ಒಂದೇ ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಕರು: ಸೈನಿಕ ಶಾಲೆ ಕೊಡಗಿನಲ್ಲಿ ಸಂಭ್ರಮದ ವಾತಾವರಣ

Published : Jul 13, 2026, 10:42 PM IST
Sainik School Kodagu

ಸಾರಾಂಶ

Sainik School Karnataka: ಕೂಡಿಗೆಯಲ್ಲಿ  ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ  ನೆರೆವೇರಿತು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜು.13): ಕೂಡಿಗೆಯಲ್ಲಿ ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರೆವೇರಿತು. ಶಾಲೆಯ ಮಾಜಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಸ್ತುತ ಶಾಲಾ ಸಿಬ್ಬಂದಿ ವರ್ಗದವರು ಸೌಹಾರ್ದತೆ, ಸಂಪ್ರದಾಯ ಮತ್ತು ಸಾಧನೆಗಳನ್ನು ಹಂಚಿಕೊಳ್ಳಲು ಒಂದೆಡೆ ಸೇರಿದ್ದರು. ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಚ್‌ಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಶ್ರೀಮತಿ ದಿವ್ಯಾ ಸಿಂಗ್ ಮತ್ತು ಕೋಡಾಕ್ ಅಸೋಸಿಯೇಷನ್( ಹಳೇ ವಿದ್ಯಾರ್ಥಿಗಳ ಸಂಘದ) ಅಧ್ಯಕ್ಷರಾದ ಶ್ರೀ ಶಫೀವುಲ್ಲಾ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವು ಹಳೆ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕೆಡೆಟ್ ನಿಶಾಂತ್ ನಾರಾಯಣ್ ಸ್ವಾಗತ ಕೋರಿದರು ಮತ್ತು 11ನೇ ತರಗತಿಯ ಕೆಡೆಟ್ ಗಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶ್ರೀ ಶಫೀವುಲ್ಲಾ ಅವರು, ಸಂಸ್ಥೆಯೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಮತ್ತು ಶಾಲೆಯ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಸಂಘ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ವಿವರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಡೆಟ್‌ಗಳು ಸುಮಧುರ ಗೀತಗಾಯನ, ರಾಮಾಯಣದ ಪ್ರಸಂಗಗಳನ್ನು ಬಿಂಬಿಸುವ ಆಕರ್ಷಕ ನೃತ್ಯ ಮತ್ತು ಚಂಡೆ ಮೇಳವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. ಕರ್ನಲ್ ಅಮರ್ ಜೀತ್ ಸಿಂಗ್ ಅವರು 2025-26ನೇ ಸಾಲಿನ ಅಕಾಡೆಮಿಕ್ ಸಾಧನಾ ಟ್ರೋಫಿ, ಯುಪಿಎಸ್‌ಸಿ ಪರೀಕ್ಷೆಯ ಸಾಧನಾ ಟ್ರೋಫಿ ಮತ್ತು ಒಟ್ಟಾರೆ ಶ್ರೇಷ್ಠತೆಗಾಗಿ ಕಠಾರಿ ಹೌಸ್‌ಗೆ ಕಾಕ್ ಹೌಸ್ ಟ್ರೋಫಿಯನ್ನು ಪ್ರದಾನ ಮಾಡಿದರು. ಕೃತಜ್ಞತೆಯ ಸಂಕೇತವಾಗಿ ಶ್ರೀ ಶಫೀವುಲ್ಲಾ ಅವರು ಪ್ರಾಂಶುಪಾಲರಿಗೆ ಸ್ಮರಣಿಕೆಯನ್ನು ನೀಡಿದರು.

ಅಲ್ಲದೆ, ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ದಕ್ಷಿಣಾಮೂರ್ತಿ ಮತ್ತು ಆಗಸ್ಟ್‌ನಲ್ಲಿ ನಿವೃತ್ತರಾಗಲಿರುವ ಸಾಮಾನ್ಯ ನೌಕರ ಶ್ರೀ ಮಲ್ಲಿಕಾರ್ಜುನ್ ಅವರ ಸೇವೆಯನ್ನು ಗುರುತಿಸಿ ಹಳೆ ವಿದ್ಯಾರ್ಥಿಗಳ ಸಂಘವು ಸನ್ಮಾನಿಸಿತು. ಪ್ರಾಂಶುಪಾಲರು ಕೋಡಾಕ್‌ನ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ತಮ್ಮ ಭಾಷಣದಲ್ಲಿ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಹಳೆ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸಂಸ್ಥೆಯೊಂದಿಗಿನ ಅವರ ನಿರಂತರ ಸಂಬಂಧವನ್ನು ಶ್ಲಾಘಿಸಿದರು.

ಮರುನಾಮಕರಣ ಮಾಡುವ ಪ್ರಸ್ತಾವನೆ

ಮಹಿಳಾ ಹಳೆ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸಲು ಸಂಘದ ಹೆಸರನ್ನು 'ಓಲ್ಡ್ ಬಾಯ್ಸ್ ಅಂಡ್ ಗರ್ಲ್ಸ್ ಅಸೋಸಿಯೇಷನ್' (OBGA) ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಅವರು ಮಂಡಿಸಿದರು. ಸೈನಿಕ ಶಾಲೆ ಕೊಡಗು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೈನಿಕ ಶಾಲೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದ ಅವರು, ಶಾಲೆಯು ಚಾರಿತ್ರ್ಯ ನಿರ್ಮಾಣ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಭಾರತೀಯ ನೌಕಾಪಡೆಯ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್ ಅವರು ಸೆಪ್ಟೆಂಬರ್‌ನಲ್ಲಿ ಆಡಳಿತಾಧಿಕಾರಿಯಾಗಿ ಸೇರಲಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡರು.

ಹಳೆ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಶ್ರೀ ಸುನೀಲ್ ಕರಳೆ, ಶಾಲೆಗೆ ಶ್ರೀ ದಕ್ಷಿಣಾಮೂರ್ತಿ ಮತ್ತು ಶ್ರೀ ಮಲ್ಲಿಕಾರ್ಜುನ್ ನೀಡಿದ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸಿದರು. ಆಚರಣೆಯು ಹಳೆ ವಿದ್ಯಾರ್ಥಿಗಳು ಮತ್ತು ಶಾಲಾ ತಂಡಗಳ ನಡುವೆ ನಡೆದ ಸೌಹಾರ್ದ ಫುಟ್‌ಬಾಲ್ ಮತ್ತು ಹಾಕಿ ಪಂದ್ಯಗಳೊಂದಿಗೆ ಮುಕ್ತಾಯಗೊಂಡಿತು. ಕೆಡೆಟ್ ಚಿನ್ಮಯ ಧನ್ಯವಾದ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ಶ್ರೀ ಎನ್. ವಿಬಿನ್ ಕುಮಾರ್, ಬೋಧಕ ಮತ್ತು ಆಡಳಿತ ಸಿಬ್ಬಂದಿ, ಎನ್‌ಸಿಸಿ ಪಿಐ ಸಿಬ್ಬಂದಿ ಮತ್ತು ಕೆಡೆಟ್‌ಗಳು ಭಾಗವಹಿಸಿದ್ದರು.

PREV
Read more Articles on
click me!

Recommended Stories

ಬಿಡದಿ ಟೌನ್‌ಶಿಪ್ ಹೋರಾಟ: ಭೂಮಿ ಅಳತೆಗೆ ಬಂದ ಸರ್ಕಾರಿ ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿದ ರೈತ ಮಹಿಳೆಯರು!
ಯುರೋಪಿನ ಹಳೆಯ ನಗರಕ್ಕೂ ಸವಾಲು ಹಾಕುವ ಬೆಂಗಳೂರಿನ ಈ ಏರಿಯಾ? ವೈರಲ್ ಆಯ್ತು ಈ ಪೋಸ್ಟ್