
ಶಿವಮೊಗ್ಗ: 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ದಿನದಂದು ಶಿಕಾರಿಪುರದ ಕಡೇನಂದಿಹಳ್ಳಿ ಶಾಲೆಯ 12 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಸೌಭಾಗ್ಯ ಒದಗಿ ಬಂದಿತ್ತು.
80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಇತಿಹಾಸದಲ್ಲಿ ಉಳಿಯುವಂತೆ ಸಿದ್ಧತೆ ಮಾಡಿಕೊಂಡಿದ್ದ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ವಿಶ್ವಾಗ್ರಹ ಫೌಂಡೇಶನ್‌ನ ಮುಖ್ಯಸ್ಥರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹೆಲಿಕಾಪ್ಟರ್‌ನಲ್ಲಿಯೇ ಎರಡು ಸುತ್ತಿನಲ್ಲಿ 12 ಪ್ರತಿಭಾವಂತ ಮಕ್ಕಳ ಪ್ರಯಾಣ ಮಾಡಿದರು.
ಶಾಲೆಯ ಜಾನ್ಹವಿ, ಧ್ರುವ, ಹೇಮಂತ್, ಜೀವಿತಾ, ಚಂದನ್, ನಂದನ್, ವಿದ್ಯಾಶ್ರೀ, ಪೃಥ್ವಿಕ್, ರಚಿತಾ, ವಿಜಯ್, ಅನುಶ್ರೀ ಹಾಗೂ ಜೀವನ್ ಎಂಬ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದರು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸ್ಫೂರ್ತಿ ಪಡೆಯಲಿ ಎಂಬ ಉದ್ದೇಶದಿಂದ ಶಾಲೆಯ12 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿತ್ತು. ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಈ ಶಾಲೆಯನ್ನು ದತ್ತು ಪಡೆದಿರುವ ಬೆಂಗಳೂರಿನ ವಿಶ್ವಾಗ್ರಹ ಫೌಂಡೇಶನ್ ಅವಕಾಶ ಮಾಡಿಕೊಟ್ಟಿತ್ತು. ಇದಕ್ಕಾಗಿ ಈ ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಯ ಬಳಿಯೇ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಇನ್ನು ಶಾಲಾ ಮಕ್ಕಳ ಹೆಲಿಕಾಪ್ಟರ್ ಪ್ರಯಾಣಕ್ಕೆ ಜಿಲ್ಲಾಡಳಿತದಿಂದಲೂ ಪೂರ್ವಾನುಮತಿ ಪಡೆಯಲಾಗಿತ್ತು.
ಕಡೇನಂದಿಹಳ್ಳಿಯ ಸರ್ಕಾರಿ ಶಾಲೆಯಲ್ಲಿ 112 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ 12 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಪ್ರಯಾಣದ ಅನುಭವ ಪಡೆದರು.
ಇದನ್ನೂ ಓದಿ: Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!