ಬಸ್‌ಗಳಿಲ್ಲದೇ ಶಾಲೆಗಳಿಗೆ ತೆರಳಲು ಶಿಕ್ಷಕರ ಪರದಾಟ..!

By Kannadaprabha NewsFirst Published Jun 10, 2020, 11:15 AM IST
Highlights

ದಾವಣಗೆರೆಯಿಂದ ಜಗಳೂರುಗೆ ಸಂಚರಿಸುವ ಮೂರ್ನಾಲ್ಕು ಸರ್ಕಾರಿ ಬಸ್‌ ಹೊರತುಪಡಿಸಿದರೆ ಇನ್ನಾವುದೇ ಖಾಸಗಿ ಬಸ್‌ಗಳು ಸರ್ಕಾರದ ನಿಬಂಧನೆಗಳಿಂದಾಗಿ ಸಂಚರಿಸಲಿಲ್ಲ. ಇದರಿಂದಾಗಿ ಶಾಲೆಗೆ ಹಾಜರಾಗಬೇಕಾದ ಶಿಕ್ಷಕರು ಬಸ್ಸಿಗಾಗಿ ಪರದಾಡಿದ ಘಟನೆಗಳು ನಡೆದಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಜಗಳೂರು(ಜೂ.10): ಸರ್ಕಾರದ ಆದೇಶದ ಹಿನ್ನೆಲೆ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಶಿಕ್ಷಕರು ಸೋಮವಾರ ಶಾಲೆಗೆ ಹಾಜರಾಗಿದ್ದಾರೆ. ಪಟ್ಟಣದಿಂದ ತಾಲೂಕಿನ ವಿವಿಧಡೆ ಗ್ರಾಮಗಳಿಗೆ ತೆರಳುವ ಶಿಕ್ಷಕರು ಖಾಸಗಿ ಬಸ್‌ಗಳಿಲ್ಲದೇ ಪರದಾಡಿದರು. ಅನಿವಾರ್ಯವಾಗಿ ಆಟೋ, ಬೈಕ್‌ಗಳು, ಕಾರುಗಳ ಮೊರೆಹೋಗಿ ಮೊದಲ ದಿನವಾದ ಸೋಮವಾರ ಶಾಲೆಗಳಿಗೆ ಹಾಜರಾಗುತ್ತಿದ್ದರು.

ದಾವಣಗೆರೆಯಿಂದ ಜಗಳೂರುಗೆ ಸಂಚರಿಸುವ ಮೂರ್ನಾಲ್ಕು ಸರ್ಕಾರಿ ಬಸ್‌ ಹೊರತುಪಡಿಸಿದರೆ ಇನ್ನಾವುದೇ ಖಾಸಗಿ ಬಸ್‌ಗಳು ಸರ್ಕಾರದ ನಿಬಂಧನೆಗಳಿಂದಾಗಿ ಸಂಚರಿಸಲಿಲ್ಲ. ಇದರಿಂದ ನಾಗರಿಕರು, ಶಿಕ್ಷಕರಿಗೆ ಸಮಸ್ಯೆಯಾಯಿತು.

ಕೊರೋನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆ 2 ತಿಂಗಳುಗಳ ಕಾಲ ಲಾಕ್‌ಡೌನ್‌ ಆಗಿತ್ತು. ಸರ್ಕಾರ ಲಾಕ್‌ಡೌನ್‌ ತೆರುವುಗೊಳಿಸಿದ್ದು ಪ್ರಸಕ್ತ 2020- 21ನೇ ಶೈಕ್ಷಣಿಕ ಸಾಲಿಗೆ ಶಾಲೆ ಪ್ರಾರಂಭಿಸಲು ಸರ್ಕಾರದಿಂದ ಪ್ರಥಮ ಹಂತವಾಗಿ ಶಿಕ್ಷಕರು ಶಾಲೆಗೆ ಹಾಜರಾಗಿ ಮುಂದಿನ ಎಲ್ಲ ಪ್ರಕ್ರಿಯೆ ಕೈಗೊಳ್ಳಲು ಕ್ರಮಕೈಗೊಂಡಿದೆ. ಸರ್ಕಾರದ ಆದೇಶ ಹಿನ್ನೆಲೆ ಶಾಲೆಗೆ ಎಲ್ಲ ಶಿಕ್ಷಕರು ಆಗಮಿಸಿದ್ದರು. ಶಿಕ್ಷಕರ ಕಚೇರಿಯ ಸ್ವಚ್ಚಗೊಳಿಸಿ, ಮಾಸ್ಕ್‌ ಧರಿಸಿ, ಅಂತರ ಕಾಪಾಡಿಕೊಂಡು ಕೆಲಸ ನಿರ್ವಹಿಸಲಾಗಿದೆ. 

ಮಾಸ್ಕ್ ಖರೀದಿಸುವಂತೆ ಒತ್ತಡ: ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಿದ ಶಿಕ್ಷಣ ಇಲಾಖೆ

ಶಾಲೆ ಪ್ರಾರಂಭ ಮಾಡುವ ವಿಚಾರವಾಗಿ ಎಸ್‌ಡಿಎಂಸಿ ಮತ್ತು ಪೋಷಕರ ಸಲಹೆ, ಸೂಚನೆಗಳನ್ನು ಪಡೆಯಲು ಜೂ.10ರಂದು ಪೂರ್ವಭಾವಿ ಸಭೆಗೆ ಆಗಮಿಸುವಂತೆ ತಿಳಿಸುವ ಜೊತೆಗೆ, ಮಾಸ್ಕ್‌ ಅಂತರ ಕಾಪಾಡಿಕೊಂಡು ಸಭೆ ನಡೆಸಲಾಗುತ್ತದೆ. ಸಭೆ ವಿವರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ದೇವಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್‌.ಗೌಸ್‌ ಮನ್ಸೂರ್‌ ತಿಳಿಸಿದರು.

ಸರ್ಕಾರದ ಆದೇಶದ ಹಿನ್ನೆಲೆ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲಾ ಶಿಕ್ಷಕರು ಶಿಕ್ಷಕರು ಸೋಮವಾರ ಶಾಲೆಗೆ ಹಾಜರಾಗಿದ್ದಾರೆ. ಶಾಲೆಗಳಲ್ಲಿ ಪೋಷಕರು, ಎಸ್‌ಡಿಎಂಸಿ ಸಭೆ ಆಯೋಜಿಸಿ ಶಾಲೆಗಳ ಪುನಾರಂಭ ಬಗ್ಗೆ ಅಭಿಪ್ರಾಯದ ಸಂಗ್ರಹ, ದಾಖಲಾತಿ ಆಂದೋಲನ, ಕೋವಿಡ್‌-19 ಬಗ್ಗೆ ಪೋಷಕರಿಗೆ ಸರಿಯಾದ ಮಾಹಿತಿ, ಪಠ್ಯಪುಸ್ತಕಗಳ ಒದಗಿಸುವುದು ಸೇರಿದಂತೆ ಮೊದಲಾದ ಕೆಲಸಗಳನ್ನು ಮುಖ್ಯಶಿಕ್ಷಕರು, ಸಹಶಿಕ್ಷಕರು ನಿರ್ವಹಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ತಿಳಿಸಿದರು.
 

click me!