ಶರಣರ ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೆ ಪ್ರಸ್ತುತ : ಕೆ.ಎಂ. ಪರಮೇಶ್ವರಯ್ಯ

By Kannadaprabha News  |  First Published Mar 2, 2024, 10:13 AM IST

ಹನ್ನೆರಡನೇ ಶತಮಾನದ ಶಿವಶರಣರು ಮಾನವನ ವ್ಯಕ್ತಿತ್ವವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹಾಗೂ ಸ್ವಾಸ್ಥ್ಯ ಸಮಾಜ ಕಾಪಾಡುವ ಸಾರ್ವತ್ರಿಕ ಜೀವನ ಮೌಲ್ಯಗಳಿಗೆ ಒತ್ತುಕೊಟ್ಟು ಅದರಂತೆ ಬಾಳಿ ಬದುಕಿದ್ದರು. ಇವರ ಜೀವನ ಮೌಲ್ಯ ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.


 ತಿಪಟೂರು :  ಹನ್ನೆರಡನೇ ಶತಮಾನದ ಶಿವಶರಣರು ಮಾನವನ ವ್ಯಕ್ತಿತ್ವವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹಾಗೂ ಸ್ವಾಸ್ಥ್ಯ ಸಮಾಜ ಕಾಪಾಡುವ ಸಾರ್ವತ್ರಿಕ ಜೀವನ ಮೌಲ್ಯಗಳಿಗೆ ಒತ್ತುಕೊಟ್ಟು ಅದರಂತೆ ಬಾಳಿ ಬದುಕಿದ್ದರು. ಇವರ ಜೀವನ ಮೌಲ್ಯ ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.

ನಗರದ ಶ್ರೀ ಕೋಡಿಬಸವೇಶ್ವರ ನಿಲಯದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕದಳಿ ಮಹಿಳಾ ವೇದಿಕೆ, ಯುವ ಘಟಕದ ವತಿಯಿಂದ ಆಯೋಜಿಸಿದ್ದ ವಚನ ಗಾಯನ, ದತ್ತಿ ಉಪನ್ಯಾಸ, ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರು ಸಕಲರಿಗೆ ಲೇಸನ್ನೇ ಬಯಸುತ್ತಾ ಸತ್ಯ, ಸಹನೆ, ಅಹಿಂಸೆ, ನಿಸ್ವಾರ್ಥ ಪ್ರೇಮ ಇನ್ನೊತರೆ ಮೌಲ್ಯಗಳಿಗೆ ಬದುಕಿದ್ದವರು. ಅಲ್ಲದೆ ಲಿಂಗ, ಜಾತಿ ತಾರತಮ್ಯ, ಪರ ಸ್ತ್ರೀ ಹಾಗೂ ಪರ ಧನ ನಿರಾಕರಣೆಯ ಬಗ್ಗೆ ಒತ್ತು ನೀಡಿದ್ದರು.

Tap to resize

Latest Videos

undefined

ಬಸವಣ್ಣ ಅನುಭವ ಮಂಟಪದವೆಂಬ ಧಾರ್ಮಿಕ ಸಂಸತ್ತನ್ನು ಸ್ಥಾಪಿಸಿ ಜನರಾಡುವ ಭಾಷೆಯಲ್ಲಿ ವಚನಗಳೆಂಬ ನೈತಿಕ ಕಾನೂನುಗಳ ರಚಿಸಿ ಅಳವಡಿಸಿಕೊಂಡರು. ಹಾಗಾಗಿ ಪ್ರಪಂಚದ ಮೊಟ್ಟ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಸ್ಥಾಪಿಸಿದ ಕೀರ್ತಿ ಬಸವಾದಿ ಪ್ರಮಥರಿಗೆ ಸಲ್ಲುತ್ತದೆ. ಇದನ್ನ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಲ್ಯಾಣದಿಂದ ಕ್ರಾಂತಿ ಮಾಡಿ ವಚನಗಳ ಸರ್ವನಾಶಕ್ಕೆ ಪ್ರಯತ್ನಿಸಿದಾಗ ವೀರ ಗಣಾಚಾರಿ ಮಡಿವಾಳ ಮಾಚಿದೇವರು ಶರಣರ ವಚನಗಳ ರಕ್ಷಣೆಗೆ ನಿಂತರು. ಹಾಗಾಗಿ ವಚನ ಸಾಹಿತ್ಯ ರಕ್ಷಕರೂ ಆದರು. ಅಂದಿನ ರಾಜಪ್ರಭುತ್ವನ್ನೇ ವಿರೋದಿಸಿ ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂಬುದನ್ನ ಪ್ರತಿಪಾದಿಸಿ ಪ್ರತಿಯೊಬ್ಬರ ಕಾಯಕಕ್ಕೂ ಶ್ರೇಷ್ಠತೆಯ ಲೇಪನ ಹಚ್ಚಿ ಕಾಯಕ ಜೀವಿಗಳಾದರು ಎಂದು ತಿಳಿಸಿದರು.

ಶರಣ ಸಾಹಿತಿ ಶ್ಯಾಮಸುಂದರ್‌ ದತ್ತಿ ದಾನಿಗಳ ಪರಿಚಯಿಸುತ್ತಾ. ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಶಸಾಪದೊಂದಿಗೆ ಕೈಜೋಡಿಸಿದ ಅವರನ್ನು ಪ್ರಶಂಶಿಸಿದರು. ವೀರಗಣಾಚಾರಿ ಮಡಿವಾಳ ಮಾಚಿದೇವರು ವೀರಭದ್ರನ ಅಪರಾವತಾರಿ. ಬಟ್ಟೆ ಮಡಿ ಮಾಡುವ ಕಾಯಕವಿಡಿದಿದ್ದ ಇವರು ಕಾಯಕ ಮಾಡದ ಸೋಮಾರಿಗಳ, ಬಡವರನ್ನು ಶೋಷಿಸುವ ದುರ್ಗುಣವುಳ್ಳವರ ಬಟ್ಟೆಗಳನ್ನು ಮಡಿ ಮಾಡುತ್ತಿರಲಿಲ್ಲವೆಂದರು.

ಅಧ್ಯಕ್ಷತೆ ವಹಿಸಿದ್ದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸ್ವರ್ಣಗೌರಿ ಮಡಿವಾಳ ಮಾಚಿದೇವರ ವಚನಗಳನ್ನು ಸುಶ್ರಾವ್ಯವಾಗಿ ಹಾಡಿದರು. ಕಾರ್ಯಕ್ರಮದಲ್ಲಿ ರೈತ ಕವಿ ಬಳ್ಳೆಕಟ್ಟೆ ಶಂಕರಪ್ಪ ಹಾಗೂ ದತ್ತಿ ದಾನಿಗಳಾದ ಜಯಮ್ಮ ತಂಡಗ ಇವರನ್ನು ಸನ್ಮಾನಿಸಲಾಯಿತು. ಶಸಾಪ ಗೌರವಾಧ್ಯಕ್ಷ ಎಚ್.ಎಸ್. ಜಗದೀಶ್, ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಮುಕ್ತ ತಿಪ್ಪೇಶ್, ನಗರಸಭೆ ಸದಸ್ಯೆ ಯಮುನಾ, ಕೊಬ್ಬರಿ ವರ್ತಕ ಟಿ.ಎನ್. ಪರಮಶಿವಯ್ಯ, ಪ್ರಧಾನ ಕಾರ್ಯದರ್ಶಿ ಸಾರ್ಥವಳ್ಳಿ ಶಿವಕುಮಾರ್‌, ಪ್ರಾಂಶುಪಾಲ ಉಮೇಶ್, ಶಿಕ್ಷಕಿ ಪುಷ್ಪ ಸೇರಿದಂತೆ ಅಕ್ಕಮಹಾದೇವಿ ಸಮಾಜ ಹಾಗೂ ಕದಳಿ ಮಹಿಳಾ ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. 

click me!