ದೇಶದ್ರೋಹ ಘೋಷಣೆ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಪರ ವಕೀಲರಿಗೆ ಭಾರೀ ಭದ್ರತೆ

By Kannadaprabha NewsFirst Published Feb 28, 2020, 10:18 AM IST
Highlights

ಹೈಕೋರ್ಟ್ ನಿರ್ದೇಶನದಂತೆ ಮತ್ತೆ ನ್ಯಾಯಾಲಯಕ್ಕೆ ಆಗಮಿಸುತ್ತಿರುವ ವಕೀಲರು | ಸೂಕ್ತ ಭದ್ರತೆ ಒದಗಿಸಲು ಹೈಕೋರ್ಟ್ ಆದೇಶ| ಇಂದು ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆ| 

ಧಾರವಾಡ(ಫೆ.28): ಹುಬ್ಬಳ್ಳಿಯ ಕೆ.ಎಲ್.ಇ. ಎಂಜಿನಿಯರಿಂಗ್ ಕಾಲೇಜಿನಲ್ಲಿ ದೇಶದ್ರೋಹದ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳ ಪರವಾಗಿ ವಕಾಲತ್ತು ವಹಿಸಲು ಮತ್ತೇ ಬೆಂಗಳೂರು ವಕೀಲರು ಶುಕ್ರವಾರ ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ. 

ಕಳೆದ ಫೆ. 24ರಂದು ಈ ಕುರಿತಾಗಿ ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆ ಕುರಿತು ಗುರುವಾರ ಬೆಂಗಳೂರು ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎ.ಎಸ್. ಒಕಾ ಅವರು ಬೇಸರ ವ್ಯಕ್ತಪಡಿಸಿ, ವಕೀಲರು ಆರೋಪಿಗಳ ಹಕ್ಕನ್ನು ರಕ್ಷಿಸಬೇಕು. ವಕೀಲರೇ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಆರೋಪಿಗಳ ಪರ ಅರ್ಜಿ ಸಲ್ಲಿಸಲು ಬರಲಿರುವ ವಕೀಲರಿಗೆ ಅಡ್ಡಿಪಡಿಸುವ ವಕೀಲರ ಹೆಸರು, ವಿಳಾಸ ಪಡೆಯಲು ಹುಬ್ಬಳ್ಳಿ- ಧಾರವಾಡ ಪೊಲೀಸರಿಗೆ ಸೂಚನೆ ನೀಡಿದ ನ್ಯಾಯಾಲಯ ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಎಚ್ಚರಿಕೆಯನ್ನೂ ಈ ಸಂದರ್ಭದಲ್ಲಿ ನೀಡಿದೆ. ಜೊತೆಗೆ ಧಾರವಾಡಕ್ಕೆ ಬರಲಿರುವ ಆರೋಪಿಗಳ ಪರ ವಕೀಲರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಕಟ್ಟುನಿಟ್ಟಿನ ಸೂಚನೆಯನ್ನು ಕೋರ್ಟ್ ನೀಡಿದೆ. ಹೈಕೋರ್ಟ್ ನ ಈ ಆದೇಶದಿಂದಾಗಿ ಆರೋಪಿಗಳ ಪರ ವಕೀಲರಿಗೆ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಬರಲು ಯಾವುದೇ ಅಡೆತಡೆ ಇಲ್ಲದಂತಾಗಿದೆ. 

ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ: 

ಪಾಕ್ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಮೂವರು ಎಂಜಿನಿಯಂಗ್ ವಿದ್ಯಾರ್ಥಿಗಳ ಪೊಲೀಸ್ ಕಸ್ಟಡಿ ಶುಕ್ರವಾರ ಬೆಳಗ್ಗೆ ಮುಕ್ತಾಯವಾಗಲಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಅವರನ್ನು ಶುಕ್ರವಾರ ನ್ಯಾಯಾಂಗಕ್ಕೆ ಒಪ್ಪಿಸಲಿದ್ದಾರೆ. ಹಿಂದಿನಂತೆ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಕಳೆದ ಫೆ. 24 ರಂದು ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಕೋರಿಕೆಯಂತೆ ವಿಚಾರಣೆಗಾಗಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಇಲ್ಲಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿತ್ತು. ಅದರಂತೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಈ ಅವಧಿ ಮುಗಿಯಲಿದ್ದು, ಬಳಿಕ ಪೊಲೀಸರು ನ್ಯಾಯಾಂಗಕ್ಕೆ ಮೂವರು ಆರೋಪಿಗಳನ್ನು ನೀಡಲಿದ್ದಾರೆ. ಆದರೆ, ಇನ್ನು ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಲಿದ್ದಾರೋ ಅಥವಾ ವಿಚಾರಣೆ ಮುಗಿದಿದ್ದು, ನ್ಯಾಯಾಂಗಕ್ಕೆ ಒಪ್ಪಿಸಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲಿದ್ದಾರೆಯೋ ಎಂಬುದು ಶುಕ್ರವಾರ ತಿಳಿಯಲಿದೆ. 

ದೇಶದ್ರೋಹಿಗಳ ಪರ ವಕೀಲರ ವಕಾಲತ್ತು: ಹುಬ್ಬಳ್ಳಿಯಲ್ಲಿ ಲಾಯರ್ಸ್‌ ವಿರುದ್ಧ ಪ್ರತಿಭಟನೆ

ಹುಬ್ಬಳ್ಳಿಯ ಅಜ್ಞಾತ ಸ್ಥಳಕ್ಕೆ ಮೂವರನ್ನು ಕರೆತಂದು ವಿಚಾರಣೆ ನಡೆಸಿದ್ದ ಪೊಲೀಸರು ಮಂಗಳವಾರ ರಾತ್ರಿ ಆರೋಪಿಗಳು ತಂಗಿದ್ದ ಹಾಸ್ಟೆಲ್ ಗೆ ತೆರಳಿ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ. ಇನ್ನು, ಆರೋಪಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಬೆಂಗಳೂರು ವಕೀಲರು ಶುಕ್ರವಾರ ಧಾರವಾಡ ನ್ಯಾಯಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹುಬ್ಬಳ್ಳಿ ನ್ಯಾಯಾಲಯಕ್ಕೂ ಆಗಮಿಸಬಹುದು ಎಂಬ ನಿರೀಕ್ಷೆಯಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಪೊಲೀಸರು ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

click me!