ಕಲ್ಯಾಣ ಕರ್ನಾಟಕ ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯದ ಕೂಗು ನಿಶ್ಚಿತ: ಲಕ್ಷ್ಮಣ ದಸ್ತಿ

By Kannadaprabha News  |  First Published Dec 20, 2023, 10:30 PM IST

ಪ್ರತ್ಯೇಕ ರಾಜ್ಯ ಬೇಡ, ನಾವೆಲ್ಲ ಒಂದಾಗಲು ಹಿರಿಯರು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದೆನ್ನುವ ಸಿಎಂ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನು ಮಾಡಿದ್ದಾರೆ. ನೇಮಕಾತಿ, ಮುಂಬಡ್ತಿಗೆ ಪದೇ ಪದೇ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗುತ್ತಿದೆ, ಈ ಕುರಿತು ಅಡ್ವೋಕೇಟ್‌ ಜನರಲ್‌ಗೆ ಏಕೆ ಪ್ರಶ್ನಿಸುತ್ತಿಲ್ಲ. ಕೆಪಿಎಸ್‌ಸಿಗೆ ಸೂಕ್ತ ನೇಮಕಾತಿ ನಿಯಮಾವಳಿ ರಚಿಸಲು ಸೂಚಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ 
 


ಬೀದರ್‌(ಡಿ.20):  ಪರಿಶಿಷ್ಟರ ಮೀಸಲು ನಿಯಮಾವಳಿಗಳಂತೆ ಕಲಂ 371 (ಜೆ) ಅಡಿಯಲ್ಲಿ ನೇಮಕಾತಿ, ಮುಂಬಡ್ತಿಯ ಮೀಸಲಿಗೆ ಸಂ‍ವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದ್ದರೂ ಸರ್ಕಾರದ ಅಡ್ವೋಕೇಟ್‌ ಜನರಲ್‌ ನಿರಾಸಕ್ತಿ ನಮ್ಮನ್ನು ಮತ್ತೇ ಹಿಂದಿಕ್ಕಿದೆ, ಸರ್ಕಾರ ಹೀಗೇ ನಿರ್ಲಕ್ಷಿಸುತ್ತ ಸಾಗಿದರೆ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಭುಗಿಲೇಳುವುದರಲ್ಲಿ ಅನುಮಾನವಿಲ್ಲ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಎಚ್ಚರಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಭಾಗದ ಜನರ ಅಭಿವೃದ್ಧಿಗಾಗಿ ಸಂವಿಧಾನಬದ್ಧವಾಗಿರುವ ಕಲಂ 371 (ಜೆ) ಜಾರಿಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸುತ್ತಿದೆ. ನ್ಯಾಯಾಂಗದಲ್ಲಿಯೂ ಪ್ರಶ್ನಿಸಲಾಗದಂಥ ಅಧಿಕಾರ ಹೊಂದಿರುವ ವಿಶೇಷ ಸ್ಥಾನಮಾನದ ವ್ಯವಸ್ಥೆಯನ್ನು ಪದೇ ಪದೇ ನ್ಯಾಯಾಲಯಕ್ಕೆ ಎಳೆಯುತ್ತಿರುವದು ಅತ್ಯಂತ ಬೇಸರ ತರಿಸಿದೆ ಎಂದರು.

Latest Videos

undefined

ಬಸವಕಲ್ಯಾಣ: 18 ಕೆರೆಗಳಿಗೆ ನೀರು ತುಂಬಿಸಿ, ಹೊಲಗಳಿಗೆ ನೀರುಣಿಸಿ, ಸರ್ಕಾರಕ್ಕೆ ಸಲಗರ ಆಗ್ರಹ

ಪ್ರತ್ಯೇಕ ರಾಜ್ಯ ಬೇಡ, ನಾವೆಲ್ಲ ಒಂದಾಗಲು ಹಿರಿಯರು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದೆನ್ನುವ ಸಿಎಂ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನು ಮಾಡಿದ್ದಾರೆ. ನೇಮಕಾತಿ, ಮುಂಬಡ್ತಿಗೆ ಪದೇ ಪದೇ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗುತ್ತಿದೆ, ಈ ಕುರಿತು ಅಡ್ವೋಕೇಟ್‌ ಜನರಲ್‌ಗೆ ಏಕೆ ಪ್ರಶ್ನಿಸುತ್ತಿಲ್ಲ. ಕೆಪಿಎಸ್‌ಸಿಗೆ ಸೂಕ್ತ ನೇಮಕಾತಿ ನಿಯಮಾವಳಿ ರಚಿಸಲು ಸೂಚಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಅಡ್ವೋಕೇಟ್ ಜನರಲ್‌ ಬೆಂಗಳೂರಿಗರು ಅವರಿಗೆ ಹೊಟ್ಟೆಕಿಚ್ಚು:

ರಾಜ್ಯದ ಅಡ್ವೋಕೇಟ್ ಜನರಲ್‌ ಬೆಂಗಳೂರಿಗರು ಅವರಿಗೆ ಕಲ್ಯಾಣ ಕರ್ನಾಟಕ ಭಾಗದ ಜನರೆಂದರೆ ಹೊಟ್ಟೆ ಕಿಚ್ಚು, ಕಲಂ 371ಜೆ ಅಡಿಯಲ್ಲಿ ನೇಮಕಾತಿಗಳ ಕುರಿತಾಗಿ ನ್ಯಾಯಾಲಯಗಳಲ್ಲಿ ವಾದ ಮಂಡಿಸುವಲ್ಲಿ ಸಂಪೂರ್ಣ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕಲ್ಯಾಣ ಕರ್ನಾಟಕ ಭಾಗದವರಿಗೆ ಅನ್ಯಾಯ, ಕೈಕಟ್ಟಿ ಕುಳಿತಿರುವ ಸರ್ಕಾರ:

ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿರುವ ಕಲಂ 371 (ಜೆ) ಜಾರಿಯಲ್ಲಿ ಸರ್ಕಾರದಿಂದಾಗುವ ಲೋಪಗಳು ಬೆಂಗಳೂರಿಗರು ನ್ಯಾಯಾಲಯಕ್ಕೆ ಮೊರೆ ಹೋಗಿ ನೇಮಕಾತಿಗಳಿಗೆ ತಡೆ ತರುವದಕ್ಕೆ ಅನುಕೂಲ ಮಾಡಿಕೊಟ್ಟಂತಿವೆ. ಕಳೆದ 10 ವರ್ಷಗಳಲ್ಲಿ ಅನೇಕ ನೇಮಕಾತಿಗಳ ವಿಷಯವಾಗಿ ನ್ಯಾಯಾಲಯದ ತಡೆಯಾಜ್ಞೆ ತರಲಾಗಿದ್ದು ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಬೀದರ್‌: ಬಸವಕಲ್ಯಾಣ ಎಟಿಎಂ ದೋಚಿದ್ದ ಆರೋಪಿ ದೆಹಲಿಯಲ್ಲಿ ಬಂಧನ

ಕಲ್ಯಾಣ ಕರ್ನಾಟಕ ಭಾಗವನ್ನು ಸರ್ಕಾರ ಸಂಪೂರ್ಣವಾಗಿ ಕಡೆಗೆಣಿಸಲಾಗುತ್ತಿದೆ. ಕಲಂ 371(ಜೆ) ಸೂಕ್ತವಾಗಿ ನಿರ್ವಹಿಸುವಲ್ಲಿ ಮತ್ತು ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷಿಸುತ್ತಿರುವದಕ್ಕೆ ಸಾಕ್ಷಿ ಎಂಬಂತೆ ನ್ಯಾಯಾಲಯಗಳಲ್ಲಿ ನಮ್ಮ ಪರವಾದ ವಾದಗಳು ಸೋಲುತ್ತಿವೆ ಎಂದು ಆರೋಪಿಸಿದರು.

ಹೀಗೆಯೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಕ್ಕಿರುವ ಸಂವಿಧಾನಾತ್ಮಕ ಹಕ್ಕನ್ನೂ ನೀಡುವಲ್ಲಿ ಸರ್ಕಾರ ನಿರ್ಲಕ್ಷವಹಿಸಿದರೆ ಈ ಭಾಗದ ಜನ ಸುಮ್ಮನೇ ಕೂರಲ್ಲ. ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದಂತೆ ನೇಮಕಾತಿ, ಮುಂಬಡ್ತಿಗಳ ಅಧಿಸೂಚನೆ ಹೊರಡಿಸುವತ್ತ ನಿಜ ಕಾಳಜಿಯನ್ನು ಮೆರೆಯಬೇಕು ಇಲ್ಲವಾದಲ್ಲಿ ನಾವು ಪ್ರತ್ಯೇಕ ರಾಜ್ಯದ ಕೂಗೆತ್ತುವಲ್ಲಿ ಸಂದೇಹವಿಲ್ಲ ಎಂದು ಲಕ್ಷ್ಮಣ ದಸ್ತಿ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾರಂಜಾ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್‌ ಹೊಚಕನಳ್ಳಿ, ರಿಶೈನ್‌ ಸಂಸ್ಥೆಯ ರೋಹನ್‌ ಮತ್ತಿತರರು ಇದ್ದರು.

click me!