
ಹಾಸನ (ಮಾ.27): ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಂದರ ಪ್ರವಾಸಿ ತಾಣವೊಂದು ಇಂದು ಬೆಳ್ಳಂಬೆಳಗ್ಗೆ ರಣರಂಗವಾಗಿ ಮಾರ್ಪಟ್ಟಿತ್ತು. ಪ್ರಸಿದ್ಧ ಬೆಟ್ಟದ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ (Pre-wedding shoot) ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಲೆನಾಡಿನ ಸುಂದರ ಪರಿಸರದಲ್ಲಿ ತಮ್ಮ ಮದುವೆಯ ನೆನಪುಗಳನ್ನು ಸೆರೆಹಿಡಿಯಲು ನವಜೋಡಿಯೊಂದು ಫೋಟೋಗ್ರಾಫರ್‌ಗಳ ತಂಡದೊಂದಿಗೆ ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಸ್ಥಾನಕ್ಕೆ ಬಂದಿತ್ತು. ಮುಂಜಾನೆಯ ಮಂಜಿನ ನಡುವೆ ಶೂಟಿಂಗ್ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಕೆಲ ಸ್ಥಳೀಯ ಯುವಕರು, 'ಇಲ್ಲಿ ಯಾಕೆ ಶೂಟಿಂಗ್ ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಫೋಟೋಗ್ರಾಫರ್‌ಗಳು ಮತ್ತು ಸ್ಥಳೀಯ ಯುವಕರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ಆರಂಭದಲ್ಲಿ ಕೇವಲ ಮಾತಿನ ಚಕಮಕಿಯಾಗಿದ್ದ ಈ ಘಟನೆ, ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿದೆ. ಸ್ಥಳೀಯರು ಎಂದು ಹೇಳಿಕೊಂಡ ಗುಂಪು ಫೋಟೋಗ್ರಾಫರ್‌ಗಳ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದೆ. 'ಯಾಕಪ್ಪ ಹೊಡಿತಾ ಇದ್ದೀರಿ? ನಮ್ಮ ತಪ್ಪೇನಿದೆ?' ಎಂದು ಫೋಟೋಗ್ರಾಫರ್‌ಗಳು ಅಸಹಾಯಕತೆಯಿಂದ ಪ್ರಶ್ನಿಸಿದರೂ ಕೇಳದ ಉದ್ರಿಕ್ತ ಗುಂಪು, ಗೂಂಡಾಗಿರಿ ಪ್ರದರ್ಶಿಸಿ ಅವರ ಮೇಲೆ ಹಿಗ್ಗಾಮುಗ್ಗಾ ಕೈ ಮಾಡಿದೆ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ದೇವಸ್ಥಾನದ ಪವಿತ್ರ ಆವರಣದಲ್ಲಿ ಗಲಾಟೆಯ ವಾತಾವರಣ ನಿರ್ಮಾಣವಾಗಿತ್ತು.
ಹಲ್ಲೆಯ ಬಳಿಕ ಎರಡೂ ಕಡೆಯವರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಧಾವಿಸಿದ್ದು, ಪರಸ್ಪರ ದೂರು ನೀಡಿದ್ದಾರೆ. ಫೋಟೋಗ್ರಾಫರ್‌ಗಳು ತಮಗೆ ಅನ್ಯಾಯವಾಗಿ ಹೊಡೆದಿದ್ದಾರೆ ಎಂದು ದೂರಿದ್ದಾರೆ. ಆದರೆ, ಸ್ಥಳೀಯರು ತಾವು ಹಲ್ಲೆ ಮಾಡುವುದಕ್ಕೆ ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಈ ಪ್ರಸಿದ್ಧ ದೇವಸ್ಥಾನದ ಬಳಿ ನಿಯಮ ಎಲ್ಲಿಂದಲೋ ಬರುವ ಫೋಟೋ ಶೂಟ್ ಮಾಡಿಸಿಕೊಳ್ಳುವವರು ಇಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇನ್ನು ಫೋಟೋಗ್ರಾಫರ್‌ಗಳಿಗೆ ನಿಯಮ ಪಾಲನೆಗೆ ಹೇಳಿದರೂ ಕೇಳದೆ ಪುನಃ ಹೊಸ ಆರ್ಡರ್‌ಗಳನ್ನು ತೆಗೆದುಕೊಂಡು ವಾಪಸ್ ಇಲ್ಲಿಗೇ ಬರುತ್ತಾರೆ. ಇದೀಗ ಹಲ್ಲೆಗೆ ಒಳಗಾದ ಫೋಟೋಗ್ರಾಫರ್‌ಗಳು ಹೊಸ ಜೋಡಿಗಳಿಗೆ ದೇವಾಲಯ ಆವರಣದಲ್ಲಿ ಚಪ್ಪಲಿ ಹಾಗೂ ಶೂ ಹಾಕಿಕೊಂಡು ಫೋಟೋ ಶೂಟಿಂಗ್ ಮಾಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಹೀಗಾಗಿ, ಹಲ್ಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸಕಲೇಶಪುರ ಮತ್ತು ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಪ್ರೀ ವೆಡ್ಡಿಂಗ್ ಶೂಟಿಂಗ್‌ಗೆ ಹೇಳಿ ಮಾಡಿಸಿದ ಜಾಗಗಳಾಗಿವೆ. ಪ್ರತಿ ದಿನ ನೂರಾರು ತಂಡಗಳು ಇಲ್ಲಿಗೆ ಆಗಮಿಸುತ್ತವೆ. ಆದರೆ, ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಇಂತಹ ಸಂಘರ್ಷಗಳು ಮರುಕಳಿಸುತ್ತಿರುವುದು ಪ್ರವಾಸಿಗರಲ್ಲಿ ಭೀತಿ ಮೂಡಿಸಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಇಂತಹ ಜಾಗಗಳಲ್ಲಿ ಸೂಕ್ತ ನಿಯಮಗಳನ್ನು ರೂಪಿಸಿ, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.