ಹಂಪಿ: ಸಂಕ್ರಾಂತಿ ಹಬ್ಬದಂದು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ

By Kannadaprabha News  |  First Published Jan 16, 2020, 8:01 AM IST

ಸಂಕ್ರಾಂತಿ ಹಿನ್ನೆಲೆಯಲ್ಲಿ ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದರ್ಶನ ಪಡೆದ ಭಕ್ತರು| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ| ಹಂಪಿಯಲ್ಲಿ ಸಾವಿರಾರು ಜನರಿಂದ ಸಂಕ್ರಾತಿ ಹಬ್ಬ ಆಚರಣೆ|


ಹೊಸಪೇಟೆ(ಜ.16): ವಿಶ್ವವಿಖ್ಯಾತ ಹಂಪಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬುಧವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ರಾಜ್ಯದ ವಿವಿಧ ಮೂಲೆಗಳಿಂದ ತಂಡೋಪತಂಡವಾಗಿ ಹಂಪಿಗೆ ಆಗಮಿಸಿ, ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ವಿರೂಪಾಕ್ಷೇಶ್ವರಸ್ವಾಮಿಯ ದೇವರ ದರ್ಶನ ಪಡೆದುಕೊಂಡು, ಪಂಪಾದೇವಿ, ತಾಯಿ ಭುವನೇಶ್ವರಿ ದೇವಿಯ ದರ್ಶನ ಪಡೆದು ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದಾರೆ.

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಂಪಿಯ ವಿರೂಪಾಕ್ಷೇಶ್ವರಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಬೆಳಗ್ಗೆ 6.30ಕ್ಕೆ, 10.30ಕ್ಕೆ, ಸಂಜೆ 6.30ಕ್ಕೆ ರುದ್ರಾಭಿಷೇಕ ನಂತರ ನೈವೇದ್ಯ ಸೇರಿದಂತೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ ವಿರೂಪಾಕ್ಷೇಶ್ವರಸ್ವಾಮಿಯ ದೇವಸ್ಥಾನ, ಪಂಪಾದೇವಿ, ತಾಯಿ ಭುವನೇಶ್ವರಿ ಸೇರಿದಂತೆ ಇತರೆ ದೇವಸ್ಥಾನವನ್ನು ತೆರೆದು ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ದೇವರ ದರ್ಶನ ಪಡೆಯಲು ಬಂದಿದ್ದ ಭಕ್ತರಿಗೆ ದೇವಸ್ಥಾನದಲ್ಲಿ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಿದ್ದರು.

ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಕೆಲವರು ಮಂಗಳವಾರ ರಾತ್ರಿಯಿಂದಲೇ ಭಕ್ತರು ಹಂಪಿಗೆ ಆಗಮಿಸಿ ಬುಧವಾರ ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಪಡೆದುಕೊಂಡರು. ಮಕರ ಸಂಕ್ರಾಂತಿ ಹಬ್ಬದಂದು ದಕ್ಷಣಾಯಣದಿಂದ ಸೂರ್ಯ ಉತ್ತಾರಾಯಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ನದಿಯಲ್ಲಿ ಸ್ನಾನ ಮಾಡಿ ಶಿವನ ದರ್ಶನ ಪಡೆದುಕೊಂಡರೆ ಪುಣ್ಯ ಸಿಗುತ್ತದೆ. ಅನೇಕ ಜನರು ಭಾವಿಸಿಕೊಂಡು, ಹಂಪಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯವರೊಂದಿಗೆ ನೆರೆಯ ರಾಜ್ಯದ ಭಕ್ತರು ಸಹ ಹಂಪಿಗೆ ಬಂದು ತುಂಗಭದ್ರಾ ನದಿಯ ಪುಣ್ಯ ಸ್ನಾನ ಮಾಡಿ ವಿರೂಪಾಕ್ಷೇಶ್ವರಸ್ವಾಮಿಯ ದರ್ಶನ ಪಡೆಯುವುದು ಪ್ರತಿ ವರ್ಷ ಮಕರ ಸಂಕ್ರಣದಲ್ಲಿ ಅನೇಕ ಭಕ್ತರು ಮತ್ತು ಸ್ಥಳೀಯ ಜನರ ಪ್ರತಿತಿಯಾಗಿ ಇಲ್ಲಿ ಬೆಳದುಕೊಂಡು ಬಂದಿದೆ.

ಹೊಸಪೇಟೆ ತಾಲೂಕು ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಆಂಧ್ರಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರೆ ಪ್ರದೇಶಗಳಿಂದ ಸಾವಿರಾರು ಭಕ್ತರು ಹಂಪಿಗೆ ಆಗಮಿಸಿ ತುಂಗಭದ್ರಾ ನದಿಯ ಪುಣ್ಯಸ್ನಾನ ಮಾಡಿ ವಿರೂಪಾಕ್ಷೇಶ್ವರಸ್ವಾಮಿಯ ದರ್ಶನ ಪಡೆದುಕೊಂಡರು.

ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ ಮುಂದೆ ರಥ ಬೀದಿಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಹೂವು, ಹಣ್ಣು, ಕಾಯಿ ವ್ಯಾಪಾರ ಭರ್ಜರಿಯಾಗಿತ್ತು. ದೇವರ ದರ್ಶನ ಪಡೆದ ನಂತರ ಭಕ್ತರು ಹಂಪಿಯ ತುಂಗಭದ್ರಾ ನದಿ ದಡದಲ್ಲಿ ಕುಳಿತು ಸಂಕ್ರಾತಿ ಹಬ್ಬದ ವಿಶೇಷ ಊಟವನ್ನು ತಂದಿರುವ ರೊಟ್ಟಿ, ಕಾಳಿನಪಲ್ಯ ತರಕಾರಿ ಪಲ್ಯ, ಸಿಹಿ ಪದಾರ್ಥಗಳು, ಚಿತ್ರನ್ನ, ಮೊಸರನ್ನ, ಪುಡಿಚಟ್ನಿ ಸೇರಿದಂತೆ ಗಮಗಮಿಸುವ ಬುತ್ತಿಯನ್ನು ಸವಿದು ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಂತೋಷ ಮತ್ತು ಸಂಭ್ರಮಮೊಂದಿಗೆ ಆಚರಿಸಿದರು.

ಹಂಪಿಯಲ್ಲಿ ಬುಧವಾರ ರಾತ್ರಿ ಶಿವ-ಪಾರ್ವತಿಯರ ಉತ್ಸವ ಮೂರ್ತಿಗಳನ್ನು ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿಕೊಂಡು ಗಿರಿ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಗಿರಿ ಪ್ರದರ್ಶನ ಉತ್ಸವದಲ್ಲಿ ಸುಮಾರು 86 ದೇವತೆಗಳನ್ನು ಮೆರವಣಿಗೆಯ ಮೂಲಕ ಭೇಟಿ ಮಾಡಿ ದೇವರಿಗೆ ತೆಂಗಿನ ಕಾಯಿಗಳನ್ನು ಹೊಡೆದು, ದೇವರ ದರ್ಶನ ಪಡೆದುಕೊಂಡು ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಮೆರವಣಿಗೆಯ ಕಾರ್ಯಕ್ರಮದಲ್ಲಿ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಮಂಗಳವಾರ ಮತ್ತು ಬುಧವಾರ ಎರಡು ದಿನಗಳಿಂದ ಹಂಪಿಯಲ್ಲಿ ಸಾವಿರಾರು ಜನರು ಸಂಕ್ರಾತಿ ಹಬ್ಬದಲ್ಲಿ ತೊಡಗಿಕೊಂಡು ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು. ಇದೇ ರೀತಿಯಲ್ಲಿ ಟಿ.ಬಿ. ಡ್ಯಾಂನ ತುಂಗಭದ್ರಾ ಜಲಾಶಯದ ಪ್ರದೇಶದಲ್ಲಿ ಹಾಗೂ ಜಲಾಶಯದ ಹಿನ್ನೀರಿನ ಪ್ರದೇಶಗಳಾದ ಗುಂಡಾ ಕಾದಿಟ್ಟಅರಣ್ಯ ಪ್ರದೇಶದಲ್ಲಿ ನೂರಾರು ಜನರು ತಮ್ಮ ಕುಟುಂಬದ ಸದಸ್ಯರೊಂದಿಗೆ ಜಲಾಶಯದಲ್ಲಿ ಪುಣ್ಯಸ್ನಾನ ಮಾಡಿ ಸಂಕ್ರಾಂತಿ ಹಬ್ಬವನ್ನು ಆಚರಿಸದರು.
 

click me!