ಕಾಂಗ್ರೆಸ್ ಆಡಳಿತದಲ್ಲಿ ಜಾರಿಗೊಳಿಸಲಾದ ಕಾರ್ಯಕ್ರಮಗಳು ಶಾಶ್ವತ: ಸಚಿವ ಮಧು ಬಂಗಾರಪ್ಪ

Published : Mar 16, 2026, 08:41 PM IST
Madhu bangarappa

ಸಾರಾಂಶ

ಸಮಾಜದಲ್ಲಿನ ಪ್ರತಿಯೊಬ್ಬರಿಗೂ ರೂಪಿಸಲಾದ ಕಾರ್ಯಕ್ರಮವನ್ನು ಭವಿಷ್ಯದಲ್ಲಿನ ಯಾವುದೇ ಸರ್ಕಾರ ತೆಗೆದುಹಾಕಲು ಸಾದ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶಿಕಾರಿಪುರ (ಮಾ.16): ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜಾರಿಗೊಳಿಸಲಾದ ಕಾರ್ಯಕ್ರಮಗಳು ಶಾಶ್ವತವಾಗಿದ್ದು, ಮಹಿಳೆಯರು, ಬಡವರು, ಶೋಷಿತರ ಸಹಿತ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ರೂಪಿಸಲಾದ ಕಾರ್ಯಕ್ರಮವನ್ನು ಭವಿಷ್ಯದಲ್ಲಿನ ಯಾವುದೇ ಸರ್ಕಾರ ತೆಗೆದುಹಾಕಲು ಸಾದ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಇಂದಿರಾ ಕ್ಯಾಂಟಿನ್ ’ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕಿಂತಲೂ ಬಡವರ ಮತ್ತು ಹಸಿದವರ ಹಿತಾಸಕ್ತಿಗೆ ಆದ್ಯತೆ ನೀಡುತ್ತಾ ಬಂದಿದ್ದು, ಇಂದಿರಾ ಗಾಂಧಿಯವರ ಕಾಲದಿಂದಲೂ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ಪಕ್ಷದ ಮೂಲ ಮಂತ್ರವಾಗಿದೆ ಎಂದ ಅವರು, ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ನುಡಿದಂತೆ ನಡೆದಿದೆ. ಇದು ಕೇವಲ ರಾಜಕೀಯ ಗಿಮಿಕ್ ಅಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರವು ಉಳಿಸಿಕೊಂಡು ಬಂದಿರುವ ನಿಜವಾದ ಮಾನವೀಯ ಮೌಲ್ಯಗಳ ಪ್ರತೀಕ ಎಂದರು.

2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕೂಡಲೇ ಜಾರಿಗೊಳಿಸಲಾದ ‘ಅನ್ನಭಾಗ್ಯ’ ಯೋಜನೆ ಇಂದಿಗೂ ಬಡವರ ಪಾಲಿನ ಆಸರೆಯಾಗಿದೆ. ಶಾಲೆಗಳಲ್ಲಿ ಬಿಸಿಯೂಟ ಹಾಗೂ ಮೊಟ್ಟೆ ನೀಡುವ ಮೂಲಕ ಮಕ್ಕಳ ಪೌಷ್ಟಿಕ ಆಹಾರಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಕೊಡುಗೆಗಳನ್ನು ಸ್ಮರಿಸಿದ ಸಚಿವರು,“ರೈತರ ಪಂಪ್ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿ, ಭೂರಹಿತರಿಗೆ ಭೂಮಿ ಮಂಜೂರು ಮಾಡಿದ್ದು ಹಾಗೂ ಗ್ರಾಮೀಣ ಕೃಪಾಂಕದಂತಹ ಐತಿಹಾಸಿಕ ತೀರ್ಮಾನಗಳು ಬಂಗಾರಪ್ಪನವರ ಬಡವರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತವೆ. ಅವರ ಆಶಯದಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಜೀವನ ನಡೆಸುವುದು ದುಸ್ತರ

ಕೇಂದ್ರ ಸರ್ಕಾರ ಬಡವರಿಗಾಗಿ ಯಾವುದೇ ಸಕಾರಾತ್ಮಕ ಕಾರ್ಯಕ್ರಮ ರೂಪಿಸಿಲ್ಲ. ಸಿಲಿಂಡರ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ನಡೆಸುವುದು ದುಸ್ತರವಾಗಿದೆ ಎಂದರು. ಜಿಲ್ಲೆಯಲ್ಲಿ ಈಗಾಗಲೇ 15 ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗಿದ್ದು, ತೀರ್ಥಹಳ್ಳಿಯಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಬಡವರು, ಕೂಲಿಕಾರರು ನಿತ್ಯ ಬೆಳಿಗ್ಗೆ ಕೇವಲ ರು.5 ನೀಡಿ ತಿಂಡಿ ಹಾಗೂ ರು.10 ನೀಡಿ ಊಟ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶಿವಮೊಗ್ಗದಲ್ಲಿ 4, ಭದ್ರಾವತಿಯಲ್ಲಿ 2, ಸಾಗರದಲ್ಲಿ 1 ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗಿದ್ದು, ಇದೀಗ 2ನೇ ಹಂತದಲ್ಲಿ ಶಿಕಾರಿಪುರ ಸಹಿತ 8 ಕಡೆಗಳಲ್ಲಿ ನಿರ್ಮಾಣವಾಗಿದೆ ಈ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಶೇ.85 ಅಧಿಕ ಅಂಕಗಳಿಸಿದ ಅಂಧ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿದರು. ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ವೀರೇಶ್, ತಹಸೀಲ್ದಾರ್ ವಾಣಿ, ಪುರಸಭೆ ಮುಖ್ಯಾಧಿಕಾರಿ ಭರತ್, ಮುಖಂಡರಾದ ಪುಷ್ಪಾ ಶಿವಕುಮಾರ್, ಗೋಣಿ ಮಾಲತೇಶ್, ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ಬಡಗಿ ಪಾಲಾಕ್ಷಪ್ಪ, ಶಿವು ಸಂದಿಮನೆ, ರಾಘವೇಂದ್ರ ನಾಯ್ಕ ಸಹಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಇದ್ದರು.

PREV
Read more Articles on
click me!

Recommended Stories

ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105 ವರ್ಷಗಳ ಇತಿಹಾಸ ಹೊಂದಿದೆ: ಎಚ್.ಡಿ.ಕುಮಾರಸ್ವಾಮಿ
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಕಗ್ಗಂಟಿನ ಫೈಟ್‌ನಲ್ಲಿ ಮೆತ್ತಗಾದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ!