
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಇಡಿ ಮತ್ತೊಂದು ಪರೀಕ್ಷೆ ಅಕ್ರಮದ ತನಿಖೆ ನಡೆಸುತ್ತಿದೆ. ವಾಣಿಜ್ಯ ಇಲಾಖೆಯ ಐವತ್ತು ಕೈಗಾರಿಕಾ ವಿಸ್ತಾರಣಾಧಿಕಾರಿ (RPC) ನೇಮಕಾತಿ ಪ್ರಕರಣವೂ ತನಿಖೆ ನಡೆಯುತ್ತಿದೆ. ಈ ಸಂಬಂಧ ವಿಧಾನ ಸೌಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಹಾಗೂ ಆರ್ಥಿಕ ಅಕ್ರಮಗಳ ತೀವ್ರತೆಯನ್ನು ಪರಿಗಣಿಸಿ, ಜಾರಿ ನಿರ್ದೇಶನಾಲಯವು (ED) ಪ್ರಕರಣದ ಸಂಪೂರ್ಣ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಈ ಪ್ರಕರಣದಲ್ಲೂ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮಗಳು ಸುಮಾ ಸಾಹುಕಾರ್ ವಿರುದ್ದ ಕೇಸ್ ದಾಖಲಾಗಿತ್ತು. 2024 ರಲ್ಲಿ ಪ್ರಕಟಗೊಂಡ ನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ೨೦೨೫ ರ ಜುಲೈನಲ್ಲಿ ಪರೀಕ್ಷೆ ನಡೆಸಲಾಗಿತ್ತು. ತದನಂತರ 2026 ರ ಫೆಬ್ರವರಿಯಲ್ಲಿ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಆಯ್ಕೆ ಪಟ್ಟಿಯಲ್ಲಿ ಸುಮಾ ಸಾಹುಕಾರ್ ಅವರ ಹೆಸರು ಇತ್ತು. ಅವರು '3B' ಮೀಸಲಾತಿ ವರ್ಗದಡಿ ಪರೀಕ್ಷೆಗೆ ಹಾಜರಾಗಿದ್ದರು.
ಅರ್ಜಿಯೊಂದಿಗೆ ಸಲ್ಲಿಸಲಾಗಿದ್ದ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ತಮ್ಮ ಕುಟುಂಬದ ವಾರ್ಷಿಕ ಆದಾಯ ಕೇವಲ 40000 ರೂಪಾಯಿ ಎಂದು ನಮೂದಿಸಲಾಗಿತ್ತು. ಆದರೆ, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅರ್ಜಿದಾರರ ತಂದೆಗೆ 2019 ರಿಂದ ತಿಂಗಳಿಗೆ 2,05,100 ರೂಪಾಯಿ ಹಾಗೂ 2021 ರ ನಂತರ ತಿಂಗಳಿಗೆ 2,25,000 ರೂಪಾಯಿ ಭಾರಿ ಪ್ರಮಾಣದ ವೇತನ ಇತ್ತು.
ಜೊತೆಗೆ, ರಾಜ್ಯಪಾಲರಿಗೆ ಸಲ್ಲಿಸಲಾದ ಆಸ್ತಿ ವಿವರಗಳ ಪ್ರಕಾರ, ನಿಯಮಾವಳಿಗಳಿಗಿಂತ ಹೆಚ್ಚಿನ ಸ್ಥಿರಾಸ್ತಿಯನ್ನು ಹೊಂದಿರುವುದು ಕಂಡುಬಂದಿದೆ. '3B' ಮೀಸಲಾತಿಯಡಿ ಅರ್ಹತೆ ಪಡೆಯಲು ವಾರ್ಷಿಕ ಆದಾಯದ ಮಿತಿ 6 ರಿಂದ 8 ಲಕ್ಷ ರೂಪಾಯಿ ಒಳಗಿರಬೇಕು. ಆದರೆ, ಕೋಟ್ಯಂತರ ರೂಪಾಯಿ ಆದಾಯ ಹಾಗೂ ಆಸ್ತಿ ಇದ್ದರೂ ನಕಲಿ ಪ್ರಮಾಣಪತ್ರ ನೀಡಿ ಅರ್ಹ ಅಭ್ಯರ್ಥಿಗಳಿಗೆ ವಂಚಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಸಾಹುಕಾರ್ ಶಿವಶಂಕರಪ್ಪ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡ ನಂತರ ಆಯೋಗದಲ್ಲಿ ನಡೆದಿರುವ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಇಡಿ ತೀವ್ರ ಶೋಧನೆಗೆ ಒಳಪಡಿಸಿದೆ. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, 2022ರಿಂದ ಇದುವರೆಗೆ ನಡೆದ ಹಲವಾರು ನೇಮಕಾತಿಗಳಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ನಡೆದಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ.
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷಾ ಅಕ್ರಮ ಪ್ರಕರಣದ ಆರೋಪಿಗಳಾದ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ.ಗೀತಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಇ.ಡಿ. ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಸಂಬಂಧ ಆರೋಪಿಗಳಾದ ಸಾಹುಕಾರ್, ಗೀತಾರನ್ನು ಇ.ಡಿ ಅಧಿಕಾರಿಗಳು ಅ.6 ರಂದು ಬಂಧಿಸಿದ ನಂತರ ಕೋರ್ಟ್ ಮುಂದೆ ಹಾಜರುಪಡಿಸಿ 13 ದಿನಗಳ ಕಾಲ ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದರು. ಇ.ಡಿ ಕಸ್ಟಡಿ ಅವಧಿ ಸೋಮವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ನಗರದ ಇ.ಡಿ. ಕೋರ್ಟ್ ಮುಂದೆ ಹಾಜರುಪಡಿಸಿದರು. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇಬ್ಬರು ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು.