Latest Videos

ತಮ್ಮ ಜನ್ಮ ದಿನದಂದೇ ಸದಾಶಿವ ವರದಿ ಜಾರಿಗೆ ಪ್ರತಿಭಟನೆ ನಡೆಸಿದ ಷಡಕ್ಷರಮುನಿ ಸ್ವಾಮೀಜಿ

By Ravi NayakFirst Published Jul 20, 2022, 3:06 PM IST
Highlights

ಸದಾಶಿವ ವರದಿ ಜಾರಿಗೊಳಿಸುವಂತೆ ತಮ್ಮ ಜನ್ಮದಿನದಂದೇ ಪ್ರತಿಭಟನೆ ನಡೆಸಿದ ಹಿರಿಯೂರು ಆದಿಜಾಂಬವ ಬೃಹನ್ಮಠದ ಷಡಕ್ಷರಮುನಿ ಸ್ವಾಮೀಜಿ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.20): ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ಕೋಡಿಹಳ್ಳಿ ಶ್ರೀ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಪೈಕಿ ಮಾದಿಗ ಸಮುದಾಯವು ಒಂದಾಗಿದ್ದು, ಇತರೆ ಎಲ್ಲಾ ಪರಿಶಿಷ್ಟ ಜಾತಿಯವರಿಗಿಂತಲೂ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಸತ್ಯದ ವಿಚಾರ. ಮಾದಿಗ ಸಮುದಾಯವು ಎಲ್ಲಾ ರೀತಿಯಿಂದಲೂ ವಂಚನೆಗೊಳಗಾಗಿದ್ದು, ಸಮುದಾಯದ ಮುಖ್ಯವಾಹಿನಿಗೆ ಬರಲಾಗುತ್ತಿಲ್ಲ. 

ಪರಿಶಿಷ್ಟ ಜಾತಿ(Scheduled caste)ಯಲ್ಲಿ ಬಹುದೊಡ್ಡ ಜನಸಂಖ್ಯೆಯುಳ್ಳ ಮಾದಿಗ(Madiga) ಸಮುದಾಯಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಪ್ರಗತಿ ಹೊಂದಲು ಒಳ ಮೀಸಲಾತಿ ಅಗತ್ಯವೆಂದು ಮನಗಂಡು ಸಮಾಜದ ಹೋರಾಟಗಾರರು, ಸಂಘಟನೆಗಳವರು, ಚಿಂತಕರು, ಮಠಾಧೀಶರು ಸುಮಾರು 25-30 ವರ್ಷಗಳಿಂದ ಹೋರಾಟ ನಡೆಸಿದರೂ, ಒಳ ಮೀಸಲಾತಿ ಬೇಡಿಕೆಯನ್ನು ಈ ಹಿಂದಿನ ಮತ್ತು ಈಗಿನ ಸರ್ಕಾರಗಳಿಗೆ ಮನವಿ ಮಾಡಿದ್ದರೂ ಸಹ ಸಮುದಾಯಕ್ಕೆ ಕಿಂಚಿತ್ತೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಇದುವರೆಗೂ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸುವ ಭರವಸೆಗಳು ಹುಸಿಯಾಗಿಯೇ ಉಳಿದಿವೆ. ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ತಾರತಮ್ಯದ ಸಮೀಕ್ಷೆಗೆ ಸರ್ಕಾರವೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ(sadashiva-commission) ನೇಮಿಸಿ ವರದಿ ಸಿದ್ಧವಾದ ನಂತರ ಅದನ್ನು ಸ್ವೀಕರಿಸಿ ಇದುವರೆಗೂ ಬಹಿರಂಗಪಡಿಸದೆ, ಚರ್ಚೆಗೆ ಒಳಪಡಿಸದೆ ಕೇಂದ್ರ ಸರ್ಕಾರಕ್ಕೂ ಶಿಫಾರಸ್ಸು ಮಾಡದೆ ಮೀನ-ಮೇಷ ಎಣಿಸುತ್ತಿರುವುದು ಮಾದಿಗ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಪರಿಶಿಷ್ಟರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದರೂ ಅತಿ ಅವಶ್ಯವಾಗಿರುವ ಒಳಮೀಸಲಾತಿ ವಿಚಾರದ ಬಗ್ಗೆ ಚರ್ಚಿಸದೆ ಮತ್ತು ಶಿಫಾರಸ್ಸು ಮಾಡದೆ ಕಡೆಗಣಿಸುತ್ತಿರುವುದು ವಿಷಾದನೀಯವಾಗಿದೆ ಎಂದು ಅಳಲು ತೋಡಿಕೊಂಡಿರು.
ಹಸಿವು, ಅನಕ್ಷರತೆ, ಬಡತನ, ಅಸ್ಪೃಶ್ಯತೆ ಮತ್ತು ದೌರ್ಜನ್ಯಗಳಿಂದ ಜೀವನ ಸಾಗಿಸುತ್ತಿರುವ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟು ಸಮಾಜದ ಮುಖ್ಯವಾಹಿನಿಗೆ ಕರೆತರಲು ಸರ್ಕಾರಗಳು ವಿಫಲವಾಗಿದೆ ಎಂದು ದೂರಿದರು.

'ಸದಾಶಿವ ಆಯೋಗ ವರದಿ ಜಾರಿ ಮಾಡದಿದ್ದಲ್ಲಿ ಬೆತ್ತಲೆ ಪ್ರತಿಭಟನೆ'

ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯದ ಮಠಾಧೀಶರ, ಹೋರಾಟಗಾರರ, ಸಂಘಟನೆಗಳವರ, ಮಾದಿಗ ಸಮುದಾಯದ ಎಲ್ಲಾ ಮುಖಂಡರೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ದೇವರಾಜ್, ಪ್ರಸನ್ನ, ಸಮರ್ಥರಾಯ್, ವಿಶ್ವನಾಥ್ ಮೂರ್ತಿ ಶಿವಕುಮಾರ್ ಹಾಜರಿದ್ದರು.

click me!