪತಿಗಳ ನಿಗೂಢ ಸಾವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಹೇಳಿದರು.

ಶಿವಮೊಗ್ಗ : ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿಯಲ್ಲಿ ವೃದ್ಧ ದಂಪತಿಗಳ ನಿಗೂಢ ಸಾವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿಯಲ್ಲಿ ಮಂಗಳವಾರ ಸಂಜೆ ಎರಡು ಶವಗಳು ಪತ್ತೆಯಾಗಿತ್ತು. ಪರಿಶೀಲನೆ ನಡೆಸಿದಾಗ ಚಂದ್ರಪ್ಪ(82)ಮತ್ತು ಜಯಮ್ಮ(72)ರ ಶವ ಪ್ರತ್ಯೇಕ ರೂಂನಲ್ಲಿ ಸಿಕ್ಕಿತ್ತು. ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂದು ಯು.ಡಿ.ಆರ್. ದಾಖಲಿಸಲಾಗಿತ್ತು. ನಂತರ ತನಿಖೆ ಆರಂಭಿಸಿದಾಗ ಮೃತ ದಂಪತಿಗಳ ಸಂಬಂಧಿಕನಿಂದಲೇ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದರು.

ಈ ಪ್ರಕರಣ ಕುರಿತು ಬಿ.ಎ.ಎಂ.ಎಸ್ ವೈದ್ಯನಾಗಿರುವ ಡಾ. ಮಲ್ಲೇಶ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಮೃತ ಚಂದ್ರಪ್ಪ ಅವರ ತಮ್ಮ ಪಾಲಾಕ್ಷಪ್ಪನ ಮಗ, ವೃತ್ತಿಯಲ್ಲಿ ಬಿ.ಎ.ಎಂ.ಎಸ್ ವೈದ್ಯನಾಗಿರುವ ಡಾ. ಮಲ್ಲೇಶ್ ವಿಪರೀತ ಸಾಲದ ಸುಳಿಯಲ್ಲಿ ಸಿಲುಕಿದ್ದ. ಅದನ್ನು ತೀರಿಸಲು ಚಂದ್ರಪ್ಪ ಅವರ ಬಳಿ 15 ಲಕ್ಷ ರು. ಸಾಲ ಕೇಳಿದ್ದ. ಆದರೆ ಅವರು ಹಣ ನೀಡಲು ನಿರಾಕರಿಸಿದ್ದರು. ಇದೇ ದ್ವೇಷ ಹಾಗೂ ಹಣದ ಹಪಾಹಪಿಯಿಂದ ದಂಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ತನಿಖೆಯಲ್ಲಿ ಬಯಲಾಗಿದೆ ಎಂದರು.

ಇಂಜೆಕ್ಷನ್ ನೀಡಿ ಬಚಾವ್ ಆಗಲು ಮುಂದಾಗಿದ್ದ ವೈದ್ಯ: ಶಿವಮೊಗ್ಗದಲ್ಲಿ ಬಿ.ಎ.ಎಂ.ಎಸ್. ವೈದ್ಯನಾಗಿ ಎರಡು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ಮಲ್ಲೇಶ್ ಬಹಳ ಸಾಲ ಮಾಡಿಕೊಂಡಿದ್ದ. ಮೃತ ಚಂದ್ರಪ್ಪನವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂಬುದು ಮಲ್ಲೇಶ್‌ನಿಗೆ ಗೊತ್ತಿತ್ತು. ಮನೆಗೆ ಬಂದವನು ಇಬ್ಬರ ಆರೋಗ್ಯ ವಿಚಾರಿಸಿದ್ದಾನೆ. ಹಳೆಯ ಮೆಡಿಕಲ್ ರಿಪೋರ್ಟ್‌ನ್ನು ಕೇಳಿ ಪಡೆದಿದ್ದಾನೆ. ಅವರಿಗೆ ಕೈ-ಕಾಲು ಗಂಟಿನ ನೋವು ಕಡಿಮೆಯಾಗಲು ಇಂಜೆಕ್ಷನ್ ನೀಡುವುದಾಗಿ ತಿಳಿಸಿ ಚಿಕಿತ್ಸೆ ನೀಡುವ ನೆಪದಲ್ಲಿ ಚಂದ್ರಪ್ಪ ಮತ್ತು ಅವರ ಪತ್ನಿಗೆ ತಲಾ 50 ಎಂ.ಜಿ ಪ್ರೊಫೋಫೋಲ್ ಎಂಬ ಅರಿವಳಿಕೆ ಇಂಜೆಕ್ಷನ್ ನೀಡಿದ್ದಾನೆ. ಅತಿಯಾದ ಡೋಸ್‌ನಿಂದ ದಂಪತಿ ಸಾವನ್ನಪ್ಪುತ್ತಿದ್ದಂತೆಯೇ, ಅವರ ಮೈಮೇಲಿದ್ದ ಸುಮಾರು 80 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾನೆ. ಒಂದೇ ದಿನದಲ್ಲಿ ಕೊಲೆ ಮಾಡಿ, ಚಿನ್ನವನ್ನು ಅಡವಿಟ್ಟು ಸಾಲ ತೀರಿಸಲು ಮುಂದಾಗಿದ್ದ. ಖಾತೆಯಲ್ಲಿ 50 ಸಾವಿರ ರು. ಹಣ ಇಟ್ಟುಕೊಂಡಿದ್ದಾನೆ. ಇದು ಪ್ರೀ ಪ್ಲ್ಯಾನ್ ಕೋಲ್ಡ್ ಬ್ಲಡಡ್ ಮರ್ಡರ್ ಆಗಿದೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ತನಿಖೆಯಲ್ಲಿ ಪಾಲ್ಗೊಂಡ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ತಂಡದಲ್ಲಿದ್ದ ಎಎಸ್‌ಪಿ ಕಾರ್ಯಪ್ಪ, ಮತ್ತು ಬಿ.ರಮೇಶ್, ಭದ್ರಾವತಿ ಡಿವೈಎಸ್‌ಪಿ ಪ್ರಕಾಶ್ ರಾಥೋಡ್, ಸಿಪಿಐ ನಾಗಮ್ಮ, ಪಿಎಸ್‌ಐ ಸುನೀಲ್ ಬಿ. ತೇಲಿ, ಹಳೇನಗರ ಪೊಲೀಸ್ ಠಾಣೆಯ ಎಎಸ್‌ಐ ವೆಂಕಟೇಶ್, ಎಚ್‌ಸಿ ಚಿನ್ನಾನಾಯ್ಕ, ಎಚ್‌ಸಿ ಹಾಲಪ್ಪ, ಪಿಸಿಗಳಾದ ಸುನೀಲ್‌ಕುಮಾರ್, ಕಾಂತ್‌ರಾಜ್, ಮಂಜುನಾಥ್, ಬಸವರಾಜ್ ಇವರಿಗೆ ನಗದು ಬಹುಮಾನ ಘೋಷಿಸಿ ಅಭಿನಂದನೆ ಸಲ್ಲಿಸಿದರು.

ಗೋಷ್ಟಿಯಲ್ಲಿ ಅಡಿಷನಲ್‌ ಎಸ್ಪಿ ಕಾರಿಯಪ್ಪ, ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆ ವೃತ್ತ ನಿರೀಕ್ಷಕಿ ನಾಗಮ್ಮ, ಉಪನಿರೀಕ್ಷಕ ಸುನೀಲ್ ಇದ್ದರು.

ಮಗ ಕರೆ ಮಾಡಿದಾಗ ಪ್ರಕರಣ ಬೆಳಕಿಗೆ

ವೃದ್ಧ ದಂಪತಿಗಳು ಭದ್ರಾವತಿಯ ಭೂತನಗುಡಿ ಏರಿಯಾದಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ಎಂದಿನಂತೆ ಅವರ ಮಗ ವಿಶ್ವನಾಥ್ ದೂರವಾಣಿ ಸಂಪರ್ಕಿಸಲು ಪ್ರಯತ್ನಿಸಿದಾಗ ವೃದ್ಧ ದಂಪತಿಗಳು ಕರೆ ಸ್ವೀಕರಿಸದ ಕಾರಣ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಸುತ್ತಲೂ ಪರಿಚಿತರಿರುವ ನಿವಾಸಿಗಳು ಮನೆಗೆ ಬಂದು ನೋಡಿದಾಗ ಗಂಡ-ಹೆಂಡತಿ ಸಾವಿಗೀಡಾಗಿರುವುದು ಕಂಡು ಬಂದಿದೆ.

ವೇಶ್ಯಾವಾಟಿಕೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ

ನಗರದಲ್ಲಿ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ಹೆಚ್ಚಳವಾಗಿದೆ ಎಂಬ ದೂರಿಗೆ ಪೊಲೀಸರು ಎಲ್ಲ ಲಾಡ್ಜ್‌ಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದಕ್ಕಾಗಿಯೇ ವಿಶೇಷ ತಂಡಗಳನ್ನು ರಚಿಸಲಾಗಿದೆ. ಮನೆಕಳ್ಳತನ ಮತ್ತು ಅಡಿಕೆ ಕಳ್ಳತನ ಬಗ್ಗೆಯೂ ತನಿಖೆ ಕೈಗೊಂಡಿದ್ದು ಆದಷ್ಟುಬೇಗ ನಿಮಗೆ ಫಲಿತಾಂಶ ನೀಡುತ್ತೇವೆ ಎಂದು ಎಸ್ಪಿ ಬಿ.ನಿಖಿಲ್‌ ಹೇಳಿದರು. ರಾತ್ರಿ 8ರಿಂದ 12 ಗಂಟೆಯವರೆಗೆ ವಿಶೇಷ ಗಸ್ತು ಪದ್ದತಿಯನ್ನು ಜಾರಿಗೆ ತರಲಾಗಿದೆ. ‘ಪಬ್ಲಿಕ್ ಐ’ ಎಂಬ ವಿಶೇಷ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದ್ದೇವೆ. ಎಲ್ಲಾ ಕಾಲೇಜುಗಳಲ್ಲಿ ಇಂದಿನಿಂದಲೇ ಡ್ರಗ್ಸ್‌ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Read more Articles on
click me!

Recommended Stories

ಗೆಳೆಯರ ಶವ ನೋಡಿ ಶವಾಗಾರದಿಂದ ಹೊರ ಬರುತ್ತಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ ಸ್ನೇಹಿತ
ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದು ದೇವತೆಗಳ ಬಗ್ಗೆ ಅವಹೇಳನಕ್ಕೆ ‘ಹೈ’ ಕಿಡಿ