
ಕೊಪ್ಪಳ: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಅ. 21ರಿಂದ ನೀರು ಹರಿಸುವ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 127ನೇ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನ. 20ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ, ಈಗಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಡಿ. 20ರ ವರೆಗೆ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಸಚಿವ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರ ಒತ್ತಾಯದ ನಡುವೆಯೂ ಲಭ್ಯ ನೀರಿನ ಪ್ರಮಾಣ ಆಧರಿಸಿ ನೀರು ಹಂಚಿಕೆ ನಿರ್ಧಾರ ಕೈಗೊಳ್ಳಲಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಅ. 21ರಿಂದ ನ. 20ರ ವರೆಗೆ ಪ್ರತಿ ದಿನ 3,800 ಕ್ಯುಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನಿಗದಿತ ಅವಧಿಯಲ್ಲಿ 1,000ರಿಂದ 1,280 ಕ್ಯುಸೆಕ್ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆಗೆ 650 ಕ್ಯುಸೆಕ್ ನೀರು ಹರಿಸಲಾಗುತ್ತದೆ. ರಾಯ ಬಸವಣ್ಣ ಕಾಲುವೆಗೆ ಅ. 21ರಿಂದ 2027ರ ಮೇ 31ರ ವರೆಗೆ 180 ಕ್ಯುಸೆಕ್ ಹಾಗೂ ವಿಜಯನಗರ ಕಾಲುವೆಗಳಿಗೆ 2027ರ ಮೇ 10ರ ವರೆಗೆ 60 ಕ್ಯುಸೆಕ್ ನೀರು ಹರಿಸಲು ವೇಳಾಪಟ್ಟಿ ರೂಪಿಸಲಾಗಿದೆ. ಈ ಹಂಚಿಕೆ ನಿಗದಿತ ಅವಧಿ ಮತ್ತು ನೀರಿನ ಲಭ್ಯತೆಯ ಷರತ್ತುಗಳಿಗೆ ಒಳಪಟ್ಟಿರುತ್ತದೆ. ರೈತರು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈಗಾಗಲೇ ಬಿತ್ತನೆ ಮಾಡಿರುವ ಮುಂಗಾರು ಬೆಳೆ ಉಳಿಸಿಕೊಳ್ಳಲು ಡಿ. 20ರ ವರೆಗೆ ನೀರು ಹರಿಸುವ ಅಗತ್ಯವಿದೆ ಎಂದು ರೈತರು ಸಭೆಯಲ್ಲಿ ಒತ್ತಾಯಿಸಿದರು. ನ. 20ರ ವರೆಗೆ ಮಾತ್ರ ನೀರು ಹರಿಸಿದರೆ ಈಗಿರುವ ಬೆಳೆ ಉಳಿಸಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಲಭ್ಯವಿರುವ ನೀರಿನಲ್ಲಿಯೇ ಸೂಕ್ತ ಹಂಚಿಕೆ ಮಾಡಬೇಕು. ನವೆಂಬರ್‌ನಲ್ಲಿ ಮಳೆಯಾದರೆ ಮತ್ತೆ ಸಭೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳಬಹುದು ಎಂದು ರೈತರು ಸಲಹೆ ನೀಡಿದರು. ಆದರೆ, ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಪ್ರಮಾಣ ಪರಿಗಣಿಸಿ ನ. 20ರ ವರೆಗೆ ಮಾತ್ರ ನೀರು ಹರಿಸಲು ನಿರ್ಧರಿಸಲಾಯಿತು.
ಮುಂಗಾರು ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹಿಂಗಾರು ಬೆಳೆಗೆ ನೀರು ಹರಿಸದಿರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಂಗಾರು ಮಳೆಯಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದರೆ ಮತ್ತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಹೀಗಾಗಿ, ರೈತರು ಸದ್ಯಕ್ಕೆ ಹಿಂಗಾರು ಬೆಳೆಯ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳದಂತೆ ಸೂಚಿಸಲಾಗಿದೆ.
ಅಚ್ಚುಕಟ್ಟು ಪ್ರದೇಶದ ಬೆಳೆಗಳನ್ನು ಉಳಿಸುವುದು ಮತ್ತು ಕುಡಿಯುವ ನೀರಿಗಾಗಿ ನೀರು ಕಾಯ್ದಿರಿಸುವುದು ಆದ್ಯತೆಯಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಕಾರ್ಖಾನೆಗಳಿಗೆ ನೀರು ನೀಡಬಾರದು ಎಂಬ ರೈತರ ಆಗ್ರಹಕ್ಕೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಅದರಂತೆ ಕಾರ್ಖಾನೆಗಳಿಗೆ ನೀರು ಪೂರೈಸದಿರಲು ನಿರ್ಧರಿಸಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಸುಮಾರು 53 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ ಕುಡಿಯುವ ನೀರಿಗಾಗಿ 11 ಟಿಎಂಸಿ ನೀರನ್ನು ಕಾಯ್ದಿರಿಸಲು ನಿರ್ಧರಿಸಲಾಗಿದೆ. ಜಲಚರಗಳಿಗಾಗಿ ಅಗತ್ಯವಿರುವ ಡೆಡ್ ಸ್ಟೋರೇಜ್, ಆಂಧ್ರಪ್ರದೇಶದ ಪಾಲು ಹಾಗೂ ಆವಿಯಾಗುವ ನೀರಿನ ಪ್ರಮಾಣವನ್ನು ಹೊರತುಪಡಿಸಿದ ಬಳಿಕ ರಾಜ್ಯಕ್ಕೆ ಸುಮಾರು 14 ಟಿಎಂಸಿ ನೀರು ಮಾತ್ರ ಲಭ್ಯವಾಗಲಿದೆ. ಈ ನೀರನ್ನು ನ. 20ರ ವರೆಗೆ ಕಾಲುವೆಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಮಾಜಿ ಸಚಿವರಾದ ಬೋಸರಾಜ್, ಬಿ. ನಾಗೇಂದ್ರ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ಶಿವರಾಜ್ ಪಾಟೀಲ್, ನಾಗರಾಜ್, ಹಂಪನಗೌಡ ಬಾದರ್ಲಿ, ಗಣೇಶ, ಬಸವರಾಜ ತೂರ್ವಿಹಾಳ್, ಬಸನಗೌಡ ಬಾದರ್ಲಿ, ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಕಾಸಸೌಧದಲ್ಲಿ ಇಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ಜನರಿಗೆ ಕುಡಿಯುವ ನೀರಿನ ಸಮರ್ಪಕ ಪೂರೈಸುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಸಭೆಯಲ್ಲಿ ಮಾಜಿ ಸಚಿವರಾದ ಬೋಸರಾಜ್, ಬಿ.ನಾಗೇಂದ್ರ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಬಸನಗೌಡ ದದ್ದಲ್, ಶಿವರಾಜ್ ಪಾಟೀಲ್, ನಾಗರಾಜ್, ಹಂಪನಗೌಡ ಬಾದರ್ಲಿ, ಗಣೇಶ್, ಬಸನಗೌಡ ತುರ್ವಿಹಾಳ್, ಬಸನಗೌಡ ಬಾದರ್ಲಿ, ನಾಲ್ಕು ಜಿಲ್ಲೆ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.
— Shivaraj S Tangadagi (@sstangadagi) October 19, 2026