ಒಂದೇ ಗ್ರಾಮದ 7 ಕೆರೆಗಳಿಗೆ ನೀರು ತುಂಬಿಸುವ 140 ಕೋಟಿಯ ಯೋಜನೆಗೆ ಸಿಕ್ತು ಚಾಲನೆ: ಅಂತರ್ಜಲಕ್ಕೆ 25 ಕೋಟಿ

Published : Jan 26, 2026, 01:51 PM IST
Lakes

ಸಾರಾಂಶ

ಒಂದೇ ಗ್ರಾಮದಲ್ಲಿ ₹140 ಕೋಟಿ ವೆಚ್ಚದ ಕೆರೆ ತುಂಬುವ ಯೋಜನೆಗೆ ಭೇಟಿ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಅಂತರ್ಜಲ ಮಟ್ಟ ಹೆಚ್ಚಿಸಲು ಬೋರ್ವೆಲ್‌ಗಳಿಗೆ ನೀರು ತುಂಬಿಸುವ ಹೊಸ ಯೋಜನೆಗೆ ₹25 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದರು

ಬೆಳಗಾವಿ:  ಅಥಣಿ ತಾಲೂಕಿನ ಪೂರ್ವ ವಿವಿಧ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬೋರ್ವೆಲ್‌ಗಳಿಗೆ ನೀರು ತುಂಬಿಸುವ ವಿನೂತನ ತಂತ್ರಜ್ಞಾನದ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯ ಸಹಕಾರವಿದ್ದು, ಸಿಎಂ ಹಾಗೂ ಡಿಸಿಎಂ ಜೊತೆ ಮಾತನಾಡಿ ಬಜೆಟ್ ನಲ್ಲಿ ₹ 25 ಕೋಟಿ ಅನುದಾನ ಮೀಸಲಿಡುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ₹ 140 ಕೋಟಿ ವೆಚ್ಚದಲ್ಲಿ 7 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವೀಕ್ಷಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಪ್ರದೇಶಗಳನ್ನು ಗುರುತಿಸಿ ಸಣ್ಣ ನೀರಾವರಿ ಇಲಾಖೆಯಿಂದ 8 ಸಾವಿರಕ್ಕೂ ಅಧಿಕ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು, ಚೆಕ್ ಡ್ಯಾಂಗಳ ನಿರ್ಮಾಣ, ನಾಲಾ ಗಳಿಗೆ ಬಾಂದಾರ್ ನಿರ್ಮಾಣ ಸೇರಿ ಇನ್ನಿತರ ಯೋಜನೆಗಳನ್ನು ರೂಪಿಸಲಾಗಿದೆ. 

ಬರಗಾಲದ ನಾಡು ಕಂಗೊಳಿಸುತ್ತಿದೆ ಎಂದ ಸವದಿ

ಈ ಭಾಗದ ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ ಬರಗಾಲದ ನಾಡು ಕಂಗೊಳಿಸುತ್ತಿರುವುದು ನನಗೆ ಸಂತಸ ತಂದಿದೆ. ಬೋರ್ವೆಲ್‌ಗಳಿಗೆ ನೀರು ತುಂಬಿಸುವ ವಿನೂತನ ತಂತ್ರಜ್ಞಾನದ ಯೋಜನೆಗೆ ₹ 25 ಕೋಟಿ ಸರ್ಕಾರದಿಂದ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ಮತ್ತು ಸಣ್ಣ ನೀರಾವರಿ ಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆ

ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ತಾಲೂಕಿನ ಈ ಪೂರ್ವ ಭಾಗದ ಹಳ್ಳಿಗಳಲ್ಲಿ 2004ರಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇತ್ತು. ನಾನು ಬಿಜೆಪಿಯಲ್ಲಿದ್ದ ಸಂದರ್ಭದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 46 ಗ್ರಾಮಗಳಿಗೆ ಅನುಷ್ಠಾನ ಮಾಡಬೇಕಾದರೆ ಅಂದಿನ ಸಿಎಂ ಧರ್ಮಸಿಂಗ್ ಹಾಗೂ ಸಚಿವರಾಗಿದ್ದ ಎನ್.ಎಸ್.ಬೋಸರಾಜು ಅವರ ಸಹಕಾರ ಬಹಳ ಮುಖ್ಯವಾಗಿತ್ತು. ಇಂದು ಏಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅವರ ಸಹಕಾರದಿಂದಲೇ ₹140 ಕೋಟಿ ಅನುದಾನ ಬಂದಿದೆ. ಈ ಯೋಜನೆಯ ಅನುಷ್ಠಾನದಿಂದ ರೈತರ ಮುಖದಲ್ಲಿನ ಹರ್ಷ ಕಂಡು ಅವರಿಗೆ ಮತ್ತು ನನಗೆ ಸಂತಸವಾಗಿದೆ. ಈ ಭಾಗದ ರೈತರ ಪರವಾಗಿ ರಾಜ್ಯ ಸರ್ಕಾರಕ್ಕೆ ಮತ್ತು ಸಣ್ಣ ನೀರಾವರಿ ಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಚಿವ ಬೋಸರಾಜುಗೆ ರೈತರು ಬೆಳ್ಳಿ ಗದೆ ನೀಡಿ ಸನ್ಮಾನಿಸಿ, ಅಭಿನಂದಿಸಿದರು. ಇಲಾಖೆ ನಿವೃತ್ತ ಅಭಿಯಂತ ಶ್ರೀಕಾಂತ ಮಾಕಾಣಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಆತ್ಮರಾಮ್ ಸ್ವಾಮೀಜಿ, ಬಾಲ್ಕಿಯ ಸಿದ್ದರಾಮೇಶ್ವರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಬಬಿತಾ ಮರಗಾಳಿ, ಮುಖಂಡರಾದ ಎಸ್.ಕೆ.ಬೂಟಾಳಿ, ಪರಪ್ಪ ಸವದಿ, ಸಿ.ಎಸ್.ನೇಮಗೌಡ, ಸಿದ್ದರಾಯ ಎಲ್ಲಡಗಿ, ಗುರಪ್ಪ ದಶ್ಯಳ, ಶಾಮ ಪೂಜಾರಿ, ಮಲ್ಲಪ್ಪ ಡೆಂಗಿ, ದತ್ತ ವಾಸ್ಟಾರ, ಪ್ರಕಾಶ್ ಮಹಾಜನ, ಸಂಗಯ್ಯ ಪೂಜಾರಿ, ಶಿವಾನಂದ ಗುಡ್ಡಾಪುರ, ಇಲಾಖೆ ಅಧಿಕಾರಿಗಳಾದ ಬಿ.ಕೆ.ಪವಿತ್ರ, ಎಚ್.ಎಲ್.ವೆಂಕಟೇಶ್, ಪ್ರವೀಣ್ ಪಾಟೀಲ, ಗುತ್ತಿಗೆದಾರ ಸಂತೋಷ್ ಗಾಣಿಗೇರಿ ಸೇರಿ ರೈತರು ಮುಖಂಡರು ಇದ್ದರು. ಶಿವಾನಂದ ಗುಡ್ಡಾಪುರ ಸ್ವಾಗತಿಸಿದರು, ಸಂಗಯ್ಯ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ವಿಜಯ ಹುದ್ದಾರ ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ: ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ

ಅಂತರ್ಜಲ ಮಟ್ಟ ಕುಸಿತ

ಈ ಭಾಗದಲ್ಲಿ 300 ಅಡಿ ಇದ್ದ ಅಂತರ್ಜಲ ಮಟ್ಟ ಈಗ ಕುಸಿದಿದ್ದು, 1000 ಅಡಿ ಬೋರ್ವೆಲ್ ಕೊರೆದರು ನೀರು ಸಿಗುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಇದಲ್ಲದೇ ಬೋರ್ವೆಲ್ ಗಳಿಗೆ ನೀರು ತುಂಬಿಸುವ ವಿನೂತನ ಮಾದರಿಯ ಯೋಜನೆಗಳನ್ನು ಜಾರಿಗೆ ತರಲು ₹ 25 ಕೋಟಿ ಅನುದಾನ ಬೇಕಾಗುತ್ತದೆ. ಚಿಕ್ಕ ನೀರಾವರಿ ಇಲಾಖೆಯಿಂದ ಅದನ್ನು ಒದಗಿಸುವ ಮೂಲಕ ಈ ಭಾಗದ ರೈತರ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸಹಕರಿಸುವಂತೆ ಲಕ್ಷ್ಮಣ ಸವದಿ ಮನವಿ ಮಾಡಿದರು.

ಫೋಟೋ: ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕೆರೆಗಳಿಗೆ ಬಾಗಿಣಿ ಅರ್ಪಿಸಿದ ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಹಾಗೂ ಶಾಸಕ ಲಕ್ಷ್ಮಣ ಸವದಿ ಅವರಿಗೆ ರೈತರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. 

ಇದನ್ನೂ ಓದಿ: ಪಾಂಡವಪುರ: ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ಪರವಾನಿಗೆ ನೀಡುವಂತೆ ಮೀನುಗಾರರ ಒತ್ತಾಯ

PREV
Read more Articles on
click me!

Recommended Stories

₹400 ಕೋಟಿ ದರೋಡೆಗೆ ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡಿದ್ಯಾಕೆ? 15-20 ಕಿಮೀ ನಡುವೆಯೇ ದಾಳಿ?
ಪದ್ಮ ಪ್ರಶಸ್ತಿ ಘನತೆ ಹೆಚ್ಚಿಸಿದ ಶತಾವಧಾನಿ ಡಾ.ಆರ್ ಗಣೇಶ್‌‌ಗೆ ನೀಡಿದ ಗೌರವ!