ಶಿವಮೊಗ್ಗ ಪ್ರತಿಷ್ಠಿತ ಆಸ್ಪತ್ರೆ ವೈದ್ಯರ ಎಡವಟ್ಟು: ಶಸ್ತ್ರಚಿಕಿತ್ಸೆ ಬಳಿಕ ಕೋಮಾಗೆ ಜಾರಿದ ಮಹಿಳೆ!

Published : Mar 25, 2026, 07:24 PM IST
Shivamogga Hospital Doctor Fault Patient Coma

ಸಾರಾಂಶ

ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಅನಸ್ತೇಶಿಯಾ ಪ್ರಮಾಣ ಮಿತಿ ಮೀರಿದ್ದೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ (ಮಾ.25): ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ಮಹಿಳೆಯೊಬ್ಬರು ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಶಿವಮೊಗ್ಗದ 'ಅಮೃತ ಲೈಫ್ ಕೇರ್' (Amrutha Lifecare) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಅನಸ್ತೇಶಿಯಾ ಓವರ್‌ಡೋಸ್‌ನಿಂದಾಗಿ ಮಹಿಳೆ ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಘಟನೆಯ ವಿವರ:

ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ನಿವಾಸಿ ದೇವಿ ಬಾಯಿ (45) ಎಂಬುವವರು ಹರ್ನಿಯಾ (Hernia) ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮಾರ್ಚ್ 11ರಂದು ಶಿವಮೊಗ್ಗದ ಅಮೃತ ಲೈಫ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ 12ರಂದು ವೈದ್ಯರು ಇವರಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೀಡಲಾದ ಅನಸ್ತೇಶಿಯಾ (ಮತ್ತು ಮದ್ದು) ಪ್ರಮಾಣ ಮಿತಿ ಮೀರಿದ್ದರಿಂದ ಮಾರ್ಚ್ 13ರಿಂದಲೇ ಮಹಿಳೆಯ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಂತಾಗಿದೆ.

ಕೋಮಾಗೆ ಜಾರಿದ ಮಹಿಳೆ:

ಶಸ್ತ್ರಚಿಕಿತ್ಸೆ ಮುಗಿದು ದಿನಗಳೇ ಕಳೆದರೂ ದೇವಿ ಬಾಯಿ ಅವರು ಪ್ರಜ್ಞಾವಸ್ಥೆಗೆ ಬಂದಿಲ್ಲ. ವೈದ್ಯರ ಯಡವಟ್ಟಿನಿಂದಾಗಿ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಯ ವೈದ್ಯರ ಸಲಹೆಯಂತೆ ನಂತರ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಯೂ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ, ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ವೈದ್ಯರ ಉದ್ಧಟತನ ಮತ್ತು ಧಮ್ಕಿ:

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಧನಂಜಯ್ ಎಂಬುವವರ ವಿರುದ್ಧ ಕುಟುಂಬಸ್ಥರು ಕಿಡಿಕಾರಿದ್ದಾರೆ. 'ನಾನು ಮಾಡಿದ್ದೇ ಸರಿ' ಎಂದು ವೈದ್ಯರು ವಾದಿಸುತ್ತಿದ್ದಾರೆ ಎಂದು ದೇವಿ ಬಾಯಿ ಅವರ ಅಳಿಯ ಕಾಂತರಾಜ್ ಮತ್ತು ಸಂಬಂಧಿ ಉಷಾ ನಾಯ್ಕ ದೂರಿದ್ದಾರೆ. ಅಷ್ಟೇ ಅಲ್ಲದೆ, ಆಸ್ಪತ್ರೆಯ ಆಡಳಿತ ಮಂಡಳಿಯು ರೋಗಿಯ ಸಂಬಂಧಿಕರಿಗೆ ಬೆದರಿಕೆ ಹಾಕಿದೆ ಎಂಬ ಆರೋಪ ಕೇಳಿಬಂದಿದೆ. 'ನೀವು ಬೇಕಾದರೆ ಪೊಲೀಸ್ ದೂರು ನೀಡಿ ಅಥವಾ ಕೋರ್ಟ್‌ಗೆ ಹೋಗಿ, ನಮಗೇನೂ ಆಗಲ್ಲ' ಎಂದು ಆಸ್ಪತ್ರೆ ಮಂಡಳಿ ಉದ್ಧಟತನ ತೋರಿದೆ ಎಂದು ಗಾಯಾಳು ಮಹಿಳೆಯ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಕಾನೂನು ಕ್ರಮಕ್ಕೆ ಆಗ್ರಹ:

ಸಾಮಾನ್ಯ ಶಸ್ತ್ರಚಿಕಿತ್ಸೆಗೆಂದು ಬಂದ ಮಹಿಳೆಯ ಜೀವನವನ್ನು ವೈದ್ಯರು ಹಾಳು ಮಾಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ವೈದ್ಯ ಧನಂಜಯ್ ಮತ್ತು ಅಮೃತ ಲೈಫ್ ಕೇರ್ ಆಸ್ಪತ್ರೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆದ ಮರುದಿನದ ವಿಡಿಯೋ ಮತ್ತು ವೈದ್ಯರೊಂದಿಗೆ ನಡೆದ ವಾಗ್ವಾದದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

PREV
Read more Articles on
click me!

Recommended Stories

ಧಾರವಾಡದಲ್ಲಿ ಮಾಜಿ ಕಾರ್ಪೊರೇಟರ್ ಮಗಳ ಅನುಮಾನಾಸ್ಪದ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸವಿತಾ ಹೊಂಗಲಮಠ!
ವಿಧಾನಸೌಧದಲ್ಲಿ 'ಮನಿ ಬ್ಯಾಗ್': ಭಾರೀ ಹಣದೊಂದಿಗೆ ಶಕ್ತಿಸೌಧಕ್ಕೆ ಹೋಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ!