5 ಗ್ಯಾರಂಟಿಗಳಿಂದ ರಾಜ್ಯದ 1.32 ಕೋಟಿ ಕುಟುಂಬ ಆರ್ಥಿಕ ಸ್ವಾವಲಂಬನೆ ಆಗಲಿದೆ. ಪ್ರತಿ ಕುಟುಂಬಕ್ಕೆ 60 ಸಾವಿರ ತಲುಪಲಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸ್ವಾವಲಂಬನೆ ಬಂದಿದೆ: ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ
ಮೈಸೂರು(ಆ.14): ದೇಶ ಸ್ವಾತಂತ್ರ್ಯ ಪಡೆದ ನಂತರ ದಲಿತರು, ಹಿಂದುಳಿದವರು, ರೈತರು, ಮಹಿಳೆಯರ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಆದರೆ, ಪ್ರತಿ ಕುಟುಂಬಕ್ಕೆ ಯೋಜನೆ ತಲುಪಿಸಿದ ಶ್ರೇಯಸ್ಸು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ನಗರ ಇಂದಿರಾ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ 76ರ ಸಂಭ್ರಮದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಜನೋತ್ಸವದ ಅವಲೋಕನ- ರಾಜ್ಯ ಮಟ್ಟದ ವಿಚಾರ ಮಂಥನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
undefined
ಇಲ್ಲೇ ನೀರಿಲ್ಲ, ತಮಿಳುನಾಡಿಗೆ ಕೊಡೋದ್ಹೇಗೆ?: ಸಿಎಂ ಸಿದ್ದರಾಮಯ್ಯ
5 ಗ್ಯಾರಂಟಿಗಳಿಂದ ರಾಜ್ಯದ 1.32 ಕೋಟಿ ಕುಟುಂಬ ಆರ್ಥಿಕ ಸ್ವಾವಲಂಬನೆ ಆಗಲಿದೆ. ಪ್ರತಿ ಕುಟುಂಬಕ್ಕೆ 60 ಸಾವಿರ ತಲುಪಲಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸ್ವಾವಲಂಬನೆ ಬಂದಿದೆ ಎಂದು ಅವರು ಹೇಳಿದರು.
ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳು ಆಗಿಲ್ಲ. ಡಿಮ್ಯಾಂಡ್, ಪೆನ್‌ಡ್ರೈವ್ ಮಾತಾಡಲು ಶುರು ಮಾಡಿದರು. ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳಿನ ಸರಮಾಲೆ ಹೊದಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಎಚ್ಚೆತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಅಚ್ಚಳಿಯದೇ ಉಳಿಯುವಂತೆ ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುತ್ಸದ್ಧಿ ರಾಜಕಾರಣಿ. 4 ದಶಕಗಳಿಂದ ಒಟ್ಟಿಗೆ ರಾಜಕಾರಣ ಮಾಡಿದ್ದೇವೆ. ನಾನು ಅವರ ಪೊಲಿಟಿಕಲ್ ಸ್ಟೆ್ರಂತ್. 76ನೇ ವಯಸ್ಸಿನಲ್ಲೂ ಅವರ ಕೆಲಸ ಮಾಡುವ ರೀತಿಯನ್ನು ಗಮನಿಸಿದರೆ ಅವರಿಗೆ ಅಷ್ಟುವಯಸ್ಸಾಗಿಲ್ಲ ಅನಿಸುತ್ತದೆ. ಅವರ ನಿಲುವು ಮತ್ತು ಬದ್ಧತೆಯಿಂದ ನಾಡಿನ ಜನತೆ 2ನೇ ಬಾರಿಗೆ ಅಧಿಕಾರ ಕೊಟ್ಟರು. ರಾಜ್ಯದ ಪ್ರತಿ ಪ್ರಜೆಯನ್ನು ಒಳಗೊಂಡ ಸಮಾಜ ನಿರ್ಮಿಸುವ ಅವರು, ಅರಸು ಅವರ ಮಾರ್ಗದಲ್ಲಿ ಅದಕ್ಕಿಂತ ಉನ್ನತವಾದ ಆಡಳಿತ ನೀಡುತ್ತಿದ್ದಾರೆ. ಅವರನ್ನು ಪಡೆದ ಕರ್ನಾಟಕ ಧನ್ಯ ಎಂದು ಅವರು ಬಣ್ಣಿಸಿದರು.
ಸಿದ್ದರಾಮಯ್ಯ ಅರ್ಥ ಆಗಬೇಕಾದರೆ ಅವರು ಮಂಡಿಸಿರುವ ಬಜೆಟ್ ನೋಡಬೇಕು. ಒಂದೂ ಬಜೆಟ್ ಧರ್ಮ, ಜಾತಿಯ ಪರವಾಗಿಲ್ಲ. ಮತಗೋಸ್ಕರ ಕೆಲಸ ಮಾಡದೇ ಸಾಮಾಜಿಕ ನ್ಯಾಯಕ್ಕೆ ಸದಾ ಬದ್ಧರಾಗಿದ್ದಾರೆ. ಹಿಂದೆ ಮುಖ್ಯಮಂತ್ರಿಯಾಗಿ ಸಣ್ಣ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ಕೊಟ್ಟರು. ಅದಕ್ಕಿಂತ ಸಾಧನೆ ಇನ್ನೇನುಬೇಕು ಎಂದು ಅವರು ಪ್ರಶ್ನಿಸಿದರು.
ಗ್ಯಾರಂಟಿಯಿಂದ ಕಮಿಷನ್ ಇಲ್ಲ
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಇವತ್ತು ಗ್ಯಾರಂಟಿಗಳ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದೆ. ಉಚಿತ ಎಂದು ಗೇಲಿ, ಟೀಕೆ ಮಾಡಲಾಗುತ್ತಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೂ ಉಚಿತ ಅಲ್ಲ. ಇದು ಸಂವಿಧಾನ ಬದ್ಧವಾದದ್ದು. 3.27 ಲಕ್ಷ ಕೋಟಿ ಬಜೆಟ್‌ನಲ್ಲಿ 5 ಗ್ಯಾರಂಟಿಗಳ ಅನುಷ್ಠಾನಕ್ಕೆ 35 ಸಾವಿರ ಕೋಟಿ ಖರ್ಚಾಗುತ್ತೆ. ಇದರಿಂದ ಯಾವ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುವುದಿಲ್ಲ. ರಾಜಕಾರಣಿಗಳಿಗೆ ಕಮಿಷನ್ ಸಿಗುವುದಿಲ್ಲ. ನೇರವಾಗಿ ಜನರ ಖಾತೆಗೆ ಹೋಗುತ್ತದೆ ಎಂದು ಹೇಳಿದರು.
119 ದೇಶಗಳು ಉಚಿತ ಯೋಜನೆಗಳನ್ನು ಕೊಡುತ್ತಿವೆ. ಜನರಿಗೆ ಕತ್ತಿ, ತಲವಾರ್, ತ್ರಿಶೂಲ ಹಂಚುವುದು ಮಹಿಳೆಯರು, ಅಲ್ಪಸಂಖ್ಯಾತರು, ದಲಿತರ ಮೇಲೆ ದೌರ್ಜನ್ಯಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಆದರೆ, ಈ ದುಷ್ಕೃತ್ಯಗಳನ್ನು ಒಂದು ಪಕ್ಷ ಬೆಂಬಲಿಸುತ್ತದೆ. ಅವರು ಮಾತ್ರ ಗ್ಯಾರಂಟಿ ಯೋಜನೆ ವಿರೋಧಿಸುತ್ತಾರೆ ಎಂದರು.
ಪ್ರಧಾನಿ ಮೋದಿ ಅವರು ಬಿಟ್ಟಿ ಭಾಗ್ಯಗಳಿಂದ ಖಜಾನೆ ಖಾಲಿ ಎಂದು ಟೀಕಿಸಿದ್ದಾರೆ. ಹಾಗಾದರೆ ಬಿಜೆಪಿ ಪ್ರಣಾಳಿಕೆಯಲ್ಲಿ ವರ್ಷಕ್ಕೆ 3 ಗ್ಯಾಸ್ ಸಿಲಿಂಡರ್, ಅರ್ಧ ಲೀ. ಹಾಲು ವಿತರಣೆ ಉಚಿತವಲ್ಲವೇ? ಉತ್ತರಪ್ರದೇಶದಲ್ಲಿ ಸ್ಕೂಟಿ ವಿತರಣೆ, ಕೇಂದ್ರ ಸರ್ಕಾರದ 12 ಯೋಜನೆಗಳು ಉಚಿತ ವ್ಯಾಪ್ತಿಗೆ ಬರುತ್ತವೆ. ಪರಿಶಿಷ್ಟರ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಸಿಕೊಳ್ಳುವುದನ್ನು ವಿರೋಧಿಸುವ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ 45 ಲಕ್ಷ ಕೋಟಿ ಬಜೆಟ್‌ನಲ್ಲಿ ಶೇ.24 ಮೀಸಲಿಟ್ಟು ಮಾತಾಡುವಂತೆ ಸವಾಲು ಹಾಕಬೇಕು. ಹಾಗೇ ಎಸ್‌ಸಿಪಿ, ಟಿಎಸ್‌ಪಿ ಜಾರಿಗೆ ತರುವಂತೆ ಒತ್ತಾಯಿಸಬೇಕು ಎಂದು ಅವರು ಸಲಹೆ ನೀಡಿದರು.
ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರ್ತಿ ಡಾ. ಅಕಯ್ ಪದ್ಮಶಾಲಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಸಿದ್ದರಾಜು, ಬಿ.ಎಂ. ರಾಮು, ರಾಮಪ್ಪ, ಎಂ. ಶಿವಣ್ಣ, ಪುಷ್ಪಾಲತಾ ಚಿಕ್ಕಣ್ಣ, ಈಶ್ವರ್ ಚಕ್ಕಡಿ, ಪ್ರಕಾಶ್, ಭಾಸ್ಕರ್ ಎಲ್. ಗೌಡ, ರಮೇಶ್, ನಟರಾಜ್ ಮೊದಲಾದದವರು ಇದ್ದರು.
ವಕೀಲನಾದಾಗ ಕುರುಬ ಜನಾಂಗದಿಂದ ನಾನೊಬ್ಬನೇ ಇದ್ದೆ: ಸಿದ್ದರಾಮಯ್ಯ
ಅಧಿಕಾರದಲ್ಲಿ ಇದ್ದಾಗ ಜನರ ಪರ ಕೆಲಸ ಮಾಡಿದೆವು. ವಿರೋಧ ಪಕ್ಷದಲ್ಲಿದ್ದಾಗ ಜನಪರ ಹೋರಾಟ ನಡೆಸಿದವು. ಬಿಜೆಪಿ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಸ್ವಜನ ಪಕ್ಷಪಾತದಿಂದ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಬಂದವು. ಕಾಂಗ್ರೆಸ್ ಜನರಿಗೆ ವಚನ ಕೊಟ್ಟಂತೆ 5 ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದ್ದೇವೆ. ಇದನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ರಾಜಕೀಯ ಪಕ್ಷವನ್ನು ಮೀರಿ ಬೆಳೆದಿದ್ದಾರೆ. ಅವರು ಭಾರತೀಯ ರಾಜಕೀಯದ ದಂತಕತೆ. 25 ವರ್ಷಗಳಾದ ನಂತರ ಹೀಗೆ ಒಬ್ಬ ಮನುಷ್ಯ ಇದ್ದನಾ? ಅವರ ಸೈದ್ಧಾಂತಿಕ ಬದ್ಧತೆ ಬಗ್ಗೆ ಮುಂದಿನ ಜನಾಂಗ ಯೋಚನೆ ಮಾಡುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.