
ಶಿವಮೊಗ್ಗ (ಅ.23): ರಾಜ್ಯದಲ್ಲಿ ಕೆಪಿಎಸ್ಸಿ ನೇಮಕಾತಿ ಅಕ್ರಮದ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪರೀಕ್ಷಾ ಕೇಂದ್ರದಲ್ಲೂ ಭರ್ಜರಿ ಅಕ್ರಮದ ವಾಸನೆ ಬಡಿದಿದೆ. ಹಣ ಕೊಟ್ಟರೆ ಸಾಕು, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಮೊಬೈಲ್ ಹಾಗೂ ಪುಸ್ತಕಗಳನ್ನು ಮುಂದಿಟ್ಟುಕೊಂಡೇ ಪರೀಕ್ಷೆ ಬರೆಯುವ ಕರಾಳ ದಂಧೆಯೊಂದು ಶಿವಮೊಗ್ಗದಲ್ಲಿ ಬಟಾಬಯಲಾಗಿದೆ.
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಕೆಎಸ್ಒಯು ಪ್ರಾದೇಶಿಕ ಕಚೇರಿಯಲ್ಲೇ ಈ ಪರೀಕ್ಷಾ ಅಕ್ರಮದ 'ಮಹಾ ಜಾಲ' ಸಕ್ರಿಯವಾಗಿದ್ದು, ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಅವರ ನೇತೃತ್ವದಲ್ಲೇ ಈ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಲು ವಿಚಿತ್ರ ನಿಯಮ ರೂಪಿಸಲಾಗಿದೆ:
2ನೇ ಮಹಡಿ (ಹಣ ನೀಡಿದವರಿಗೆ): ಒಂದು ವಿಷಯಕ್ಕೆ ₹1,000 ಹಣ ನೀಡಿದ ವಿದ್ಯಾರ್ಥಿಗಳಿಗೆ ಎರಡನೇ ಮಹಡಿಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಯಾವುದೇ ಭಯವಿಲ್ಲದೆ ಸ್ಮಾರ್ಟ್ಫೋನ್, ಗೈಡ್ಗಳು ಹಾಗೂ ಪುಸ್ತಕಗಳನ್ನು ಎದುರಿಗೇ ಇಟ್ಟುಕೊಂಡು ಪರೀಕ್ಷೆ ಬರೆಯಲು ಮುಕ್ತ ಅವಕಾಶವಿದೆ.
1ನೇ ಮಹಡಿ (ಹಣ ನೀಡದವರಿಗೆ): ಯಾವುದೇ ಹಣ ನೀಡದೆ ಪ್ರಾಮಾಣಿಕವಾಗಿ ಬರೆಯಲು ಬರುವ ಬಡ ವಿದ್ಯಾರ್ಥಿಗಳಿಗೆ ಮೊದಲ ಮಹಡಿಯಲ್ಲಿ ಕಟ್ಟುನಿಟ್ಟಿನ ನಿಗಾದಡಿ ಪರೀಕ್ಷೆ ಬರೆಸಲಾಗುತ್ತಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲೇ ಪುಸ್ತಕ ಮತ್ತು ಮೊಬೈಲ್ ನೋಡಿ ನಿರಾತಂಕವಾಗಿ ಉತ್ತರ ಬರೆಯುತ್ತಿರುವ ಆಘಾತಕಾರಿ ವಿಡಿಯೋ ದೃಶ್ಯಾವಳಿಗಳು ಲಭ್ಯವಾಗಿವೆ.
ಪರೀಕ್ಷೆ ಆರಂಭವಾದ ಅರ್ಧ ಗಂಟೆಯ ನಂತರ ಕೊಠಡಿಗೆ ಎಂಟ್ರಿ ಕೊಡುವ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ, ಎಷ್ಟು ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದಾರೆ ಎಂದು ಲೆಕ್ಕ ಹಾಕುತ್ತಾರೆ. ನಂತರ ತಮ್ಮ ಅಧೀನ ಸಿಬ್ಬಂದಿಗಳಾದ ಎಸ್ಡಿಸಿಗಳಾದ ವಿನಯಾ ಕೆ.ಜೆ., ನಿಂಗಾ ನಾಯ್ಕ್, ಅಟೆಂಡರ್ ಯೋಗೇಶ್ ಗೌಡ ಹಾಗೂ ಡೇಟಾ ಎಂಟ್ರಿ ಆಪರೇಟರ್ ಹರೀಶ್ ಅವರನ್ನು ಮುಂದಿಟ್ಟುಕೊಂಡು ಹಣ ವಸೂಲಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿದಿನ ಪರೀಕ್ಷೆ ಮುಗಿದ ತಕ್ಷಣ ಸುಮಾರು 70 ರಿಂದ 100 ವಿದ್ಯಾರ್ಥಿಗಳಿಂದ ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) ಮೂಲಕ ಸ್ಥಳದಲ್ಲೇ ಹಣ ಪಾವತಿಸಿಕೊಳ್ಳಲಾಗುತ್ತಿದೆ.
ಅಕ್ಟೋಬರ್ 7 ರಿಂದ ಆರಂಭವಾಗಿರುವ ಮುಕ್ತ ವಿವಿಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನವೆಂಬರ್ 20 ರವರೆಗೆ ನಡೆಯಲಿವೆ. ದಿನರಾತ್ರಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರಿಶ್ರಮವನ್ನು ಈ ಭ್ರಷ್ಟ ಜಾಲ ಮಣ್ಣುಪಾಲು ಮಾಡುತ್ತಿದೆ. ತಕ್ಷಣವೇ ಉನ್ನತ ಶಿಕ್ಷಣ ಇಲಾಖೆ ಹಾಗೂ ಕೆಎಸ್ಒಯು ಕುಲಪತಿಗಳು ಈ ಕೇಂದ್ರದ ಮೇಲೆ ದಾಳಿ ನಡೆಸಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.