ಧಾರವಾಡದಲ್ಲಿ ಗಮನ ಸೆಳೆದ ಜಗಜಟ್ಟಿ ಕುಸ್ತಿ ಕಾಳಗ: ಸಂಗಮೇಶಗೆ ಕರ್ನಾಟಕ ಕೇಸರಿ ಗರಿ

By Kannadaprabha NewsFirst Published Feb 26, 2020, 10:37 AM IST
Highlights

ಜಗಜಟ್ಟಿಗಳ ಕುಸ್ತಿ ಕಾಳಗಕ್ಕೆ ಅದ್ಧೂರಿ ತೆರೆ| ಕರ್ನಾಟಕ ಪುರುಷ, ಮಹಿಳಾ ಕೇಸರಿ, ಬಾಲ ಕೇಸರಿ, ಕರ್ನಾಟಕ ಕಿಶೋರ ಹಾಗೂ ಕರ್ನಾಟಕ ಕಿಶೋರಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು| ರಾಷ್ಟ್ರಮಟ್ಟದ ಕುಸ್ತಿಪಟುಗಳ ಮಧ್ಯೆ ಮಲ್ಲಯುದ್ಧ|

ಬಸವರಾಜ ಹಿರೇಮಠ 

ಧಾರವಾಡ(ಫೆ.26): ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಕರ್ನಾಟಕ ಕಾಲೇಜು ಆವರಣದಲ್ಲಿ ನಡೆದ ಜಗಜಟ್ಟಿಗಳ ಕುಸ್ತಿ ಕಾಳಗಕ್ಕೆ ಮಂಗಳವಾರ ಅದ್ಧೂರಿಯ ತೆರೆ ಬಿದ್ದಿದೆ. 
ಫೆ. 22ರಿಂದ ವಿವಿಧ ವಿಭಾಗಗಳಲ್ಲಿ ನಡೆದ ರೌಂಡ್ ರಾಬಿನ್ ಹಾಗೂ ನಾಕೌಟ್ ಹಂತಗಳನ್ನು ದಾಟಿ ಫೈನಲ್‌ನಲ್ಲಿ ಎದುರಾಳಿ ಪೈಲವಾನರನ್ನು ಚಿತ್ ಮಾಡುವ ಮೂಲಕ ಕರ್ನಾಟಕ ಪುರುಷ, ಮಹಿಳಾ ಕೇಸರಿ, ಬಾಲ ಕೇಸರಿ, ಕರ್ನಾಟಕ ಕಿಶೋರ ಹಾಗೂ ಕರ್ನಾಟಕ ಕಿಶೋರಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. 

ಕರ್ನಾಟಕ ಕೇಸರಿ: 

86 ಕೆಜಿ ಯಿಂದ 125ಕೆಜಿ ವರೆಗಿನ ಪುರುಷರಿಗೆ ನಡೆದ ಕರ್ನಾಟಕ ಕುಸ್ತಿ ಪಂದ್ಯದಲ್ಲಿ ಪ್ರತಿಷ್ಠಿತ ಕರ್ನಾಟಕ ಕೇಸರಿ ಪ್ರಶಸ್ತಿಗಾಗಿ 10 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಇಬ್ಬರು ಪೈಲವಾನರಲ್ಲಿ ಯಾರೊಬ್ಬರಿಗೂ ಚಿತ್ ಮಾಡಲಾಗಲಿಲ್ಲ. ಹೀಗಾಗಿ ನಿಗದಿತ ಸಮಯದಲ್ಲಿ 7-2 ಅಂಕಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಕವಳ್ಳಿಯ ಪೈಲವಾನ 27 ವಯಸ್ಸಿನ ಸಂಗಮೇಶ ಕರ್ನಾಟಕ ಕೇಸರಿ ಮುಡಿ ಗೇರಿಸಿಕೊಂಡರು. ಮೂರುವರೆ ಲಕ್ಷ ನಗದು ಹಾಗೂ ಒಂದೂವರೆ ಕೆಜಿ ಬೆಳ್ಳಿ ಗದೆಯನ್ನು ನೀಡಲಾಯಿತು. 
ಇನ್ನು ಪರಾಜಿತ ಪೈಲ್ವಾನ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ 21 ವಯಸ್ಸಿನ ಬಸವರಾಜ ಮಮದಾಪೂರ ಅವರಿಗೆ ಒಂದೂವರೆ ಲಕ್ಷ ನಗದು ಬಹುಮಾನವಾಗಿ ನೀಡಲಾಯಿತು. ಕಂಚಿನ ಪದಕವನ್ನು ಶಿವಯ್ಯ ಪೂಜಾರ ಮತ್ತು ರಿಯಾಜ್ ಮುಲ್ಲಾ ಪಡೆದರು. ಇವರಿಗೆ ತಲಾ ಒಂದು ಲಕ್ಷ ನಗದು ಬಹುಮಾನ ನೀಡಲಾಯಿತು. 

ಲೀನಾ ಸಿದ್ಧಿ ಮಹಿಳಾ ಕೇಸರಿ: 

ಹಾಗಯೇ ಮಹಿಳೆಯರ 59-76 ಕೆಜಿ ವಿಭಾಗದ ಅತ್ಯುನ್ನತ ಪುರ ಸ್ಕಾರವಾದ ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಲೀನಾ ಸಿದ್ಧಿ ಹಾಗೂ ಗದಗನ ಶ್ವೇತಾ ಅವರ ಮಧ್ಯೆ ನಡೆದ ತುರು ಸಿನ ಪಂದ್ಯದಲ್ಲಿ ಕೇವಲ ಏಳು ನಿಮಿಷದಲ್ಲಿ ಶ್ವೇತಾ ಅವರನ್ನು ಚಿತ್ ಮಾಡಿದ ಲೀನಾ ಮಹಿಳಾ ಕರ್ನಾಟಕ ಕೇಸರಿಯಾಗಿ ಹೊರ ಹೊಮ್ಮಿದರು. ಈ ಪ್ರಶಸ್ತಿಯು 1.50 ಲಕ್ಷ ನಗದು ಒಳಗೊಂಡಿದೆ. ಪರಾಭವಗೊಂಡ ಶ್ವೇತಾ ಅವರಿಗೆ 2ನೇ ಬಹುಮಾನವಾಗಿ 1 ಲಕ್ಷ ನಗದು ನೀಡಲಾಯಿತು. 

ಶ್ವೇತಾ ಬಾಲ ಕೇಸರಿ: 

ಇನ್ನು 14 ವರ್ಷದೊಳಗಿನ ಬಾಲಕಿಯರ 46 ಕೆಜಿ ವಿಭಾಗದವರಿಗೆ ನೀಡುವ ಬಾಲ ಕೇಸರಿ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶ್ವೇತಾ ಅನ್ನಿಕೇರಿ ಅವರು ಬೆಳಗಾವಿಯ ಸ್ವಾತಿ ಅವರನ್ನು 4-0 ಅಂಕಗಳಿಂದ ಸೋಲಿಸಿ ಬಾಲ ಕೇಸರಿ ಪ್ರಶಸ್ತಿ ಪಡೆದುಕೊಂಡರು. ಈ ಪ್ರಶಸ್ತಿಯು 50 ಸಾವಿರ ನಗದು ಒಳಗೊಂಡಿದೆ. ದ್ವಿತೀಯ ಸ್ಥಾನ ಪಡೆದ ಸ್ವಾತಿ 32,500 ನಗದು ಪುರಸ್ಕಾರಕ್ಕೆ ಭಾಜನರಾದರು. ಹಾಗೆಯೇ 14 ವರ್ಷ ವಯೋಮಿತಿಯ ಬಾಲಕರ 52 ಕೆಜಿ ವಿಭಾಗದ ಬಾಲಕೇಸರಿ ಪ್ರಶಸ್ತಿಗಾಗಿ ಬಾಗಲಕೋಟೆಯ ಆದರ್ಶ ತೊಡದಾರ , ಧಾರವಾಡದ ಸಚಿನ್ ನಡುವೆ ಬಿರುಸಿನ ಪೈಪೋಟಿ ನಡೆದು 6.3ನಿಮಿಷದಲ್ಲಿ ಸಚಿನ್‌ರನ್ನು ಚಿತ್ ಮಾಡಿದ ಆದರ್ಶ ತೋಡದಾರ ಬಾಲಕೇಸರಿಯಾಗಿ ಹೊರ ಹೊಮ್ಮಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಒಳ ಗೊಂಡಿದೆ. 2ನೇ ಬಹುಮಾನ 32500 ಒಳಗೊಂಡಿದೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ಕೇಸರಿ ವಿಜೇತ ಪೈಲವಾನ ಸಂಗಮೇಶ ಬಿರಾದಾರ ಅವರು, ರತನ ಮಠಪತಿ ಅವರ ಗರಡಿ ಮನೆಯಲ್ಲಿ ಹತ್ತು ವರ್ಷಗಳಿಂದ ತರಬೇತಿ ಪಡೆದಿದ್ದು, 2ನೇ ರಾಜ್ಯ ಮಟ್ಟದ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ. ಎದುರಾಳಿ ತೀವ್ರ ಪೈಪೋಟಿ ನೀಡಿದರೂ ಗೆಲುವು ನನ್ನದಾಗಿದ್ದು ಜಯವನ್ನು ತಾಯಿ ಹಾಗೂ ಗೆಳೆಯರಿಗೆ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ. 

ಶಾಲಿನಿ ಸಿದ್ಧಿ ಕರ್ನಾಟಕ ಕಿಶೋರಿ 

17 ವರ್ಷದೊಳಗಿನ ಬಾಲಕಿಯರ 53 ಕೆಜಿ ವಿಭಾಗದಲ್ಲಿ ಕರ್ನಾಟಕ ಕಿಶೋರಿ ಪ್ರಶಸ್ತಿಗೆ ಹಳಿಯಾಳಧ ಶಾಲಿನಿ ಸಿದ್ಧಿ ಅವರು ತಮ್ಮ ಎದುರಾಳಿ ಗಾಯತ್ರಿ ತಾಳೆ ಅವರನ್ನು 6-2 ಅಂಕಗಳಿಂದ ಮಣಿಸಿ ಕರ್ನಾಟಕ ಕಿಶೋರಿ ಪ್ರಶಸ್ತಿ ಪಡೆದರು. ಪ್ರಶಸ್ತಿ 75 ಸಾವಿರ ನಗದು ಒಳಗೊಂಡಿದೆ. ಎರಡನೇ ಸ್ಥಾನಕ್ಕೆ 50 ಸಾವಿರ ಬಹುಮಾನ ನೀಡಲಾಯಿತು. 

ಮಹೇಶ ಲಂಗೋಟಿ ಕರ್ನಾಟಕ ಕಿಶೋರ 

17 ವರ್ಷ6ದೊಳಗಿನ ಬಾಲಕರ 60 ಕೆಜಿ ವಿಭಾಗದ ಕರ್ನಾಟಕ ಕಿಶೋರ ಪ್ರಶಸ್ತಿಯನ್ನು ಬೆಳಗಾವಿಯ ಮಹೇಶ ಲಂಗೋಟಿ ತಮ್ಮದಾಗಿಸಿಕೊಂಡರು. ಈ ಪ್ರಶಸ್ತಿಯು 75 ಸಾವಿರ ನಗದು ಹಾಗೂ ಚಿನ್ನದ ಪದಕ ಮತ್ತು 2ನೇ ಬಹುಮಾನ ಪಡೆದ ಸಂಜೀವ ಕೊರವರಗೆ 50 ಸಾವಿರ ಹಾಗೂ ಬೆಳ್ಳಿ ಪದಕ ನೀಡಲಾಯಿತು. ಇದೇ ಆಟದಲ್ಲಿ ದಾವಣಗೆರೆಯ ಸಿದ್ದು ಎಸ್.ಟಿ. ಹಾಗೂ ಬಾಗಲ ಕೋಟೆಯ ಆನಂದ ಕೆ.ಎಚ್. ತೃತೀಯ ಸ್ಥಾನ ಗಳಿಸಿ ತಲಾ 25 ಸಾವಿರ ಪಡೆದುಕೊಂಡರು.

ಕುಸ್ತಿ ರಸಿಕರ ಮನ ರಂಜಿಸಿದ ಆಹ್ವಾನಿತ ಕುಸ್ತಿ

ಕರ್ನಾಟಕ ಕುಸ್ತಿ ಹಬ್ಬದ ಬಹುಮಾನಿತ ಪಂದ್ಯಗಳ ನಂತರ ಕುಸ್ತಿ ಪಟುಗಳನ್ನು ಹಾಗೂ ಕುಸ್ತಿ ರಸಿಕರಿಗೆ ಆಸಕ್ತಿ ಮೂಡಿಸಲು ಮಂಗಳವಾರ ರಾತ್ರಿ ಕುಸ್ತಿ ಹಬ್ಬದಲ್ಲಿ ಆಹ್ವಾನಿತ ಪಂದ್ಯ ಆಯೋಜಿಸಲಾಗಿತ್ತು. ಆಹ್ವಾನಿತರಾಗಿ ಆಗಮಿಸಿದ್ದ ಬಹುತೇಕ ಕುಸ್ತಿ ಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರೆ ಆಗಿದ್ದರಿಂದ ಭಲೇ ಭಲೇ ಎನ್ನುವಂತೆ ಅಖಾಡದಲ್ಲಿ ಎದುರಾಳಿಗಳನ್ನು ಕುಸ್ತಿ ಒಗೆದರು. ಹತ್ತು ಸಾವಿರಕ್ಕೂ ಹೆಚ್ಚು ಜನರ ಕರತಾಡನ ಹಾಗೂ ಶಿಳ್ಳೆಗಳ ಮಧ್ಯೆ ಪೈಲವಾನರು ಧಾರವಾಡದ ಮಣ್ಣಿನಲ್ಲಿ ಸೆಣಸಾಡಿದರು.

ಕಾಮನ್‌ ವೆಲ್ತ್‌ ಪದಕ ವಿಜೇತ ಧಾರವಾಡದ ಶಿಂಗನಹಳ್ಳಿಯ ಮಹ್ಮದ್‌ ರಫೀಕ್‌ ಹೊಳಿ ಹಾಗೂ ರಾಷ್ಟ್ರೀಯ ಪದಕ ವಿಜೇತ ಹರಿಯಾಣದ ಮದನ್‌ ಅವರ ನಡುವೆ ನಡೆದ ಆಹ್ವಾನಿತ ಪಂದ್ಯದಲ್ಲಿ ರಫೀಕ್‌ ಹೊಳಿ ಅವರಿಗೆ ಬಿರುಸಿನ ಪೈಪೋಟಿ ನೀಡಿದ ಮದನ್‌ ಅವರನ್ನು ಕೆಲವೇ ಕ್ಷಣದಲ್ಲಿ ಚಿತ್‌ ಮಾಡಿ ಧಾರವಾಡದ ಜನತೆಗೆ ಮತ್ತಷ್ಟುಹುರುಪು ನೀಡಿದರು.
ನಂತರ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪದಕ ವಿಜೇತರಾದ ದೆಹಲಿಯ ರೋಹನಕ್‌ ಹಾಗೂ ಹರಿಯಾಣದ ಸುಮನ್‌ ನಡುವೆ ನಡೆದ ತುರುಸಿದ ಸಮರ 25 ನಿಮಿಷ ಕಳೆದರೂ ಯಾರೂ ಗೆಲ್ಲದ ಕಾರಣ ಡ್ರಾ ಆಯಿತು. ಮೊದಲು ಸುಮನ್‌ ಅವರನ್ನು ರೋಹನಕ್‌ ಅಖಾಡದ ಗಡಿರೇಖೆಯ ಹೊರಗಡೆ ಚಿತ್‌ ಮಾಡಿದ್ದರಿಂದ, ಸುಮನ್‌ ನಿರ್ಣಾಯಕರ ತೀರ್ಪನ್ನು ಒಪ್ಪಲಿಲ್ಲ. ಮತ್ತೊಮ್ಮೆ ಇಬ್ಬರೂ ಕಲಿಗಳನ್ನು ಪ್ರೇಕ್ಷಕರ ಒತ್ತಾಯದ ಮೇರೆಗೆ ಕಣಕ್ಕಿಳಿಸಲಾಯಿತು. ಆಗ ಇಬ್ಬರ ನಡುವೆ ನಡೆದ ಬಿರುಸಿನ ಪೈಪೋಟಿ ಪ್ರೇಕ್ಷಕರ ತೀವ್ರ ಕುತೂಹಲ ಕೆರಳಿಸಿತು. ಸುಮಾರು 25 ನಿಮಿಷಗಳ ಕಾಲ ಇಬ್ಬರೂ ಮಹಿಳಾ ಪೈಲ್ವಾನರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತು. ಸಮಬಲದ ಹೋರಾಟದಿಂದ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ರಾಹುಲ್‌ ರೋಹಿತ್‌ ಸಮಬಲ

ಇನ್ನು, ಅಂತಾರಾಷ್ಟ್ರೀಯ ಪದಕ ವಿಜೇತ ಹರಿಯಾಣದ ರಾಹುಲ್‌ ರಾಟಿ ಹಾಗೂ ಉತ್ತರ ಪ್ರದೇಶದ ರೋಹಿತ್‌ ಅವರನ್ನು ಎದುರಿಸಿದರು. ಪರಸ್ಪರ ಸುದೀರ್ಘ ಬಿರುಸಿನ ಕಾದಾಟ ನಡೆದು ಈ ಪಂದ್ಯ ಸಹ ಸಮಬಲದಿಂದ ಡ್ರಾಗೊಂಡಿತು.

ಲಕ್ಷ್ಮೀ ರೇಡೆಕರ್‌ ಜಯ

ಉತ್ತರ ಪ್ರದೇಶದ ಸುಧಾ ಬಾಗಿಲ್‌ ಹಾಗೂ ಕರ್ನಾಟಕದ ಉಕದ ಕಕ್ಕೇರಿಯ ಲಕ್ಷ್ಮೀ ರೇಡೆಕರ್‌ ಅವರ ನಡುವೆ ನಡೆದ ಪಂದ್ಯದಲ್ಲಿ ಲಕ್ಷ್ಮೀ ರೇಡೆಕರ್‌ ಅವರು ತಮ್ಮ ಎದುರಾಳಿ ಸುಧಾ ಅವರನ್ನು ಚಿತ್‌ ಮಾಡಿ ವಿರೋಚಿತ ಗೆಲುವು ಸಾಧಿಸಿದರು. ಇದಕ್ಕೂ ಮುಂಚೆ ನಡೆದ ಪಂದ್ಯದಲಿ ಅಜೆರಬೈಜಾನ್‌ ದೇಶದ ಜೈಲಾ ನಾಗಿಜಡೇ ವಿರುದ್ಧ ಹರಿಯಾಣದ ಅಂಶು ಮಲ್ಲಿಕ್‌ ಜಯಗಳಿಸಿದರು.

ರಾತ್ರಿ 10ರ ಸುಮಾರಿಗೆ ಕುಸ್ತಿಪಟುಗಳಾದ ಪಂಜಾಬಿನ ಕವಲಜಿತ್‌ ಸಿಂಗದ ವಿರುದ್ಧ ಮಹಾರಾಷ್ಟ್ರದ ಸಾಗರ ಬಿರಾಜದಾರ್‌ ಅವರ ನಡುವೆ ನಡೆದ ಪಂದ್ಯ ರೋಚಕವಾಗಿತ್ತು. ಪ್ರಾರಂಭದಿಂದಲೂ ಮೇಲುಗೈ ಸಾಧಿಸಿದ್ದ ಸಾಗರ್‌ ಅವರು ಕೊನೆಗೆ ಕವಲಜಿತ್‌ ಸಿಂಗ್‌ ವಿರುದ್ಧ ಚಿತ್‌ ಆದರು.

ಸಾಧನೆಗೆ ಸಂದ ಗೌರವ

ತೀವ್ರ ಬಡತನದಲ್ಲೂ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಹಾರಾಷ್ಟ್ರದ ನಂದಿನಿ ಸಾಳುಂಕೆ ಅವರಿಗೆ ಶಾಸಕ ಅಮೃತ ದೇಸಾಯಿ . 25 ಸಾವಿರ ನೀಡಿ ಇದೇ ವೇದಿಕೆಯಲ್ಲಿ ಗೌರವಿಸಿದರು. ನಂದಿನಿ ಅವರನ್ನು ತಾಯಿ ಬೇರೆಯವರ ಮನೆ ಪಾತ್ರೆ ತೊಳೆದು ಮಗಳನ್ನು ಬೆಳೆಸಿದ್ದರಿಂದ ಅವರನ್ನು ಗೌರವಿಸಲಾಯಿತು.
 

click me!