* ಲಾಕ್‌ಡೌನ್‌ನಲ್ಲಿ ಪರ್ಯಾಯ ಮಾರ್ಗ ಕಂಡುಕೊಂಡ ಮದ್ಯದ ವ್ಯಾಪಾರಿಗಳು
* ಹಳ್ಳಿಗಳೇ ಲೂಸ್ ಮಾರಾಟದ ಕೇಂದ್ರಗಳು, ದಾರಿಯುದ್ದಕ್ಕೂ ಸಿಗುತ್ತದೆ ಮದ್ಯ
* ಮನೆ ಮನೆಯಲ್ಲಿ ಕೇಸ್‌ಗಟ್ಟಲೇ ಮದ್ಯ ಪತ್ತೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.09): ಲಾಕ್‌ಡೌನ್ ಉಳಿದೆಲ್ಲಕ್ಕೂ ಇದೆ. ಆದರೆ, ಮದ್ಯ ಮಾರಾಟ ಮತ್ತು ಬಾಡೂಟಕ್ಕೆ ಮಾತ್ರ ಇಲ್ಲ!ಈಗೀಗಂತೂ ಹಳ್ಳಿ ಹಳ್ಳಿಯ, ಮನೆ ಮನೆಯಲ್ಲಿಯೂ ಮದ್ಯ, ಮಾಂಸ ದೊರೆಯುತ್ತಿದೆ. ಅಷ್ಟೇ ಯಾಕೆ, ಇದ್ದಲ್ಲಿಗೆ ಮದ್ಯ ಮತ್ತು ಮಾಂಸ ಸರಬರಾಜು ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ.
ಹೌದು, ಲಾಕ್‌ಡೌನ್‌ನಲ್ಲಿ ಜಿಲ್ಲಾದ್ಯಂತ ಮತ್ತು ಮಾಂಸ ಗಲ್ಲಿ ಗಲ್ಲಿ, ಹಳ್ಳಿ ಹಳ್ಳಿಯಲ್ಲಿಯೂ ಸುಲಭವಾಗಿ ಸಿಗುತ್ತಿದೆ. ಕೇಸ್‌ಗಟ್ಟಲೇ ಖರೀದಿ ಮಾಡಿಕೊಂಡು, ದಾರಿ ದಾರಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಮದ್ಯ ವ್ಯಾಪಾರಿಗಳು ಇದಕ್ಕಾಗಿ ಈಗ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ. ಮನೆ ಮನೆಯಲ್ಲಿ ಸ್ಟಾಕ್ ಮಾಡಿ, ಯಥೇಚ್ಛವಾಗಿ ಮಾರಾಟ ಮಾಡುತ್ತಿದ್ದಾರೆ.
ಬಯಲು ಬಾರ್‌ಗಳು:
ಸಂಜೆಯಾಗುತ್ತಿದ್ದಂತೆ ನಗರ ಮತ್ತು ಹಳ್ಳಿಗಳ ಸುತ್ತಲೂ ಸುತ್ತಿದರೆ ಸಾಕು ಬಯಲು ಬಾರ್‌ಗಳು ತೆರೆದುಕೊಂಡಿರುತ್ತವೆ. ಅಲ್ಲಲ್ಲಿ ಗುಂಪು ಗುಂಪಾಗಿ ಮದ್ಯ ಸೇವಿಸುತ್ತಾ ಕುಳಿತಿರುವುದು ಸಾಮಾನ್ಯವಾಗಿದೆ. ಅಷ್ಟೇ ಯಾಕೆ ನಗರ ಪ್ರದೇಶದಲ್ಲಿಯೇ ಪೋದೆಗಳ ಬಳಿ, ಸೇತುವೆ ಕೆಳಗೆ ಮದ್ಯ ಸೇವಿಸುವುದು ಬಹಿರಂಗವಾಗಿಯೇ ನಡೆಯುತ್ತಿರುತ್ತದೆ. ಅಲ್ಲಿಗೆ ಬೈಕ್‌ನಲ್ಲಿ ಬಂದು ಮದ್ಯ ಕೊಟ್ಟು ಹೋಗುತ್ತಿರುತ್ತಾರೆ.
'ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುವುದು ಒಳಿತು'
ಬಾಡೂಟವೂ ಲಭ್ಯ:
ಮದ್ಯ ದೊರೆಯುವಂತೆಯೇ ಮಾಂಸದೂಟವೂ ಸುಲಭವಾಗಿ ದೊರೆಯುತ್ತಿದೆ. ಕರೆ ಮಾಡಿ, ಆರ್ಡ್‌ರ್ ಮಾಡಿದರೆ ಸಾಕು. ಇದ್ದಲ್ಲಿಗೆ ಬಂದು ಕೊಟ್ಟು ಹೋಗುತ್ತಾರೆ. ಇದಕ್ಕೆ ಸ್ವಲ್ಪ ಹೆಚ್ಚುವರಿ ಹಣ ನೀಡಬೇಕಷ್ಟೇ. ಮೇಲ್ನೋಟಕ್ಕೆ ಬಾರ್ ಮತ್ತು ರೆಸಾರ್ಟ್‌ಗಳು ಬಂದಾಗಿದ್ದರೂ ತೆರೆಯ ಹಿಂದೆ ಅವು ಎಂದಿನಂತೆ ವ್ಯಾಪಾರ ನಡೆಸುತ್ತಿವೆ. ಇದೀಗ ಹೊಸ ಟ್ರೆಂಡ್ ಸಹ ಆರಂಭವಾಗಿದ್ದು, ಮನೆಯಲ್ಲಿಯೇ ಆಹಾರ ಸಿದ್ಧ ಮಾಡಿಕೊಂಡು ನೀವು ಹೇಳುವ ಜಾಗಕ್ಕೆ ಅದನ್ನು ತಲುಪಿಸುವ ವ್ಯವಸ್ಥೆಯೂ ಇದೆ.
ಮಕ್ಕಳೇ ಸಪ್ಲಾಯರ್:
ಹೀಗೆ ಮದ್ಯದ ವ್ಯಾಪಾರ ಮತ್ತು ವಹಿವಾಟನ್ನು ಮಕ್ಕಳ ಮೂಲಕವೇ ಮಾಡಿಸುವುದೂ ಸಹ ಕಂಡು ಬರುತ್ತಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಮನಗರ ಘಟನೆ ಬೆಳಕಿಗೆ ಬಂದಿದೆ ಅಷ್ಟೆ. ಆದರೆ, ಹೀಗೆ ಸರಬರಾಜು ಮಾಡುತ್ತಲೇ ಅದೆಷ್ಟೋ ವಿದ್ಯಾರ್ಥಿಗಳು ಅದರ ದಾಸರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಶಾಲೆ ಇಲ್ಲದಿರುವುದರಿಂದ ಖಾಲಿ ಇರುವ ಮಕ್ಕಳು ಇಂಥ ಅಡ್ಡ ಹಾದಿ ತುಳಿಯುವುದರಲ್ಲಿ ಅನುಮಾನವೇ ಇಲ್ಲ.
ಮನೆಯಲ್ಲೇ ಹೆಚ್ಚು:
ಕೊಪ್ಪಳ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ದಾಳಿ ಮಾಡುತ್ತಿದ್ದು, ಮನೆ ಮನೆಯಲ್ಲಿ ಕೇಸ್‌ಗಟ್ಟಲೇ ಮದ್ಯ ಪತ್ತೆಯಾಗುತ್ತಿದೆ. ಕಳೆದ ಒಂದು ವಾರದಲ್ಲಿ ಹತ್ತಾರು ದಾಳಿಗಳನ್ನು ಮಾಡಲಾಗಿದ್ದು, ಬಹುತೇಕರ ಮನೆಯಲ್ಲಿ ಅಂಗಡಿಗಿಂತಲೂ ಅಧಿಕ ಮದ್ಯ ಪತ್ತೆಯಾಗಿದೆ.
ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದ 6ನೇ ವಾರ್ಡ್‌ನ ದುರ್ಗಾಂಬಿಕಾ ದೇವಸ್ಥಾನದ ಬಳಿ ಮನೆಯೊಂದರ ಮೇಲೆ ದಾಳಿ ಮಾಡಿದಾಗ 16.9 ಲೀಟರ್ ಮದ್ಯ ಹಾಗೂ 3.9 ಲೀಟರ್ ಬಿಯರ್ ಅಕ್ರಮ ಮದ್ಯೆ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿ, ಜಪ್ತು ಮಾಡಲಾಗುತ್ತಿದೆ. ಖಚಿತ ಮಾಹಿತಿ ನೀಡುತ್ತಿದ್ದಂತೆ ದಾಳಿ ಮಾಡಿ, ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರು ಸಿ. ಸೇಲಿನಾ ತಿಳಿಸಿದ್ದಾರೆ.