* ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ರನ್ನು ಬಲಿಪಡೆದ ಕೊರೋನಾ
* ರಾಜಕೀಯ ವಿಶ್ಲೇಷಕರಾಗಿ ಗುರುತಿಸಿಕೊಂಡಿದ್ದರು
* ಈ ಭಾನುವಾರ ಪತ್ರಿಕೆಯ ಸಂಪಾದಕರಾಗಿದ್ದರು
* ಕರ್ನಾಟಕದ ರಾಜಕಾರಣದ ಬೆಳವಣಿಗೆ ಅಪಾರ ಜ್ಞಾನವಿತ್ತು
ಬೆಂಗಳೂರು(ಮೆ 14) ಕರ್ನಾಟಕದ ರಾಜಕೀಯ ಇತಿಹಾಸವನ್ನು ಸಂಪೂರ್ಣ ಬಲ್ಲವರಾಗಿದ್ದ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್(65) ಇನ್ನಿಲ್ಲ. ಕೊರೋನಾ ವೈರಸ್ ಅವರ ಪ್ರಾಣವನ್ನು ಬಲಿಪಡೆದಿದೆ.
ಸಿಎಂ ಯಡಿಯೂರಪ್ಪ ಅವರಿಗೆ ರಾಜಕೀಯ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸಿದ್ದರು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಂದಿನ ರಾಜಕಾರಣದ ಬೆಳವಣಿಗೆಗಳ ಜ್ಞಾನ ಅವರಲ್ಲಿತ್ತು. ಪಕ್ಷಗಳು ಬೆಳೆದ ರೀತಿ, ಚುನಾವಣೆ, ರಾಜಕೀಯ ಧ್ರುವೀಕರಣ, ಪಕ್ಷಾಂತರ ಮತ್ತು ಪರಿಣಾಮ ಹೀಗೆ ಎಲ್ಲ ವಿಚಾರಗಳನ್ನು ವಿಶ್ಲೇಷಿಸುವ ಶಕ್ತಿ ಇದ್ದ ಹಿರಿಯ ಪತ್ರಕರ್ತ ದೂರವಾಗಿದ್ದಾರೆ.
ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದು ಜೈನ್ ಇನ್ನು ನೆನಪು ಮಾತ್ರ
ಈ ಭಾನುವಾರ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದ ಪ್ರಕಾಶ್ ವಿಶ್ಲೇಶಕರಾಗಿಯೇ ಗುರುತಿಸಿಕೊಂಡವರು. ಕೊರೋನಾ ಸೋಂಕು ತಗುಲಿ ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಮಹದೇವ್ ಪ್ರಕಾಶ್ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕದಚುನಾವಣೆ, ರಾಜಕೀಯ ಬದಲಾವಣೆ, ರಾಜಕಾರಣದ ನಾಯಕರು ತೆಗೆದುಕೊಂಡ ತೀರ್ಮಾನಗಳು ನಂತರ ಅವರು ಎದುರಿಸಿದ ಲಾಭ-ನಷ್ಟ ಎಲ್ಲವನ್ನು ವಿವರಿಸುತ್ತಿದ್ದ ಮಹದೇವ್ ಪ್ರಕಾಶ್ ಇನ್ನು ನೆನಪು ಮಾತ್ರ
1975ರಲ್ಲಿ ಮಾಜಿ ಸಿಎಂ ವೀರೇಂದ್ರ ಪಾಟೀಲರು ಆರಂಭಿಸಿದ್ದ ಲೋಕವಾಣಿ ಎಂಬ ದಿನ ಪತ್ರಿಕೆ ಮೂಲಕ ಪತ್ರಿಕೋದ್ಯಮ ಆರಂಭಿಸಿದ್ದರು. ಬಳಿಕ ಈ ಭಾನುವಾರ ಎಂಬ ನಿಯತಕಾಲಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಹೊರಳು ನೋಟ ಎಂಬ ಅಂಕಣದ ಮೂಲಕ ಪ್ರಸ್ತುತ ರಾಜಕೀಯ ಘಟನೆಗಳನ್ನು ವಿಶ್ಲೇಷಣೆ ಮಾಡುತ್ತಿದ್ದರು. 'ಸದನದಲ್ಲಿ ದೇವರಾಜ ಅರಸು' ಕೃತಿಯನ್ನು ರಚಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರ ಒಂದು ವರ್ಷ ಆಡಳಿತ ಕುರಿತು 'ದಣಿವರಿಯದ ಧೀಮಂತ' ಎಂಬ ಪುಸ್ತಕ ಹೊರತಂದಿದ್ದರು. ಸಿಎಂ ರಾಜಕೀಯ ಸಲಹೆಗಾರಾಗಿದ್ದ ಸಂದರ್ಭ ಅವರಿಗೆ ರಾಜ್ಯೋತ್ಸವ ಪುರಸ್ಕಾರ ಸಿಕ್ಕಿತ್ತು. ಆದರೆ ಅದನ್ನು ನಿರಾಕರಣೆ ಮಾಡಿದ್ದರು.
ಖ್ಯಾತ ಲೇಖಕ, ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್ ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ನನ್ನ ಮಾಧ್ಯಮ ಸಲಹೆಗಾರರಾಗಿಯೂ ಅವರು ಕೆಲಸ ಮಾಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.
— B.S. Yediyurappa (@BSYBJP)ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ನಿಧನಕ್ಕೆ ಡಿಸಿಎಂ ಕಂಬನಿ
ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿದ್ದ ಮಹದೇವ ಪ್ರಕಾಶ್ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ನಾಡಿನ ಹಿರಿಯ ಪತ್ರಕರ್ತರಾಗಿದ್ದ ಅವರು ಅತ್ಯುತ್ತಮ ವಾಗ್ಮಿ & ರಾಜಕೀಯ ವಿಶ್ಲೇಷಕರಾಗಿದ್ದರು. ʼಈ ಭಾನುವಾರʼ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಅನೇಕ ಪತ್ರಿಕೆಗಳಿಗೆ ಅವರು ಬರೆಯುತ್ತಿದ್ದ ರಾಜಕೀಯ ಅಂಕಣಗಳಿಗೆ ಅಗಾಧ ಪ್ರಮಾಣದ ಓದುಗರಿದ್ದರು. ಮೊನಚಾಗಿ ಅವರು ರಾಜಕೀಯ ಬೆಳವಣಿಗೆಗಳನ್ನು ವಿಶ್ಲೇಷಣೆ ಮಾಡುತ್ತಿದ್ದರು.
ಮಹದೇವ ಪ್ರಕಾಶ್ ಅವರ ನಿಧನ ನೋವುಂಟು ಮಾಡಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಡಿಸಿಎಂ ಅವರು ಪ್ರಾರ್ಥನೆ ಮಾಡಿದ್ದಾರೆ.