ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ

By Kannadaprabha News  |  First Published Sep 5, 2023, 8:37 AM IST

ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಸುಮಾರು ೨ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕ್ಷೀರ ಭವನವನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.


 ತುರುವೇಕೆರೆ :  ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಸುಮಾರು ೨ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಕ್ಷೀರ ಭವನವನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮತ್ತು ಶಾಸಕ ಎಂ.ಟಿ.ಕೃಷ್ಣಪ್ಪನವರು ಕ್ಷೀರಭವನವನ್ನು ಲೋಕಾರ್ಪಣೆಗೊಳಿಸಿದರು.

Tap to resize

Latest Videos

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪನವರು ಹೈನುಗಾರಿಕೆಯಿಂದ ಹಳ್ಳಿಗಾಡಿನ ರೈತರು ತನ್ನ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ. ಉತ್ತಮವಾದ ಕಟ್ಟಡ ಕಟ್ಟಲು ಕಾರಣರಾದ ತುಮುಲ್ ಅಧ್ಯಕ್ಷ ಮಹಾಲಿಂಗಯ್ಯರಿಗೆ ಕೃಷ್ಣಪ್ಪ ಅಭಿನಂದನೆ ಸಲ್ಲಿಸಿದರು.

ಒಳ್ಳೆಯದಲ್ಲ:

ಹೊಸ ಸರ್ಕಾರ ಬಂದು ೩ ತಿಂಗಳಾದರೂ ಕೇವಲ ಗ್ಯಾರಂಟಿ ಭಾಗ್ಯದಲ್ಲಿ ಮುಳುಗಿದೆ. ಅಭಿವೃದ್ಧಿಗೆ ಹಣ ನೀಡದಿದ್ದರೆ ಜನರಿಗೆ ಉತ್ತರ ಕೊಡೋಕ್ಕಾಗಲ್ಲ. ಮಳೆ ಇಲ್ಲ ಬರಗಾಲ ಆವರಿಸಿದೆ. ಇದ್ದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ್ದಾರೆ. ಸರ್ಕಾರ ಬರಗಾಲ ಎಂದು ಮೊದಲೇ ಘೋಷಣೆ ಮಾಡಿದ್ದರೆ ತಮಿಳುನಾಡಿಗೆ ನೀರು ಬಿಡುವ ಅವಶ್ಯಕತೆ ಬರುತ್ತಿರಲಿಲ್ಲ ಎಂದು ಹೇಳಿದರು.

ಕೊಬ್ಬರಿ ಬೆಲೆಗಾಗಿ ಪಾದಯಾತ್ರೆ: ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ ನೀಡುವಂತೆ ಆಗ್ರಹಿಸಿ ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ ಶಾಸಕ ಎಂ.ಟಿ.ಕೃಷ್ಣಪ್ಪನವರು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು ರೈತರು, ಸಹಕಾರ ಸಂಘಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.

ತುಮುಲ್ ಅಧ್ಯಕ್ಷ ಸಿ.ವಿಮಹಾಲಿಂಗಯ್ಯ ಮಾತನಾಡಿ ಜಿಲ್ಲೆಯಲ್ಲಿ 1338 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು ೮೬ ಸಾವಿರ ರೈತರು ಹಾಲು ಹಾಕುತ್ತಿದ್ದಾರೆ. ಪ್ರತಿ ತಿಂಗಳು ೯೭ ಕೋಟಿ ರೂ ರೈತರ ಖಾತೆಗೆ ಹಣ ಸಂದಾಯ ಮಾಡುತ್ತಿದ್ದೇವೆ. ಪ್ರಸ್ತುತ ೩೬.೭ ಪೈಸೆ ಲೀಟರ್ ಗೆ ಹಾಲಿನ ದರವನ್ನು ನೀಡುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಹೈನೋದ್ಯಮ ನಡೆಯದೆ ಸುಮಾರು ೧೪೮ ಕೋಟಿ ಸಾಲ ಮಾಡಿ ರೈತರಿಗೆ ಬಟವಾಡೆ ಮಾಡಲಾಗಿತ್ತು. ಕೋವಿಡ್ ಸಮಯದಲ್ಲಿ ಮರಣ ಹೊಂದಿದ ೧೨೯ ರೈತರಿಗೂ ತಲಾ ಒಂದು ಲಕ್ಷದಂತೆ ಪರಿಹಾರ ನೀಡಲಾಗಿದೆ. ಕೋವಿಡ್ ನಂತರ ಹೈನೋದ್ಯಮ ಚೇತರಿಕೆಯಾಗಿ ಪ್ರಸ್ತುತ ೧೨೬.೨೮ ಕೋಟಿ ನಿಶ್ಚಿತ ಠೇವಣಿ ಇಟ್ಟಿದ್ದು ಸುಮಾರು ೭ ಲಕ್ಷ ಬಡ್ಡಿ ಹಣ ತುಮಲ್‌ಗೇ ಬರುತ್ತಿದೆ. ಪ್ರತಿ ತಾಲೂಕಿನಲ್ಲಿಯೂ ಕ್ಷೀರಭವನ ಮಾಡಲಾಗುತ್ತಿದೆ. ಈ ಕ್ಷೀರಭವನವನ್ನು ೧೦ ತಿಂಗಳಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗಿದ್ದು ರೈತರಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಇ.ಹಾಗೂ ಡಿಪ್ಲೋಮೊ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್, ತುಮುಲ್ ನಿರ್ದೇಶಕರಾದ ಎಂ.ಕೆ.ಪ್ರಕಾಶ್, ಚಂದ್ರಶೇಖರ್, ಎಸ್.ಆರ್.ಗೌಡ, ಚನ್ನಮಲ್ಲಪ್ಪ, ಈಶ್ವರಯ್ಯ, ನಾರಾಯಣ, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಅಪ್ಪಾಜಿಗೌಡ, ಎ.ಬಿ.ಜಗದೀಶ್, ಹಿಂಡಮಾರನಹಳ್ಳಿನಾಗರಾಜು, ಎಂ.ಡಿ.ಮೂರ್ತಿ, ಎನ್.ಆರ್.ಜಯರಾಮ್, ದೇವರಾಜು, ಹಟ್ಟಿಹಳ್ಳಿ ಪುಟ್ಟೇಗೌಡ, ಹೆಡಗಿಹಳ್ಳಿ ವಿಶ್ವನಾಥ್, ವಿಜಯೇಂದ್ರ, ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್ ಸೇರಿದಂತೆ ತಾಲೂಕಿನ ಡೈರಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಹಾಲು ಉತ್ಪಾದಕ ಬಂಧುಗಳು ಹಾಜರಿದ್ದರು.

click me!