ರಾಜ್ಯ ಸರ್ಕಾರ ಜಾರಿಗೆ ತಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಹಿನ್ನಲೆ ಶನಿವಾರದಂದು ರಾಜ್ಯದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯ ಮಹಿಳೆಯರು ಪಾವಗಡಕ್ಕೆ ಹರಿದು ಬಂದು, ಇಲ್ಲಿನ ಶ್ರೀ ಶನೇಶ್ವರಸ್ವಾಮಿಯ ದರ್ಶನ ಪಡೆದರು.
ಪಾವಗಡ : ರಾಜ್ಯ ಸರ್ಕಾರ ಜಾರಿಗೆ ತಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಹಿನ್ನಲೆ ಶನಿವಾರದಂದು ರಾಜ್ಯದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯ ಮಹಿಳೆಯರು ಪಾವಗಡಕ್ಕೆ ಹರಿದು ಬಂದು, ಇಲ್ಲಿನ ಶ್ರೀ ಶನೇಶ್ವರಸ್ವಾಮಿಯ ದರ್ಶನ ಪಡೆದರು.
ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಇಲ್ಲಿನ ಶ್ರೀ ಶನೇಶ್ವರಸ್ವಾಮಿ, ಶ್ರೀ ಆಂಜನೇಯಸ್ವಾಮಿ, ತಾಲೂಕಿನ ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಕಣವೇ ಲಕ್ಷ್ಮೀನರಸಿಂಗಸ್ವಾಮಿ, ಶಿರಡಿ ಸಾಯಿಬಾಬಾ ಹಾಗೂ ಶ್ರೀ ರಾಘವೇಂದ್ರಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಶ್ರಾವಣವಾಸ ಇನ್ನೂ ಒಂದು ತಿಂಗಳಿರುವಾಗಲೇ ಬೆಂಗಳೂರು, ತುಮಕೂರು, ಹಾಸನ, ಚಿತ್ರದುರ್ಗ, ರಾಯಚೂರು, ಬಳ್ಳಾರಿ ಹಾಗೂ ದ ಅನಂತಪುರ, ಕಲ್ಯಾಣದುರ್ಗದಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಹೊಸಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು ಬೆಳಗ್ಗೆಯಿಂದ ಪಾವಗಡಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಮಧ್ಯಾಹ್ನದ ವೇಳೆಗೆ ಹೊಸ ಬಸ್ ನಿಲ್ದಾಣದಿಂದ ಪಟ್ಟಣದ ಚಳ್ಳಕರೆ, ತುಮಕೂರು ಮತ್ತು ಶಿರಾ ರಸ್ತೆ ಮಾರ್ಗಗಳಲ್ಲಿ ಎಲ್ಲಿ ನೋಡಿದರೂ ಮಹಿಳೆಯರ ದಂಡು ವ್ಯಾಪಕವಾಗಿ ಕಂಡು ಬಂದಿತು. ನಗರದ ಟೋಲ್‌ಗೇಟ್‌ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಎಸ್‌ಎಸ್‌ಕೆ ಸರ್ಕಲ್, ತುಮಕೂರು ರಸ್ತೆಯ ಎಸ್‌ಎಸ್‌ಕೆ ಸಮುದಾಯ ಭವನ, ಕನಕದಾಸರ ಸರ್ಕಲ್ ಮತ್ತು ಪ್ರಮುಖ ಮಾರ್ಗದ ರಸ್ತೆ ಬದಿಯಲ್ಲಿ ಜನಜಂಗುಳಿಯೇ ನೆರೆದಿತ್ತು.
ತೆಂಗಿನಕಾಯಿ, ಹೂವು ಹಣ್ಣು ಹಾಗೂ ತರೆವಾರಿ ಅಂಗಡಿಗಳ ಬಳಿ ವ್ಯಾಪಾರಕ್ಕಾಗಿ ಜನ ಮುಗಿಬಿದ್ದಿದ್ದು ಅಂಗಡಿಗಳ ಬಳಿ ವಿಪರೀತ ರಶ್‌ನಿಂದ ಕೂಡಿದ್ದವು. ಇಲ್ಲಿನ ಹಲವು ದೇವಸ್ಥಾನಗಳಲ್ಲಿ ದರ್ಶನ ಪಡೆದ ಬಳಿಕ ವಾಸಸಾದ ಮಹಿಳೆಯರು ಬಸ್ ನಿಲ್ದಾಣದಲ್ಲಿ ಸುಡು ಬಿಸಿಲು ಸಹ ಲೆಕ್ಕಿಸದೇ ಸರ್ಕಾರಿ ಬಸ್‌ಗಾಗಿ ಕಾದು ನಿಂತಿದ್ದರು. ಖಾಸಗಿ ಬಸ್‌ಗಳ ಏಜೆಂಟರು ಬೇಡಿಕೊಂಡರೂ ಹತ್ತದೇ ಸರ್ಕಾರಿ ಬಸ್ ಪ್ರಯಾಣಕ್ಕೆ ನೂಕುನುಗ್ಗಲು ಆರಂಭಿಸಿದ್ದರು. ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನೇ ತುಂಬಿಸಿಕೊಂಡಿದ್ದ ಸರ್ಕಾರಿ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಬೆಳಗ್ಗೆಯಿಂದಲ್ಲೇ ಎಲ್ಲಾ ಸರ್ಕಾರಿ ಬಸ್‌ಗಳು ಪುಲ್ ರಷ್‌ನಿಂದ ಕೂಡಿದ್ದವು.
ವಿವಿಧ ನಗರ ಪ್ರದೇಶಗಳಿಂದ ವಿಪರೀತ ರಶ್‌ನಿಂದ ಬರುತ್ತಿರುವ ಕಾರಣ ಸರ್ಕಾರಿ ಬಸ್‌ಗಳಲ್ಲಿ ಜಾಗವಿಲ್ಲದೇ ಗ್ರಾಮೀಣ ಪ್ರದೇಶಗಳಿಂದ ಪಾವಗಡ ನಗರಕ್ಕೆ ನಿತ್ಯ ಆಗಮಿಸುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತೀವ್ರತರದ ಪರದಾಟ ನಡೆಸಿದರು. ಚಿತ್ರದುರ್ಗ, ಬಳ್ಳಾರಿ ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಾವಗಡಕ್ಕೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾವಗಡಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಇಲ್ಲಿಂದ ದಾವಣಗೆರೆ- ಚಳ್ಳಕೆರೆ ಚಿತ್ರದುರ್ಗ ಮಾರ್ಗದಲ್ಲಿ ತೆರಳಬೇಕಿದ್ದ ಸರ್ಕಾರಿ ಬಸ್‌ಗಳ ಸಂಖ್ಯೆ ವಿರಳವಾಗಿದ್ದ ಪರಿಣಾಮ ವಿಧಿಯಿಲ್ಲದೇ ಅನೇಕ ಮಹಿಳಾ ಪ್ರಯಾಣಿಕರು ಚಾರ್ಜ್ ಕೊಟ್ಟು ಖಾಸಗಿ ಬಸ್‌ಗಳಲ್ಲಿ ವಾಪಸಾದ ಪ್ರಸಂಗ ನಡೆಯಿತು.
ರಾಜ್ಯ ಸರ್ಕಾರ ಜಾರಿಗೆ ತಂದ ಉಚಿತ ಬಸ್ ಪ್ರಯಾಣದ ಹಿನ್ನಲೆಯಲ್ಲಿ ಇಲ್ಲಿನ ಶ್ರೀಶನೇಶ್ವರಸ್ವಾಮಿ ಹಾಗೂ ಇತರೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಿದೆ. ದೇವರ ದರ್ಶನ ಪಡೆದಿದ್ದು ಪ್ರಯಾಣದ ವೇಳೆ ಸರ್ಕಾರಿ ಬಸ್‌ಗಳಲ್ಲಿ ಯಾವುದೇ ರೀತಿಯ ಕಿರಿಕಿರಿ ಆಗಲಿಲ್ಲ, ಸೀಟ್‌ಗಳಿದ್ದವು. ಸುರಕ್ಷಿತವಾಗಿ ಇಲ್ಲಿಗೆ ಆಗಮಿಸಿದ್ದೇವೆ. ಮತ್ತೆ ಅದೇ ಸರ್ಕಾರಿ ಬಸ್‌ನಲ್ಲಿಯೇ ನಮ್ಮ ಊರುಗಳಿಗೆ ವಾಪಸಾಗಲಿದ್ದೇವೆ ಎಂದು ಚಿತ್ರದುರ್ಗ ಹಾಗೂ ಹಿರಿಯೂರು ಮೂಲದ ಕೆಲ ಮಹಿಳೆಯರು ತಿಳಿಸಿದ್ದಾರೆ.