'ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುವುದು ಒಳಿತು'

By Kannadaprabha NewsFirst Published Jun 9, 2021, 11:10 AM IST
Highlights

*  ಕೋವಿಡ್‌ ಸಂಕಷ್ಟದಲ್ಲಿಯೂ ರಾಜಕೀಯ; ರಾಘವೇಂದ್ರ ಹಿಟ್ನಾಳ
* ಕೋವಿಡ್‌ ಸಂಕಷ್ಟ ನೀಗಿಲ್ಲ, ಬ್ಲ್ಯಾಕ್‌ ಫಂಗಸ್‌ಗೆ ಔಷಧಿ ಸಿಗ್ತಿಲ್ಲ
* ಔಷಧಿ ಇಲ್ಲದೆ ಸಾಯುತ್ತಿರುವ ಬ್ಲ್ಯಾಕ್‌ ಫಂಗಸ್‌ ರೋಗಿಗಳು 

ಕೊಪ್ಪಳ(ಜೂ.09): ರಾಜ್ಯದಲ್ಲಿ ಕೋವಿಡ್‌ ಸಂಕಷ್ಟ ನೀಗಿಲ್ಲ, ಬ್ಲ್ಯಾಕ್‌ ಫಂಗಸ್‌ಗೆ ಔಷಧಿ ಸಿಗ್ತಿಲ್ಲ. ಅಭಿವೃದ್ಧಿಯಂತೂ ಮರೆಮಾಚಿ ಹೋಗಿದೆ. ಇಂಥ ಸಂದರ್ಭದಲ್ಲಿ ರಾಜಕೀಯ ಕಿತ್ತಾಟಕ್ಕಿಂತ ಸಿ.ಎಂ. ಹುದ್ದೆಗೆ ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದೇ ಒಳಿತು ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಬ್ಲ್ಯಾಕ್‌ ಫಂಗಸ್‌ ರೋಗಿಗಳು ಔಷಧಿ ಇಲ್ಲದೆ ಸಾಯುತ್ತಿದ್ದಾರೆ. ಅದಕ್ಕೆ ವಿಧಿಸಿರುವ ನೂರೆಂಟು ಷರತ್ತಿನಿಂದಾಗಿ ಆಸ್ಪತ್ರೆಗೂ ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು. ಈಗ ಸ್ವತಃ ಸಿ.ಎಂ. ಯಡಿಯೂರಪ್ಪ ಅವರೇ ರಾಜೀನಾಮೆ ಪ್ರಸ್ತಾಪ ಮಾಡಿದ್ದಾರೆ ಎಂದರೆ ವಾಸ್ತವ ಅರ್ಥವಾಗುತ್ತದೆ ಎಂದರು.

ಅಧಿಕಾರ ನೀಡಿದ ಜನರಿಗೆ ಬಿಜೆಪಿ ಶಾಸಕ ದಢೇಸ್ಗೂರು ಸಾವಿನ ಕಾಣಿಕೆ: ತಂಗಡಗಿ

ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಆ ಪಕ್ಷದ ಶಾಸಕರೇ ಒಪ್ಪಿಕೊಳ್ಳುತ್ತಾರೆ. ಅನೇಕ ಶಾಸಕರು ನನ್ನ ಸ್ನೇಹಿತರಿದ್ದಾರೆ. ಅವರು ಮಾತನಾಡಿದಾಗಲೆಲ್ಲಾ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅಯ್ಯೋ ಒಂದೂ ಕೆಲಸ ಆಗುತ್ತಿಲ್ಲ. ಯಾರ ಬಳಿ ದೂರಬೇಕು ಗೊತ್ತಾಗುತ್ತಿಲ್ಲ. ಜನರು ಬೈಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕಳೆದೆರಡು ವರ್ಷಗಳಿಂದ ನಯಾಪೈಸೆ ನೀಡಿಲ್ಲ. ಹೀಗಾದರೆ ಅಭಿವೃದ್ಧಿ ಮಾಡುವುದಾದರೂ ಹೇಗೆ? ಹಲವು ದಿನಗಳಿಂದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಈಗ ಸಿ.ಎಂ. ಬದಲಾವಣೆ ವಿಚಾರ ಮೇಲೆದ್ದಿದೆ. ಇದು ಆಡಳಿತ ವೈಫಲ್ಯ ಮುಚ್ಚಿಹಾಕಲು ಮಾಡುತ್ತಿರುವ ತಂತ್ರ ಅಷ್ಟೇ. ಇದು ಅವರ ಪಕ್ಷದ ಆಂತರಿಕ ವಿಚಾರವಾದರೂ ನಿಮ್ಮ ಸಮಸ್ಯೆಯಿಂದ ಜನರ ಜೀವದ ಜೊತೆ ಚಲ್ಲಾಟವಾಡಬೇಡಿ ಎಂದಷ್ಟೇ ಹೇಳುತ್ತೇನೆ. ವ್ಯಾಪಕವಾಗಿ ಲಸಿಕೆ ಹಾಕಿಸಿ, ಬ್ಲ್ಯಾಕ್‌ ಫಂಗಸ್‌ಗೆ ಔಷಧಿ ನೀಡಿ ಎಂದು ಆಗ್ರಹಿಸಿದರು.

ನಾನೇ ಕಳುಹಿಸಿದ ಎಷ್ಟೋ ಜನರನ್ನು ಕೊಪ್ಪಳದಲ್ಲಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುತ್ತಿಲ್ಲ. ಔಷಧಿ ನೀಡಲು ಆನ್‌ಲೈನ್‌ನಲ್ಲಿ ಅನುಮತಿ ಬೇಕು ಎನ್ನುತ್ತಾರೆ. ರೋಗಿಗಳ ಪರಿಸ್ಥಿತಿ ಗಂಭೀರವಾಗಿದ್ದು ಅಷ್ಟರಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾದರೆ ಯಾರು ಜವಾಬ್ದಾರಿ, ಇದೆಂಥ ಆಡಳಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೋಗಿ ಸರ್ಕಾರಿ ಆಸ್ಪತ್ರೆಗೆ ಬಂದರೂ ಪ್ರಯೋಗಾಲಯ ವರದಿ ಬರುವವರಿಗೂ ಆತನನ್ನು ದಾಖಲಿಸಿಕೊಳ್ಳುವುದಿಲ್ಲವಂತೆ. ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಇಲ್ಲ. ಬ್ಲ್ಯಾಕ್‌ ಫಂಗಸ್‌ ರೋಗಿಗೆ ನೀಡುವ ಔಷಧದ ವಯಲ್‌ಗಳು ಬಂದಿಲ್ಲವಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 

click me!