ಈಗಾಗಲೇ ತಾಲೂಕು ಆಸ್ಪತ್ರೆಗಳಲ್ಲಿ ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಸೌಲಭ್ಯ ಸಜ್ಜುಗೊಳಿಸಲು ಸೂಚಿಸಲಾಗಿದೆ . ಭದ್ರಾವತಿ ವಿಎಸ್ ಐಎಲ್‌ನಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದ್ದು, ಅಗತ್ಯ ಬಿದ್ದರೆ ಕೊರೋನಾ ಪಾಸಿಟಿವ್ ವ್ಯಕ್ತಿಗಳನ್ನು ದಾಖಲಿಸಲು ಸಜ್ಜಾಗಿರಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.21): ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಚಿಕಿತ್ಸೆ ಸೇರಿ ಉತ್ತಮ ಸೌಲಭ್ಯ ಖಾತ್ರಿಪಡಿಸಲು ಹಾಗೂ ಕೊರೋನಾ ನಿಯಂತ್ರಣಕ್ಕೆ ಸರ್ವೇಕ್ಷಣೆ ಇನ್ನಷ್ಟು ತೀವ್ರಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್ ಅವರು ತಿಳಿಸಿದರು.
ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಸಮಿತಿ ಸಭೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಸಮಾಲೋಚನಾ ಸಭೆ ನಡೆಸಿದ ಅವರು, ಈಗಾಗಲೇ ತಾಲೂಕು ಆಸ್ಪತ್ರೆಗಳಲ್ಲಿ ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಸೌಲಭ್ಯ ಸಜ್ಜುಗೊಳಿಸಲು ಸೂಚಿಸಲಾಗಿದೆ . ಭದ್ರಾವತಿ ವಿಎಸ್ ಐಎಲ್‌ನಲ್ಲಿ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದ್ದು, ಅಗತ್ಯ ಬಿದ್ದರೆ ಕೊರೋನಾ ಪಾಸಿಟಿವ್ ವ್ಯಕ್ತಿಗಳನ್ನು ದಾಖಲಿಸಲು ಸಜ್ಜಾಗಿರಬೇಕು. ಗಾಜನೂರು ಮೊರಾರ್ಜಿ ದೇಸಾಯಿ ಹಾಸ್ಟೆಲ್ ಕೋವಿಡ್ ಕೇರ್ ಸೆಂಟರ್‌ನಲ್ಲಿ 206 ಹಾಸಿಗೆ ವ್ಯವಸ್ಥೆಯಿದ್ದು, ಈಗಾಗಲೇ 190 ಮಂದಿ ಇದ್ದಾರೆ. ಇದೇ ರೀತಿ ಮೇಲಿನ ಹಣಸವಾಡಿಯಲ್ಲಿ ಅಲ್ಪಸಂಖ್ಯಾತರ ಹಾಸ್ಟೆಲ್ ಸೆಂಟರ್‌ನಲ್ಲಿ 159 ಹಾಸಿಗೆ, ನವುಲೆ ಬಿಸಿಎಂ ಹಾಸ್ಟೆಲ್ ಸೆಂಟರ್‌ನಲ್ಲಿ 52 ಹಾಸಿಗೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಇದೇ ರೀತಿ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗುರುತಿಸಿ ಸೌಲಭ್ಯ ಸಜ್ಜುಗೊಳಿಸಬೇಕು ಎಂದು ಅವರು ಸೂಚನೆ ನೀಡಿದರು.
ಮತ್ತೊಮ್ಮೆ ಗುಡ್ ನ್ಯೂಸ್: ಶಿವಮೊಗ್ಗದಲ್ಲಿ ಏಕಾಏಕಿ ಕುಸಿದ ಸೋಂಕಿತರ ಸಂಖ್ಯೆ
ಹೊರ ರಾಜ್ಯಗಳಿಂದ ಬಂದವರು, ಕೊರೋನಾ ಪಾಸಿಟಿವ್ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕ ಹೊಂದಿದವರು ಕಟ್ಟುನಿಟ್ಟಾಗಿ ಹೋಂ ಕ್ವಾರೆಂಟೈನ್‌ನಲ್ಲಿರುವುದನ್ನು ಖಾತ್ರಿಪಡಿಸಬೇಕು. ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕ ಹೊಂದಿದ ವ್ಯಕ್ತಿಗಳನ್ನು ಗುರುತಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸ್ಥಳೀಯ ಬಿಎಲ್‌ಒಗಳಿಗೆ ವಹಿಸಲಾಗಿದೆ. ಈ ಕುರಿತಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ಮಾಡಿದರೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು. ಸೋಂಕಿತರು ಹಾಗೂ ಬಿಎಲ್‌ಒಗಳು ಕ್ವಾರೆಂಟೈನ್ ವಾಚ್ ಆಪ್‌ನಲ್ಲಿ ಪ್ರತಿದಿನ ಕಡ್ಡಾಯವಾಗಿ ತಮ್ಮ ಫೊಟೊ ಅಪ್‌ಲೋಡ್ ಮಾಡಬೇಕು. ಇದನ್ನು ಜಿಲ್ಲಾಮಟ್ಟದ ಕಂಟ್ರೋಲ್ ರೂಂನಲ್ಲಿ ಸಮರ್ಪಕವಾಗಿ ಮಾನಿಟರ್ ಮಾಡಬೇಕು ಎಂದು ಹೇಳಿದರು.
ಸೌಲಭ್ಯ ತಪಾಸಣೆಗೆ ವಿಡಿಯೋ ಕಾಲ್: ‘ಮೆಗ್ಗಾನ್ ಕೋವಿಡ್ ಆಸ್ಪತ್ರೆ ಹಾಗೂ ವಿವಿಧ ಕೋವಿಡ್ ಕೇರ್ ಸೆಂಟರ್ ಗಳಲ್ಲಿರುವ ಕ ರೋನಾ ಪಾಸಿಟಿವ್ ವ್ಯಕ್ತಿಗಳೊಂದಿಗೆ ಪ್ರತಿನಿತ್ಯ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಲಭ್ಯ ಸೌಲಭ್ಯಗಳ ಕುರಿತು ಅವರ ಅನಿಸಿಕೆಗಳನ್ನು ಪಡೆಯಲಾಗುತ್ತಿದೆ. ಊಟ ಉಪಾಹಾರದ ವ್ಯವಸ್ಥೆ, ರೋಗ ಲಕ್ಷಣ ಇರುವವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಸೌಲಭ್ಯ, ಶುಚಿತ್ವ ಸೇರಿದಂತೆ ವಿವಿಧ ವಿಷಯಗಳ ಕುರಿತು ಕರೋನಾ ಪಾಸಿಟಿವ್ ವ್ಯಕ್ತಿಗಳಿಂದ ನೇರವಾಗಿ ಅಭಿಪ್ರಾಯ ಪಡೆಯಲು ಇದರಿಂದ ಸಾಧ್ಯವಾಗುತ್ತಿದೆ’ ಎಂದು ಅಪರ ಜಿಲ್ಲಾಕಾರಿ ಜಿ.ಅನುರಾಧ ಅವರು ತಿಳಿಸಿದರು.
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗುವ ಪ್ರತಿಯೊಬ್ಬರಿಗೂ ಅಹವಾಲುಗಳನ್ನು ಹಾಗೂ ಅನಿಸಿಕೆಗಳನ್ನು ಬರೆಯಲು ಅರ್ಜಿ ನಮೂನೆಯನ್ನು ನೀಡಲಾಗುತ್ತಿದ್ದು, ಕುಂದು ಕೊರತೆಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಮೆಗ್ಗಾನ್ ನಿರ್ದೇಶಕ ಡಾ. ಸಿದ್ದಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕಾರಿ ಡಾ. ರಾಜೇಶ ಸುರಗಿಹಳ್ಳಿ, ಡಾ. ಶಂಕ್ರಪ್ಪ, ಡಾ. ರಘುನಂದನ್ ಮತ್ತಿತರರು ಉಪಸ್ಥಿತರಿದ್ದರು.