ಪರಶುರಾಮ್ ಅವರು ಎಂದಿನಂತೆ ವಿಷಯಗಳು ಹಾಗೂ ಹಣಕಾಸಿನ ದೈನಂದಿನ ಲೆಕ್ಕಾಚಾರಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದರು. ಇದರ ಬಹಳಷ್ಟು ಕಡೆಗಳಲ್ಲಿ ಲೆಕ್ಕಾಚಾರದ ಬಗ್ಗೆ ಬರೆದಿರುವುದು ಕಂಡು ಬಂದಿದೆ. ಒಂದು ವೇಳೆ, ಈ ಮಾಹಿತಿಯ ಬಗ್ಗೆಯೂ ತನಿಖೆಯಾದಲ್ಲಿ ಅಕ್ರಮದ ಇನ್ನೂ ಹೆಚ್ಚಿನ ಮುಖವಾಡಗಳು ಬಯಲಾಗುವ ಸಾಧ್ಯತೆಗಳಿವೆ.
ಆನಂದ್ ಎಂ.ಸೌದಿ
ಯಾದಗಿರಿ(ಆ.11): ಇಲ್ಲಿನ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಪರಶುರಾಮ್ ಅವರ ಶಂಕಾಸ್ಪದ ಸಾವಿನ ಹಿಂದಿನ ರಹಸ್ಯ ಕೆಂಪು ಡೈರಿಯಲ್ಲಿ ಅಡಗಿದೆಯೇ? ಸಿಐಡಿ ಅಧಿಕಾರಿಗಳ ತಂಡಕ್ಕೆ ಸಿಕ್ಕ ಡೈರಿಯಲ್ಲಿ ಪರಶುರಾಮ್ ಅವರು ಬರೆದಿರುವ ಎನ್ನಲಾದ ಹಣಕಾಸಿನ ಲೆಕ್ಕಾಚಾರಗಳು ತನಿಖೆಗೆ ಹೊಸ ಆಯಾಮ ಮೂಡಿಸಲಿದೆ ಎನ್ನಲಾಗಿದೆ.
ಡೈರಿಯ ಒಂದಿಷ್ಟು ಪುಟಗಳಲ್ಲಿ ಹೆಸರುಗಳ ಸಮೇತ ಹಣದ ಲೆಕ್ಕಾಚಾರ ಬರೆದಿಟ್ಟಿದ್ದರೆ, ಇನ್ನೊಂದೆಡೆ ಹೆಸರುಗಳಿಲ್ಲದೆ ಲೆಕ್ಕಗಳನ್ನು ಬರೆದಿಟ್ಟಿರುವುದು ಕಂಡುಬಂದಿದೆ. ಬೇರೆ ಏನು ಬರೆದಿದ್ದಾರೆ ಎಂದು ನೋಡಬೇಕೆನ್ನುವಷ್ಟರಲ್ಲಿ, ಅದನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದರು ಎಂದು 'ಕನ್ನಡಪ್ರಭ'ಕ್ಕೆ ಪರಶುರಾಮ್ ಸಹೋದರ ಹನುಮಂತ ಮಾಹಿತಿ ನೀಡಿದ್ದಾರೆ.
ನನ್ನ ಪತಿಯ ಸಾವಿನ ಕೇಸನ್ನು ಸಿಬಿಐಗೆ ವಹಿಸಿ: ಪರಶುರಾಮ ಪತ್ನಿ ಶ್ವೇತಾ
ಆ.8ರಂದು ಸಿಐಡಿ ಅಧಿಕಾರಿಗಳ ತಂಡ ಯಾದಗಿರಿ ಎಸ್‌ಪಿ ನಿವಾಸದ ಸಮೀಪದಲ್ಲಿರುವ ಪೊಲೀಸ್ ವಸತಿ ನಿಲಯದಲ್ಲಿರುವ ಪರಶುರಾಮ್ ಮನೆಗೆ ಸ್ಥಳ ಪರಿಶೀಲನೆ ಮಹಜರಿಗೆಂದು ತೆರಳಿತ್ತು. ಈ ವೇಳೆ ಅವರ ತಂದೆ, ಸಹೋದರ, ಮಾವ ಹಾಗೂ ಸ್ನೇಹಿತರು ಜೊತೆಯಲ್ಲಿದ್ದರು. ಆಗ 7.33 ಲಕ್ಷ ರು.ನಗದು ಹಣ, ಶಾಸಕ ಚೆನ್ನಾರೆಡ್ಡಿ: ರೆಡ್ಡಿ ತುನ್ನೂರು ಅವರ ಹೆಸರಿನ ಖಾಲಿ ಲೆಟರ್ ಹೆಡ್, 6 ಲಕ್ಷ ರು.ಹಣ ಬ್ಯಾಂಕಿಗೆ ಜಮೆ ಮಾಡಿದ ಬಗ್ಗೆ ರಸೀದಿಗಳು, ಇಲಾಖೆ ರಿವಾಲ್ವರ್, ವಾಕಿಟಾಕಿ ಸ್ಥಳದಲ್ಲಿ ಕಂಡು ಬಂದಾಗ, ಸಿಐಡಿ ಅಧಿಕಾರಿಗಳು ಅವುಗಳನ್ನು ತಮ್ಮ ವಶಕ್ಕೆ ಪಡೆದು ಜೊತೆಗೆ ಕೆಂಪು ಡೈರಿ ಯನ್ನೂ ಸಹ ತೆಗೆದುಕೊಂಡು ಹೋದರು.
ಪರಶುರಾಮ್ ಅವರು ಎಂದಿನಂತೆ ವಿಷಯಗಳು ಹಾಗೂ ಹಣಕಾಸಿನ ದೈನಂದಿನ ಲೆಕ್ಕಾಚಾರಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದರು. ಇದರ ಬಹಳಷ್ಟು ಕಡೆಗಳಲ್ಲಿ ಲೆಕ್ಕಾಚಾರದ ಬಗ್ಗೆ ಬರೆದಿರುವುದು ಕಂಡು ಬಂದಿದೆ. ಒಂದು ವೇಳೆ, ಈ ಮಾಹಿತಿಯ ಬಗ್ಗೆಯೂ ತನಿಖೆಯಾದಲ್ಲಿ ಅಕ್ರಮದ ಇನ್ನೂ ಹೆಚ್ಚಿನ ಮುಖವಾಡಗಳು ಬಯಲಾಗುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
ಕಲಬುರಗಿ ಕಚೇರಿ ಕಡೆ ಬೊಟ್ಟು
ಪಿಎಸ್‌ಐ ವರ್ಗಾವಣೆ ದಂಧೆಯ ಮೂಲವೇ ಕಲಬುರಗಿಯಲ್ಲಿರುವ ಇಲಾಖೆಯ ಹಿರಿಯ ಕಚೇರಿ ಎಂದು ಖಾಕಿಪಡೆಯಲ್ಲೀಗ ಚರ್ಚೆಗಳು ಹರಿದಾಡತೊಡಗಿವೆ. ಹಿರಿಯ ಅಧಿಕಾರಿಯೊಬ್ಬರ ದಲ್ಲಾಳಿಯಂತೆ ಕಾರ್ಯನಿರ್ವ ಹಿಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಇವೆಲ್ಲವನ್ನೂ ನಿಭಾಯಿಸುತ್ತಾರೆ. ಸಚಿವ ಪ್ರಿಯಾಂಕ ಖರ್ಗೆ ತಮಗೆ ಆಪ್ತರು ಎಂದು ಎಲ್ಲೆಡೆ ತೋರಿಸಿಕೊಳ್ಳುವ ಆ ಅಧಿಕಾರಿ, ವರ್ಗಾವಣೆ ವಿಚಾರದಲ್ಲಿ ತೂರಿಸುತ್ತಾರೆ ಮೂಗು ಮಾತುಗಳು ಖಾಕಿಪಡೆಯಲ್ಲೇ ಪ್ರತಿಧ್ವನಿಸುತ್ತಿವೆ. ಪರಶುರಾಮ್ ಡೈರಿಯಲ್ಲಿ ಕಲಬುರಗಿ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.