
ಶಿವಮೊಗ್ಗ: ಸಕ್ಕರೆ ಬೈಲು ಆನೆ ಬಿಡಾರದಲ್ಲಿ 35 ವರ್ಷದ ಶೌರ್ಯ ಆನೆ ಮೃತಪಟ್ಟಿದೆ. ಆನೆ ತೊಡೆಯ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದ ಕಾರಣ ಆನೆ ಮೃತಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕ್ರಾಲ್‌ನಲ್ಲಿ ಹಾಕಿ ಆನೆಯನ್ನು ಪಳಗಿಸುತ್ತಿದ್ದ ಸಂದರ್ಭದಲ್ಲಿ ಆನೆ ಗಾಯಗೊಂಡಿದ್ದು, ಆ ಬಳಿಕ ನಿತ್ರಾಣಗೊಂಡು ಸಾವನ್ನಪ್ಪಿದೆ.
ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಕಳೆದ ಐದು ತಿಂಗಳ ನಡೆದಿದ್ದ ಆಕಸ್ಮಿಕ ಘಟನೆಯಲ್ಲಿ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದರು. ಈ ಘಟನೆ ನಡೆದ ಬಳಿಕ ಸರ್ಕಾರ ಪ್ರವಾಸಿಗರ ಭೇಟಿಗೆ ನಿರ್ಬಂಧವನ್ನು ವಿಧಿಸಿತ್ತು. ಆದರೆ ಐದು ತಿಂಗಳ ಬಳಿಕ ಕಟ್ಟುನಿಟ್ಟಿನ ನಿಯಮಗಳನ್ನು ನಿರೂಪಿಸಿ, ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಆದರೆ ಪ್ರವಾಸಿಗರಿಗೆ ತೆರೆದ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಬಳಿ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಆ ಬಳಿಕ ಆನೆಯನ್ನು ಶಿವಮೊಗ್ಗದ ಸಕ್ರೆಬೈಲು ಬಿಡಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ 32 ವರ್ಷದ ಕಾಡಾನೆಗೆ ಶೌರ್ಯ ಎಂಬ ಹೆಸರು ನೀಡಲಾಗಿತ್ತು. ಕ್ರಾಲ್ ನಲ್ಲಿ ಪಳಗಿಸುತ್ತಿದ್ದ ಸಂದರ್ಭದಲ್ಲಿ ಶೌರ್ಯ ಆನೆ ಪೆಟ್ಟು ಮಾಡಿಕೊಂಡಿತ್ತು. ಆನೆಯ ತೊಡೆಯ ಭಾಗದಲ್ಲಿ ಒಳ ಗಾಯ ಆಗಿದ್ದ ಕಾರಣ ಈ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಾಗಿರಲಿಲ್ಲ ಎನ್ನಲಾಗಿದೆ. ಆದರೆ ಆನೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಬಳಿಕ ಬಿಡಾರದ ವೈದ್ಯ ಡಾ.ಮುರಳಿ ಚಿಕಿತ್ಸೆ ನೀಡಿದ್ದರು.
ಆದರೆ, 3-4 ದಿನಗಳಿಂದ ಒಳಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರೂ ಸ್ಪಂದಿಸದೆ ಇಂದು ಬೆಳಗಿನ ಜಾವ ಶೌರ್ಯ ಆನೆ ಕೊನೆಯುಸಿರೆಳೆದಿದೆ ಎಂದು ಅರಣ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ. ಈ ಬಗ್ಗೆ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟಗಾರ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಶೌರ್ಯ ಆನೆ ಸೆರೆ ಹಿಡಿರುವ ಮುನ್ನ ಇಬ್ಬರ ಸಾವಿಗೆ ಕಾರಣವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರು ಸಮೀಪ ಅಂಡುವಾನೆ ಗ್ರಾಮದಲ್ಲಿ ಫೆಬ್ರವರಿಯಲ್ಲಿ ಸರಣಿ ದಾಳಿ ನಡೆಸಿದ್ದ ಶೌರ್ಯ ಇಬ್ಬರ ಸಾವಿಗೆ ಕಾರಣವಾಗಿತ್ತು. ದುರ್ಘಟನೆಯಲ್ಲಿ ಕೇವಲ ದಿನಗಳ ಅಂತರದಲ್ಲಿ ಸುಬ್ರಾಯಗೌಡ (65) ಮತ್ತು ಕವಿತಾ (25) ಎಂಬವರು ಸಾವನ್ನಪ್ಪಿದ್ದರು. ಇಬ್ಬರನ್ನು ತುಳಿದು ಕಾಡಾನೆ ಸಾಯಿಸಿತ್ತು. ಮಲೆನಾಡು ಭಾಗದಲ್ಲಿ ಮಾನವ-ಆನೆ ಸಂಘರ್ಷಕ್ಕೆ ಈ ಆನೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಸೆರೆ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆಹಿಡಿದು ಶಿವಮೊಗ್ಗದ ಸಕ್ರೆಬೈಲು ಬಿಡಾರಕ್ಕೆ ಶಿಫ್ಟ್ ಮಾಡಿತ್ತು.
ಇನ್ನು, ಕಳೆದ ಎರಡು ದಿನಗಳ ಹಿಂದೆಯಷ್ಟೇ ಅಂದರೆ ಸೆ.29 ರಂದು ಕುಶಾಲನಗರ ದುಬಾರೆ ಆನೆ ಶಿಬಿರದಲ್ಲಿ 19 ವರ್ಷದ ಗಂಡಾನೆ ಸಾವನ್ನಪ್ಪಿತ್ತು. ಕಾಡಾನೆಯೊಂದಿಗೆ ನಡೆದ ಕಾದಾಟದಲ್ಲಿ ಈ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಈ ಸಂದರ್ಭದಲ್ಲಿ Wildlife SOS ತಜ್ಞರ ತಂಡ ಆನೆಯ ಎಕ್ಸ್ ರೇ ಮಾಡಿಸಿದ ಸಂದರ್ಭದಲ್ಲಿ ಆನೆಯ ಎಡಗಾಲಿನ ಮೂಳೆ ಮುರಿದಿರುವುದು ಕಂಡು ಬಂದಿತ್ತು. ಇದರೊಂದಿಗೆ ವೈದ್ಯರು ಹಲವು ಚಿಕಿತ್ಸೆಗಳನ್ನು ಆನೆಗೆ ನೀಡಿದ್ದರು. ಆದರೆ 29ರಂದು ಏಕಾಏಕಿ ಕುಸಿದ ಬಿದ್ದ ಆನೆ, ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದು ಸಾವನ್ನಪ್ಪಿತ್ತು.