
ಶಿವಮೊಗ್ಗ (ಮಾ.19): ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಶಿವಮೊಗ್ಗ ನಗರದಲ್ಲಿ ಕೆಲ ಹೋಟೆಲ್‌ಗಳು ಬಾಗಿಲು ಮುಚ್ಚಿದರೆ, ಇನ್ನೂ ಕೆಲ ಹೋಟೆಲ್ ಮಾಲೀಕರು ಸೌದೆ ಓಲೆ ಮೊರೆ ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೂ ಗ್ಯಾಸ್ ಬಿಸಿ ತಟ್ಟಿದ್ದು, ಗ್ಯಾಸ್ ಸಿಲಿಂಡರ್ ಸಿಗದ ಕಾರಣಕ್ಕೆ ಬಹುತೇಕ ಕಡೆ ಗೋಬಿ ಮಂಚೂರಿ ಮತ್ತು ಬಜ್ಜಿ ಅಂಗಡಿಗಳು ಬಂದ್ ಆಗಿದ್ದರೆ, ಕೆಲ ಬಜ್ಜಿ ಅಂಗಡಿಯ ಮುಂದೆ ಜನ ಕಾದು ನಿಂತಿದ್ದ ದೃಶ್ಯ ಕಂಡು ಬಂತು. ಇನ್ನು ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನ ಕ್ಯಾಂಟಿನ್ ಬಂದ್ ಮಾಡಲಾಗಿದೆ.
ಆರಂಭಗೊಂಡ ಮೂರೇ ದಿನಕ್ಕೆ ಬಂದ್ ಆದ ಇಂದಿರಾ ಕ್ಯಾಂಟೀನ್: ಹೊಳೆಹೊನ್ನೂರಿನಲ್ಲಿ ಕೇವಲ ಮೂರು ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ಇಂದಿರಾ ಕ್ಯಾಂಟೀನ್ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದಾಗಿ ಮಂಗಳವಾರ ಬಂದ್ ಮಾಡಲಾಯಿತು. ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಅಭಾವ ಉಂಟಾಗಿದ್ದು, ಎಲ್ಲೆಡೆ ಬಿಸಿ ತಟ್ಟಿತ್ತು. ಆದರೆ ಜನರ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ಸಿದ್ಧಗೊಂಡು ತಿಂಗಳುಗಳೇ ಕಳೆದರೂ ಉದ್ಘಾಟನೆ ಆಗದೆ ಇದ್ದುದಕ್ಕೆ ಜನರು ನಿರಾಸೆಗೊಂಡಿದ್ದರು.
ಈ ಬಗ್ಗೆ ಸ್ಥಳೀಯ ಮುಖಂಡರು ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಶನಿವಾರ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಶಾರದಾ ಪೂರ್ಯನಾಯ್ಕ, ಅಧಿಕಾರಿಗಳ ತಂಡ, ಹಾಗೂ ಸ್ಥಳೀಯ ಮುಖಂಡರೊಡಗೂಡಿ ಉದ್ಘಾಟನೆ ನೆರವೇರಿಸಲಾಗಿತ್ತು.
ನಂತರದ ಎರಡೂ ದಿನಗಳಲ್ಲಿ ನಿರೀಕ್ಷೆಗೂ ಮೀರಿದ ಜನರು ತಿಂಡಿ ಹಾಗೂ ಊಟ ಮಾಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಆದರೆ ಉದ್ಘಾಟನೆಗೊಂಡು ಮೂರೇ ದಿನದಲ್ಲಿ ಗ್ಯಾಸ್ ಸಿಲಿಂಡರ್ ಸಿಗದ ಕಾರಣ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ ಎಂಬ ಬೋರ್ಡ್ ಗೇಟಿಗೆ ನೇತು ಹಾಕಲಾಗಿದೆ. ಇದರಿಂದ ಮಂಗಳವಾರ ಬೆಳಗ್ಗೆ ತಿಂಡಿ ತಿನ್ನಲು ಬಂದ ಜನರಿಗೆ ನಿರಾಸೆಗೊಂಡರು.
ಈ ಮೊದಲೇ ವಿಪಕ್ಷದ ಸ್ಥಳೀಯ ಮುಖಂಡರು ಯುದ್ಧದಿಂದಾಗಿ ಅಡುಗೆ ಅನಿಲ ಅಭಾವ ಸೃಷ್ಟಿ ಆಗುವ ಬಗ್ಗೆ ಸೂಚನೆ ನೀಡಿದ್ದರು. ಇಷ್ಟು ದಿನ ಸುಮ್ಮನಿದ್ದು ಈಗ ತರಾತುರಿಯಲ್ಲಿ ಉದ್ಘಾಟಿಸುವ ಬದಲು ಯುದ್ಧ ನಿಂತ ನಂತರ ಉದ್ಘಾಟನೆ ಮಾಡುವಂತೆ ಸಲಹೆ ಮಾಡಿದ್ದರು.
ಹೊಳೆಹೊನ್ನೂರಿನ ಇಂದಿರಾ ಕ್ಯಾಂಟೀನ್ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಇಲ್ಲದೆ ಬಂದ್ ಆಗಿರುವುದು.