ವಿಜಯಪುರ: ಮತ್ತೆ ಚಿಗುರೊಡೆದ ಇಂಡಿ ಜಿಲ್ಲಾ ಕೇಂದ್ರದ ಆಶಯ..!

By Kannadaprabha NewsFirst Published Dec 20, 2023, 9:30 PM IST
Highlights

ಇಂಡಿ ಜಿಲ್ಲಾ ಕೇಂದ್ರವಾಗಲು ಬೇಕಾಗಿರುವ ಪೂರಕ ವಾತಾವರಣದ ಕುರಿತು ಸರ್ಕಾರ ಕಂದಾಯ ಉಪವಿಭಾಗಾಧಿಕಾರಿಗಳಿಂದ ಅಭಿಪ್ರಾಯ ಕೇಳಿದ್ದು, ಇಂಡಿ ಜಿಲ್ಲಾ ಕೇಂದ್ರವಾಗುವ ಆಸೆ ಚಿಗುರೊಡೆಯುವಂತೆ ಮಾಡಿದೆ.

ಖಾಜು ಸಿಂಗೆಗೋಳ

ಇಂಡಿ(ಡಿ.20):  ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂಬ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಪ್ರತಿನಿತ್ಯ ವಿವಿಧ ಸಂಘಟನೆಯ ಹೋರಾಟಗಾರರು, ಬುದ್ಧಿಜೀವಿಗಳು, ಪ್ರಗತಿಪರ ಸಂಘಟನೆಗಳಿಂದ ಮನವಿಗಳ ಮಹಾಪೂರ ಹರಿದು ಬರುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಈ ಕುರಿತು ಧ್ವನಿ ಮೊಳಗಿಸಿದ್ದಾರೆ. ಇಂಡಿ ಜಿಲ್ಲಾ ಕೇಂದ್ರವಾಗಲು ಬೇಕಾಗಿರುವ ಪೂರಕ ವಾತಾವರಣದ ಕುರಿತು ಸರ್ಕಾರ ಕಂದಾಯ ಉಪವಿಭಾಗಾಧಿಕಾರಿಗಳಿಂದ ಅಭಿಪ್ರಾಯ ಕೇಳಿದ್ದು, ಇಂಡಿ ಜಿಲ್ಲಾ ಕೇಂದ್ರವಾಗುವ ಆಸೆ ಚಿಗುರೊಡೆಯುವಂತೆ ಮಾಡಿದೆ.

ನಂಜುಂಡಪ್ಪ ವರದಿಯ ಪ್ರಕಾರ ಇಂಡಿ ತಾಲೂಕು ಗಡಿಭಾಗದಲ್ಲಿದ್ದು, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿದೆ. ಹಿಂದುಳಿದ ಈ ಪ್ರದೇಶ ಅಭಿವೃದ್ಧಿ ಹೊಂದಲು ಉನ್ನತ ಶಿಕ್ಷಣ ಸಂಸ್ಥೆಗಳು, ಬೃಹತ್‌ ಕೈಗಾಗಿಕೆಗಳು, ವಾಣಿಜ್ಯ ಕೇಂದ್ರಗಳು ಸ್ಥಾಪನೆಯಾಗಬೇಕು. ಈ ಪ್ರದೇಶ ಜಿಲ್ಲಾ ಕೇಂದ್ರವಾದಾಗ ಮಾತ್ರ ಇಂತಹ ಅಭಿವೃದ್ಧಿ ಸಾಧ್ಯ ಎಂಬುದು ಸಾರ್ವಜನಿಕರ ಅಭಿಮತ.

ಕಲ್ಲು ಬಂಡೆಗೆ, ತಲೆಯಿಂದ ಡಿಚ್ಚಿ ಹೊಡೆಯೋ ಜಾತ್ರೆ: ರಕ್ತನೂ ಬರೊಲ್ಲ, ಗಾಯವೂ ಆಗೊಲ್ಲ!

ಜಿಲ್ಲಾ ಕೇಂದ್ರ ವಿಜಯಪುರ ಇಂಡಿ ತಾಲೂಕು ಕೇಂದ್ರದಿಂದ 60 ಕಿಮೀ, ತಾಲೂಕಿನ ಕಟ್ಟಕಡೆಯ ಗ್ರಾಮ 100 ರಿಂದ 120 ಕಿಮೀ ಅಂತರದಲ್ಲಿದೆ. ಹೀಗಾಗಿ ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಸಾರ್ವಜನಿಕರು ಕಚೇರಿ ಕೆಲಸಗಳಿಗೆ ಅಲೆದಾಟ ತಪ್ಪಿಸಲು ಇಂಡಿ ಜಿಲ್ಲಾ ಕೇಂದ್ರವಾಗಬೇಕು ಎಂಬ ಕೂಗು ಕೇಳಿಬರುತ್ತಿದೆ.

ಇಂಡಿ ಸುತ್ತಮುತ್ತಲಿನ ತಾಲೂಕುಗಳಾದ ಚಡಚಣ, ಆಲಮೇಲ, ಸಿಂದಗಿ, ದೇವರ ಹಿಪ್ಪರಗಿ ಒಳಗೊಂಡು ಇಂಡಿ ಜಿಲ್ಲಾ ಕೇಂದ್ರ ಮಾಡಬೇಕಿದೆ. ಈ ಎಲ್ಲ ತಾಲೂಕುಗಳು ನಂಜುಂಡಪ್ಪ ವರದಿಯಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಅತ್ಯಂತ ಹಿಂದುಳಿದ ತಾಲೂಕುಗಳು. ಈ ತಾಲೂಕುಗಳಿಗೆ ಮೂಲ ಸೌಕರ್ಯ ಒದಗಿಸಬೇಕಾದರೆ ವಿಜಯಪುರದಿಂದ ಇಂಡಿ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದರೆ ಸಾಧ್ಯ ಎಂಬುದು ಜಿಲ್ಲಾ ಹೋರಾಟಗಾರರ ಅಭಿಪ್ರಾಯವಾಗಿದೆ.

ಸಾಧ್ಯವಾಗಿಲ್ಲ ಅಭಿವೃದ್ಧಿ:

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂಡಿ, ಚಡಚಣ, ಆಲಮೇಲ, ಸಿಂದಗಿ, ದೇವರ ಹಿಪ್ಪರಗಿ ತಾಲೂಕುಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇದ್ದರೂ ಈ ತಾಲೂಕುಗಳಲ್ಲಿ ವಿಶ್ವವಿದ್ಯಾಲಯದಿಂದ ಪ್ರತ್ಯೇಕ ಮಹಿಳಾ ಸ್ನಾತಕೋತ್ತರ ಕೇಂದ್ರಗಳಾಗಲಿ, ಪದವಿ ಕಾಲೇಜುಗಳಾಗಲಿ ಸ್ಥಾಪನೆ ಮಾಡಿಲ್ಲ. ಇಂಡಿ ಹಾಗೂ ಚಡಚಣ ತಾಲೂಕುಗಳು ಸೇರಿ 12 ಅನುದಾನಿತ ಪಿಯು ಕಾಲೇಜುಗಳು, 21 ಅನುದಾನ ರಹಿತ ಖಾಸಗಿ ಕಾಲೇಜುಗಳು, 10 ಸರ್ಕಾರಿ ಪಿಯು ಕಾಲೇಜುಗಳು ಸೇರಿ ಒಟ್ಟು 43 ಪಿಯು ಕಾಲೇಜುಗಳು ಇವೆ. ಪ್ರತಿ ಕಾಲೇಜಿನಿಂದ ಅಂದಾಜು 30 ಜನ ವಿದ್ಯಾರ್ಥಿನಿಯರು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಪಾಸ್ ಮಾಡಿ ಹೊರಬಂದರೆ ಎಲ್ಲ ಕಾಲೇಜುಗಳಿಂದ 1290 ವಿದ್ಯಾರ್ಥಿನಿಯರು ಪ್ರತಿ ವರ್ಷ ಪಿಯುಸಿ ಕಲಿತು ಹೊರಗೆ ಬರುತ್ತಾರೆ.

ಆದರೆ, ಇಷ್ಟು ಜನ ವಿದ್ಯಾರ್ಥಿನಿಯರ ಸಂಖ್ಯೆ ಇದ್ದರೂ, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಕೇಂದ್ರಗಳು ಇಲ್ಲದಿರುವುದು ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಹೀಗಾಗಿ ಈ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಗಡಿಭಾಗದಲ್ಲಿರುವ ಇಂಡಿ ತಾಲೂಕು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಿ ಆದೇಶಿಸಬೇಕೆಂದು ಹೋರಾಟಗಾರರ ಆಗ್ರಹವಾಗಿದೆ.

ಜಿಲ್ಲಾ ಕೇಂದ್ರದ ಮಾಹಿತಿ ಕೇಳಿದ ಸರ್ಕಾರ

ಶಾಸಕ ಯಶವಂತರಾಯಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ನಡೆದ ಇಂಡಿ ಜಿಲ್ಲಾ ಕೇಂದ್ರದ ಚರ್ಚೆಯ ಬಳಿಕ ಸರ್ಕಾರ ಹಾಲಿ ಜಿಲ್ಲಾ ಕೇಂದ್ರ ಹಾಗೂ ಪ್ರಸ್ತುತ ರಚನೆ ಮಾಡುವ ಜಿಲ್ಲಾ ಕೇಂದ್ರದ ನಡುವಿನ ಅಂತರ, ದೂರದ ಜಿಲ್ಲಾ ಕೇಂದ್ರಕ್ಕೆ ಹೋಗಲು ಸಾರ್ವಜನಿಕರು ಪಡುತ್ತಿರುವ ತೊಂದರೆ, ಇಂಡಿ ಜಿಲ್ಲಾ ಕೇಂದ್ರ ಬಿಂದುವಾಗಿಟ್ಟುಕೊಂಡು ಯಾವ ಯಾವ ತಾಲೂಕುಗಳು ಒಳಗೊಳ್ಳುತ್ತವೆ ಹಾಗೂ ಆ ತಾಲೂಕುಗಳ ಜನಸಾಂದ್ರತೆ, ಪ್ರದೇಶದ ವ್ಯಾಪ್ತಿ, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ, ಜಿಲ್ಲಾ ಉಸ್ತುವಾರಿ ಸಚಿವರ ಅಭಿಪ್ರಾಯ, ಇಂಡಿ ಜಿಲ್ಲಾ ಕೇಂದ್ರವಾದರೆ ಲಭ್ಯವಿರುವ ಸರ್ಕಾರಿ ಕಚೇರಿಗಳ ಕಟ್ಟಡಗಳು, ಪ್ರಾರಂಭಿಸಬೇಕಾದ ಕಚೇರಿಗಳ ವಿವಿರ, ಇಂಡಿ ಜಿಲ್ಲಾ ಕೇಂದ್ರವಾದರೆ ಆವರ್ತಕ ಹಾಗೂ ಅನಾವರ್ತಕ ವೆಚ್ಚದ ವಿವರ ಸೇರಿದಂತೆ ಸ್ಪಷ್ಟ ಅಭಿಪ್ರಾಯವನ್ನು ಸರ್ಕಾರ ಉಪ ವಿಭಾಗಾಧಿಕಾರಿಗಳ ಮೂಲಕ ಕೇಳಿದೆ ಎಂದು ತಿಳಿದುಬಂದಿದೆ.

ಸಂಸತ್ ಭದ್ರತಾ ಲೋಪ ಪ್ರಕರಣ: ಪ್ರತಾಪ ಸಿಂಹ ವಿರುದ್ಧ ನಡೆದಿದೆ ಭಾರೀ ಸಂಚು, ಯತ್ನಾಳ್ ಹೇಳಿದ್ದೇನು?

ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶದಲ್ಲಿರುವ ಇಂಡಿ ತಾಲೂಕು ಎಲ್ಲ ಕ್ಷೇತ್ರದಲ್ಲಿಯೂ ಹಿಂದುಳಿದಿದೆ. ಈ ಭಾಗದಲ್ಲಿ ಉನ್ನತ ಶಿಕ್ಷಣ ಸಂಸ್ತೆಗಳು ಇಲ್ಲದೆ ಇರುವುದರಿಂದ ಗ್ರಾಮೀಣ ಪ್ರದೇಶದ ಯುವಕ,ಯುವತಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಯಾವುದೇ ಕೈಗಾರಿಕೆಗಳು ಇಲ್ಲದೆ ಇರುವುದರಿಂದ ಯುವಕರು ಉದ್ಯೋಗ ಅರಿಸುತ್ತ ಮಹಾರಾಷ್ಟ್ರ,ಗೋವಾ,ಪೂನೆ ನಗರಗಳಿಗೆ ಗೂಳೆ ಹೋಗುವಂತಾಗಿದೆ. ಹೀಗಾಗಿ ಈ ಎಲ್ಲ ಕ್ಷೇತ್ರಗಳ ಅಭಿವೃದ್ದಿಗಾಗಿ ಇಂಡಿ ಜಿಲ್ಲಾ ಕೇಂದ್ರ ಆಗುವುದು ಅವಶ್ಯಕವಾಗಿದೆ ಎಂದು ಇಂಡಿ ಮುಖಂಡರು ಜಗದೀಶ ಕ್ಷತ್ರಿ ಹೇಳಿದ್ದಾರೆ. 

ನಂಜುಂಡಪ್ಪ ವರದಿಯ ಪ್ರಕಾರ ಇಂಡಿ ಸಂಪೂರ್ಣ ಹಿಂದುಳಿದಿದೆ. ಸಮರ್ಪಕ ರೈಲು ಸೇವೆ ದೊರೆಯುತ್ತಿಲ್ಲ, ವಿಮಾನ ನಿಲ್ದಾಣವಂತೂ ಕನಸಿನ ಮಾತು. ಸ್ವತಂತ್ರ್ಯ ಬಂದು 75 ವರ್ಷ ಕಳೆದರೂ ಇಂಡಿ ತಾಲೂಕು ಇವತ್ತಿನ ವರೆಗೆ ಸಂಪೂರ್ಣ ನೀರಾವರಿಗೆ ಒಳಪಟ್ಟಿಲ್ಲ. ಸಾಕಷ್ಟು ರೈತರು ಲಿಂಬೆ ಬೆಳೆ ಬೆಳೆದರೂ ಸಾಗಾಣಿಕೆ ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇಂಡಿ ಲಿಂಬೆಗೆ ಜಾಗತಿಕ ಮಾನ್ಯತೆ ಲಭಿಸಿದರೂ ರಫ್ತು ಮಾಡುವ ವ್ಯವಸ್ಥೆ ಇಲ್ಲ. ಇವೆಲ್ಲ ಆಗಲು ಇಂಡಿ ಜಿಲ್ಲೆಯಾಗಬೇಕು ಎಂದು ಇಂಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಾವೀದ ಮೋಮಿನ್‌ ತಿಳಿಸಿದ್ದಾರೆ. 

click me!