ಪ್ರಾಣಿಗಳ ಜೀವ ಉಳಿಸುವಂತಹ ಪುಣ್ಯದ ಕೆಲಸ ಮಾಡುತ್ತಿರುವ ನಿಮ್ಮಗಳ ಸೇವೆ ಮುಂದಿನ ದಿನಗಳಲ್ಲಿ ಮತ್ತಷ್ಟುಹಳ್ಳಿಗಳನ್ನು ತಲುಪುವಂತಾಗಲಿ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದ್ದಾರೆ.
ತುಮಕೂರು : ಪ್ರಾಣಿಗಳ ಜೀವ ಉಳಿಸುವಂತಹ ಪುಣ್ಯದ ಕೆಲಸ ಮಾಡುತ್ತಿರುವ ನಿಮ್ಮಗಳ ಸೇವೆ ಮುಂದಿನ ದಿನಗಳಲ್ಲಿ ಮತ್ತಷ್ಟುಹಳ್ಳಿಗಳನ್ನು ತಲುಪುವಂತಾಗಲಿ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದ್ದಾರೆ.
ನಗರದ ಅರ್ಬನ್ ರೆಸ್ಟಾಟ್‌ನಲ್ಲಿ ಪಶುವೈದ್ಯಕೀಯ ಸಂಘ, ಪಶುಪಾಲನೆ ಮತ್ತ ಪಶುವೈದ್ಯಕೀಯ ಸೇವಾ ಇಲಾಖೆ ಜಂಟಿಯಾಗಿ ಆಯೋಜಸಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ತಾಂತ್ರಿಕ ವಿಚಾರ ಸಂಕೀರಣ ಉದ್ಘಾಟಿಸಿ ಮಾತನಾಡಿದರು.
ನಮ್ಮ ಇತಿಮಿತಿಗಳ ನಡುವೆಯೂ ಹೆಚ್ಚು ಗ್ರಾಮಗಳನ್ನು ನಿಗದಿತ ಅವಧಿಯೊಳಗೆ ತಲುಪುವಂತಾಗದರೆ, ಅದರಿಂದ ಮೂಕ ಪ್ರಾಣಿಗಳಿಗೆ ಜೊತೆಗೆ, ಅವುಗಳ ಮಾಲೀಕರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ. ಕಳೆದ ವರ್ಷ ಜಾನುವಾರುಗಳಿಗೆ ಕಾಣಿಸಿಕೊಂಡ ಕಾಲುಬಾಯಿ ರೋಗ, ಚರ್ಮಗಂಟು ರೋಗಗಳ ಸಂದರ್ಭದಲ್ಲಿ ಪಶುವೈದ್ಯಕೀಯ ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಇದರ ಪರಿಣಾಮ ರೋಗದಿಂದ ಜಿಲ್ಲೆಯಲ್ಲಿ ಅಂತಹ ಹೆಚ್ಚು ಪಶುಗಳ ಸಾವು ಕಾಣಿಸಿಕೊಳ್ಳಲಿಲ್ಲ. ಬೇಸಿಗೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಕೊರತೆಯಿಂದ ಪ್ರಾಣಿ, ಪಕ್ಷಿಗಳಲ್ಲಿ ಹಲವಾರು ರೀತಿಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ತಾವುಗಳು ಸರ್ವ ಸನ್ನದ್ಧರಾಗಿ ಕೆಲಸ ಮಾಡುವಂತೆ ಪಶುವೈದ್ಯರಿಗೆ ಸಿ.ಇ.ಓ ಡಾ.ಕೆ.ವಿದ್ಯಾಕುಮಾರಿ ಸಲಹೆ ನೀಡಿದರು.
ಇಂತಹ ದಿನಾಚರಣೆಗಳ ನಾವು ಹೇಗೆ ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಜವಾಬ್ದಾರಿಗಳೇನು, ನಮ್ಮಗಳ ಕರ್ತವ್ಯ ಸಮರ್ಪಕವಾಗಿದೆಯೆ ಎಂದು ಪುನರ್ ಮನನ ಮಾಡಿಕೊಳ್ಳಲು ಇರುವ ಒಂದು ಅವಕಾಶ ಎಂದೇ ಭಾವಿಸಬೇಕಾಗುತ್ತದೆ. ಪ್ರಕೃತಿಯ ಒಂದು ಭಾಗವಾದ ಪ್ರಾಣಿಗಳ ಸೇವೆಯ ಉದ್ದೇಶ ನಿಮ್ಮ ಉದ್ದೇಶವಾಗಿದೆ. ಪಶುಪಾಲನೆ ಗ್ರಾಮೀಣ ಜನರ ಒಂದು ಅಂಗವಾಗಿದೆ. ಪ್ರಾಣಿಗಳಿಗೆ ರೋಗ, ರುಜಿನಗಳು ಕಾಣಿಸಿಕೊಂಡಾಗ ಅವರ ಯಾತನೆ ಹೇಳತೀರದು. ಈ ಬಾರಿಯ ಘೋಷ್ಯವಾಕ್ಯ ಎಲ್ಲರನ್ನು ಒಳಗೊಳ್ಳುವಿಕೆ ಅತ್ಯಂತ ಮಹತ್ವದ ಸಂದೇಶವಾಗಿದೆ ಎಂದರು.
ಪಶುವೈದ್ಯಕೀಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಸತ್ಯ. ಆದರೆ ಅದೇ ನಾವು ನೀಡುವ ಸೇವೆಗೆ ಏರುಪೇರಿಗೆ ಕಾರಣವಾಗಬಾರದು. 331 ಗ್ರಾಮಪಂಚಾಯಿತಿಗಳಿಗೆ ಇರುವುದು 200 ಜನ ಪಿಡಿಓ ಮಾತ್ರ. ಆದರೂ ನಾವು ನೀಡುವ ಸೇವೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ನಮ್ಮ ಕೌಶಲ್ಯತೆಯನ್ನು ನಾವು ಪ್ರದರ್ಶಿಸಬೇಕಾಗಿದೆ. ಇಲ್ಲದರ ನಡುವೆಯೇ ಒಳ್ಳೆಯ ಸೇವೆಯನ್ನು ನೀಡಿದಾಗ ಜನರು ನಮ್ಮನ್ನು ಗೌರವದಿಂದ ಕಾಣುತ್ತಾರೆ ಎಂದರು.
ಅಧ್ಯಕ್ಷತೆಯನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ ವಹಿಸಿದ್ದರು. ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೈ.ಟಿ.ಕಾಂತರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಡಾ.ಟಿ.ಪಿ.ಸುರೇಶ್, ಕೊರಟಗೆರೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಶ್ರೀಧರ್ ವಿಶೇಷ ಉಪನ್ಯಾಸ ನೀಡಿದರು. ಡಾ.ಸುರೇಶ್.ಬಿ., ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಪುರುಷೋತ್ತಮ್ ಎಸ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೇ.10ಕ್ಕೆ ಚುನಾವಣಾ ಮತದಾನವಿದ್ದು, ನಿಮ್ಮ ಜೊತೆಗೆ, ನಿಮ್ಮ ಕುಟುಂಬದ ಯಾವ ವ್ಯಕ್ತಿಯೂ ಮತದಾನದಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿ. ಅದರಲ್ಲಿಯೂ ನಗರದ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಹೆಚ್ಚಬೇಕಾಗಿದೆ. ನಾನು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳಲು ಇರುವ ಏಕೈಕ ಹಕ್ಕು ಎಂದರೆ ಅದು ಮತದಾನ. ಈ ನಿಟ್ಟಿನಲ್ಲಿ ತಾವೆಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ.
ಡಾ.ಕೆ.ವಿದ್ಯಾಕುಮಾರಿ
ಸಿಇಓ ಹಾಗೂ ಸ್ವೀಪ್ ಕಮಿಟಿ ಅಧ್ಯಕ್ಷೆ