ಸಾವಿರಾರು ಕುಟುಂಬದಗಳ ಅನ್ನದಾತೆ ಶರಾವತಿ ವಿಷಮುಕ್ತಕ್ಕೆ ಚಿಂತನೆ

By Kannadaprabha NewsFirst Published Feb 28, 2020, 11:09 AM IST
Highlights

ಶರಾವತಿ ಬಂದರು ತೀರವನ್ನು ಸರಕಾರ ಪೋರ್ಟ್ ಪ್ರೈ.ಲಿ. ಕಂಪನಿಗೆ ಉದ್ದಿಮೆ ವಹಿವಾಟಿಗೆ ನೀಡಿರುವ ಕಾರಣ ಬಂದರು ತೀರದ ಪಾರಂಪರಿಕ ಮೀನುಗಾರಿಕೆ ಹಾಗೂ ಮೀನುಗಾರಿಕಾ ಉದ್ಯಮದ ಮೇಲೆ ಬಾರೀ ಹೊಡೆತ ನೀಡಲಿದ್ದು ಈ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. 

ಹೊನ್ನಾವರ [ಫೆ.28]:  ಹೊನ್ನಾವರ ಪಟ್ಟಣದ ನ್ಯೂ ಇಂಗ್ಲಿಷ್ ಸಭಾಭವನದಲ್ಲಿ ಮಾರ್ಚ್ 1 ರಂದು ಸಂಜೆ 4 ಗಂಟೆಯಿಂದ ಶರಾವತಿ ನದಿ ಬಳಕೆದಾರರ ವಿಚಾರ ವಿನಿಮಯ ಸಭೆಯನ್ನು ಮೀನುಗಾರ ಮುಖಂಡರು ಹಾಗೂ ಬಂದರು ತೀರದ ನಿವಾಸಿಗಳು ಏರ್ಪಡಿಸಿದ್ದಾರೆ.

ಹೊನ್ನಾವರ ಕಾಸರಕೋಡ ಬಂದರು ತೀರವನ್ನು ಸರಕಾರ ಪೋರ್ಟ್ ಪ್ರೈ.ಲಿ. ಕಂಪನಿಗೆ ಉದ್ದಿಮೆ ವಹಿವಾಟಿಗೆ ನೀಡಿರುವ ಕಾರಣ ಬಂದರು ತೀರದ ಪಾರಂಪರಿಕ ಮೀನುಗಾರಿಕೆ ಹಾಗೂ ಮೀನುಗಾರಿಕಾ ಉದ್ಯಮದ ಮೇಲೆ ಬಾರೀ ಹೊಡೆತ ನೀಡಲಿದ್ದು, ಅವಲಂಬಿತ ಸಾವಿರಾರು ಕುಟುಂಬಗಳು ಬೀದಿ ಪಾಲಾಗಲಿವೆ. ಅಲ್ಲದೇ ಇಲ್ಲಿನ ಬಂದರಿನ ನಾಲ್ಕುನೂರಕ್ಕೂ ಹೆಚ್ಚು ಕುಟುಂಬಗಳು ಅತಂತ್ರವಾಗಲಿದ್ದು, ಈ ಹಿನ್ನೆಲೆಯಲ್ಲಿ ಭವಿಷ್ಯದ ಪರಿಣಾಮಗಳು ಮತ್ತು ಪರಿಹಾರೋಪಾಯ ಕಂಡುಕೊಳ್ಳುವಲ್ಲಿ ಹೊನ್ನಾವರ ಪಟ್ಟಣದ ನಿವಾಸಿಗಳನ್ನೊಳಗೊಂಡು ಈ ಸಭೆ ಏರ್ಪಡಿಸಿರುವದಾಗಿ ಸಂಘಟಕರು ತಿಳಿಸಿದ್ದಾರೆ.

ಇತಿಹಾಸ ಕಾಲದಿಂದಲೂ ಹೊನ್ನಾವರ ಬಂದರು ನೌಕೆಗಳ ಮೂಲಕ ಆಹಾರ, ಸಂಬಾರ ಸಾಮಗ್ರಿಗಳ ಅಮದು ರಪ್ತು ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಸುತ್ತಮುತ್ತಲಿನ ವ್ಯಾಪಾರೋತ್ಪನ್ನ ಕೇಂದ್ರವಾಗಿತ್ತು. ಅಲ್ಲದೇ ಶರಾವತಿ ನದಿ ಹಿನ್ನೀರಿನಲ್ಲಿ ಸಿಗುವ ಮೀನುಗಳು ವಿಶಿಷ್ಠ ರುಚಿಯಿಂದ ಹೊರರಾಜ್ಯಗಳ ಮಾರುಕಟ್ಟೆ ಕಂಡುಕೊಂಡಿದ್ದವು. 

ಕೊರೋನಾ ಹಡಗಿನಿಂದ ಪುನರ್ಜನ್ಮ : ಕಾರವಾರದ ಯುವಕನ ಕಥೆ..

ಮೀನುಗಾರಿಕಾ ವಹಿವಾಟನ್ನು ಅವಲಂಬಿಸಿಕೊಂಡು ಹೊನ್ನಾವರ ಪಟ್ಟಣದ ವ್ಯಾಪಾರ ವಹಿವಾಟು ಏರಿಳಿತ ಕಂಡುಕೊಳ್ಳುತ್ತಿದ್ದು, ಇದೀಗ ಹೈದ್ರಾಬಾದ್ ಮೂಲದ ಖಾಸಗಿ ಕಂಪನಿಯೊಂದು ಹೊನ್ನಾವರ ಪೋರ್ಟ್ ಪ್ರೈ.ಲಿ. ಹೆಸರಿನಲ್ಲಿ ಬಂದರಿನಲ್ಲಿ ತಳವೂರಿ ವಾಣಿಜ್ಯ ಬಂದರನ್ನು ನಿರ್ಮಿಸಲು ಉದ್ದೇಶಿಸಿದೆ.

ಇದರಿಂದ ಇಲ್ಲಿನ 99 ಎಕರೆ ಪ್ರದೇಶದಲ್ಲಿ ನೆಲೆ ಕಂಡುಕೊಂಡಿರುವ ಪಾರಂಪರಿಕ ಮೀನುಗಾರ ಕುಟುಂಬಗಳು ನೆಲೆ ಕಳೆದುಕೊಳ್ಳಲಿದ್ದು ಅಲ್ಲದೇ ಇಡೀ ಬಂದರಿನಲ್ಲಿ ನಿತ್ಯ ನಡೆಯುವ ಮೀನುಗಾರಿಕಾ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳುವ ಪ್ರಮೇಯ ಸೃಷ್ಟಿಯಾಗಿದೆ. ಈ ಬಂದರಿನ ಮೂಲಕ ಆಹಾರ ಸಾಮಗ್ರಿಗಳ ವಹಿವಾಟು ನಡೆಸುವುದಾಗಿ ಸ್ಥಳೀಯರಿಗೆ ಈ ಮೊದಲು ತಿಳಿಸಿದ್ದ ಪೋರ್ಟ್ ಕಂಪನಿ ಕಬ್ಬಿಣದ ಅದಿರು, ಕಲ್ಲಿದ್ದಲು, ರಸಗೊಬ್ಬರ, ರಾಸಾಯನಿಕಗಳನ್ನು ಆಯಾತ ನಿರ್ಯಾತ ಮಾಡುವ ಒಡಂಬಡಿಕೆ ಮಾಡಿಕೊಂಡಿದ್ದು ಸ್ಥಳೀಯ ನಿವಾಸಿಗಳಿಗೆ ವಂಚಿಸಿದೆ. 

ಹಸಿರು ಪರಿಸರ, ನದಿ, ಜನಜೀವನಕ್ಕೆ ರಾಸಾಯನಿಕ ವಿಷವುಣಿಸುವ ಕಂಪನಿಯ ಹುನ್ನಾರದ ವಿರುದ್ಧ ಹೊನ್ನಾವರದ ಸಮಸ್ತ ಸಾರ್ವಜನಿಕರು ಎಚ್ಚೆತ್ತುಕೊಂಡು ಶರಾವತಿ ನದಿಯನ್ನು ವಿಷಮುಕ್ತಗೊಳಿಸಿ ಉಳಿಸಿಕೊಳ್ಳುವ ಹಾಗೂ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಜಾಗೃತರಾಗಿ ಪರ್ಯಾಯ ಮಾರ್ಗಕಂಡುಕೊಳ್ಳುವ  ದಿಸೆಯಲ್ಲಿ ಈ ಸಭೆಯನ್ನು ಏರ್ಪಡಿಸಿದ್ದು ಶರಾವತಿ ನದಿ ಅವಲಂಬಿತರು ಹಾಗೂ ಪಟ್ಟಣದ ಸಾರ್ವಜನಿಕರು ಸಭೆಗೆ ಹಾಜರಿದ್ದು ಸಹಕರಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

click me!