'ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ಕೇಂದ್ರ ಸಚಿವ ಅಮಿತ್ ಶಾಗೆ ಯೋಗ್ಯತೆ ಇಲ್ಲ'

By Kannadaprabha NewsFirst Published Feb 28, 2020, 8:18 AM IST
Highlights

ಶತಮಾನದ ಸಭ್ಯತೆಗೆ ಅಮಿತ್‌ ಶಾ ಕಳಂಕಕಾರಿ: ಎಸ್‌.ಆರ್‌. ಹಿರೇಮಠ| ದೆಹಲಿ ಹೊತ್ತಿ ಉರಿಯುತ್ತಿರುವ ವೇಳೆ ಪೊಲೀಸರು ಕೈಕಟ್ಟಿಕುಳಿತಿರುವುದು ಆತಂಕಕಾರಿ ಬೆಳವಣಿಗೆ| ಶಾ ರಾಜೀನಾಮೆ ನೀಡದಿದ್ದರೆ ಸಂಪುಟದಿಂದ ಮೋದಿ ಕೈಬಿಡಲಿ| 

ಗದಗ(ಫೆ.28): ದೇಶದ ಶತಮಾನದ ಸಭ್ಯತೆಗೆ ಕಳಂಕಕಾರಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಾರ್ವಜನಿಕ ಜೀವನದಲ್ಲಿ ಯೋಗ್ಯ ವ್ಯಕ್ತಿ ಅಲ್ಲದ ಹಿನ್ನೆಲೆಯಲ್ಲಿ ತಕ್ಷಣವೇ ರಾಜೀನಾಮೆ ನೀಡಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಹೇಳಿದರು.

ಅವರು ಗುರುವಾರ ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯಾ ನಂತರ ದೆಹಲಿಯಲ್ಲಿ ಗಂಭೀರ ಗಲಭೆ ಜರುಗಿದೆ. ದೆಹಲಿ ಪೊಲೀಸರ ನಿಷ್ಕ್ರೀಯತೆ ಮತ್ತು ಮೂವರು ಬಿಜೆಪಿ ನಾಯಕರ ಹೇಳಿಕೆಗಳು ಗಲಭೆಗೆ ಕಾರಣವಾಗಿವೆ. ಗಲಭೆಗಳ ನಿಯಂತ್ರಣಕ್ಕೆ ಪ್ರಯತ್ನಿಸಬೇಕಿದ್ದ ಸಚವ ಅಮಿತ್‌ ಶಾ ಅವರೇ ಈ ಭಾಗದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವುದು ವರದಿಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸರ ಮತ್ತು ಸರ್ಕಾರ ನಿಷ್ಕ್ರೀಯತೆ ಕುರಿತು ಈಗಾಗಲೇ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳು ಛೀಮಾರಿ ಹಾಕಿವೆ, ದೆಹಲಿ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ಕೈ ಕಟ್ಟಿಕುಳಿತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಧರ್ಮ ಧರ್ಮಗಳಲ್ಲಿ ಒಡಕು ತರುವ ಪ್ರಯತ್ನ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದಲೇ ಪ್ರಾರಂಭವಾಗಿದೆ.

30ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ನೂರಾರು ಜನರಿಗೆ ಗಂಭೀರ ಸ್ವರೂಪದ ಗಾಯಾಳುಗಳಾಗಿದ್ದಾರೆ. ಸರ್ಕಾರದ ಈ ನಿಷ್ಕಿ್ರಯತೆಯನ್ನು ಸಿಟಿಜನ್‌ ಫಾರ್‌ ಡೆಮಾಕ್ರಸಿ ಸಂಘಟನೆ ಖಂಡಿಸುತ್ತದೆ. ಅಮಿತ್‌ ಶಾ ರಾಜೀನಾಮೆ ನೀಡದೇ ಇದ್ದಲ್ಲಿ ಪ್ರಧಾನಿ ಮೋದಿ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಪ್ರಧಾನಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಕುರಿತು ಸಂಘಟನೆ ರಾಷ್ಟ್ರಪತಿಗಳ ಮೊರೆ ಹೋಗಲಿದೆ ಎಂದರು.

ಪಾಕ್‌ ಪರ ಘೋಷಣೆ ಕೂಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಸಭ್ಯತೆ ಮತ್ತು ಮೌಲ್ಯಗಳಿಗೆ ತದ್ವಿರುದ್ಧವಾಗಿ ಹೇಳಿಕೆ ನೀಡುವುದು ತಪ್ಪು, ದೇಶದಲ್ಲಿ ಸಂವಿಧಾನವಿದೆ. ಅದನ್ನು ಅರಿತು ಎಲ್ಲರೂ ಬದುಕು ರೂಪಿಸಿಕೊಳ್ಳಬೇಕು, ಈ ರೀತಿಯ ದುಷ್ಕೃತ್ಯದಲ್ಲಿ ತೊಡಗಿರುವವರ ಕುರಿತು ಸಮಗ್ರ ಸತ್ಯ ಶೋಧನೆ ಜರುಗಬೇಕಿದೆ.

ಸಿಎಎ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ಸಿಎಎ ಮತ್ತು ಎನ್‌ಆರ್‌ಸಿ ಅಂತಾ ಕಾನೂನು ಜಾರಿಗೆ ಬರಲು ಪರೋಕ್ಷವಾಗಿ ಕಾಂಗ್ರೆಸ್ಸಿಗರೇ ಕಾರಣ, ಜನಹಿತ ಆಡಳಿತ ಕೊಡುವುದು ಬಿಟ್ಟು, ಜನವಿರೋಧಿಯಾಗಿ ನಡೆಯುತ್ತಿರುವ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಸುಳ್ಳುಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ ಪೂಜಾರ ಮುಂತಾದವರು ಹಾಜರಿದ್ದರು.

ದೊರೆಸ್ವಾಮಿ ಕುರಿತು ಹೇಳಿಕೆಗೆ ಆಕ್ಷೇಪ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪಾಕ್‌ ಏಜೆಂಟ್‌ ಎಂದು ಶಾಸಕ ಬಸನಗೌಡ ಯತ್ನಾಳ ಹಿಯಾಳಿಸಿರುವುದಕ್ಕೆ ಎಸ್‌.ಆರ್‌. ಹಿರೇಮಠ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಲೇಚಾವ್‌, ಕ್ವಿಟ್‌ ಇಂಡಿಯಾದಂಥ ಚಳವಳಿಯಲ್ಲಿ ದೊರೆಸ್ವಾಮಿ ಭಾಗವಹಿಸಿದವರು. ನಮ್ಮಂತಹ ಹಲವಾರು ಹೋರಾಟಗಾರರ ಆಂದೋಲನಗಳಿಗೆ ಅವರೇ ಪ್ರೇರಣೆ. ಇಂಥವರ ಬಗ್ಗೆ ಹಗುರವಾಗಿ ಮಾತನಾಡುವದು ಯತ್ನಾಳ ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.

ಒಮ್ಮೆ ಎಂಎಲ್‌ಎ ಆದ ಮೇಲೆ ಆ ಕ್ಷೇತ್ರದ ಎಲ್ಲ ಜನರ ಪ್ರತಿನಿಧಿ ಆಗ್ತಾನೆ. ಯತ್ನಾಳ ಅವರು ನಾಲಿಗೆ ಮೇಲೆ ನಿಯಂತ್ರಣ ಇಡಲಿ. ಅವರ ತಂದೆ, ತಾಯಿ, ಧರ್ಮ, ನ್ಯಾಯ, ನೀತಿ ಪರಿಕಲ್ಪನೆ ಕೊಟ್ಟಿದ್ರೆ ಜವಾಬ್ದಾರಿ ಮಾತು ಆಡಲಿ. ಗಾಂಧೀಜಿಯವರು ಈ ದೇಶದಲ್ಲಿ ಇದ್ದೋರೆ ಅಲ್ಲ ಅಂತಾ ತಿಳಿಲಾರದ ಮಾತು ಆಡಿದ್ರೆ ಹೇಗೆ? ಅವರು ದಕ್ಷಿಣ ಆಫ್ರಿಕಾದಲ್ಲಿ ಇದ್ರು, ಅಲ್ಲಿಯೂ ಹೋರಾಟ ಮಾಡಿದ್ರು ಹಾಗೆ ಇಲ್ಲಿಯೂ ಹೋರಾಟ ಮಾಡಿದ್ದಾರೆ. ಅದಕ್ಕೆ ಸೂರ್ಯ ಚಂದ್ರ ಇರೋದು ಎಷ್ಟು ಸ್ಪಷ್ಟಾನೋ ಗಾಂಧೀಜಿ ಅವರ ಹೋರಾಟ ಕೂಡಾ ಸ್ಪಷ್ಟ ಎಂದರು.

ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಪೃಥ್ವಿ ಮಾತೆ ವಿನಾಶದ ಅಂಚಿನಲ್ಲಿದೆ. ಸಂಕುಚಿತ ಜಗತ್ತಿನಲ್ಲಿ ಮುಳುಗಿರುವ ಜನನಾಯಕರಿಂದ ಸಂರಕ್ಷಣೆ ಸಾಧ್ಯವಿಲ್ಲ ಎನ್ನುವುದನ್ನು ಅರಿತು, ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶರಣ ಸಂತ ಸಂದೇಶ ಯಾತ್ರೆಯನ್ನು ಆಯೋಜಿಸಲಾಗಿದೆ. ಫೆ 24ರಂದು ಹಾವೇರಿ ಜಿಲ್ಲೆಯ ಕೂಸನೂರಿನಿಂದ ಪ್ರಾರಂಭಗೊಂಡಿರುವ ಯಾತ್ರೆ ಮಂಗಳವಾರವೇ ಗದುಗಿಗೆ ಆಗಮಿಸಿದ್ದು ತಾಲೂಕಿನ ಬೆಳದಡಿ, ಕಡಕೋಳ ಹಾಗೂ ಕಪ್ಪತ್ತಗುಡ್ಡ ಪ್ರದೇಶ ವ್ಯಾಪ್ತಿಯಲ್ಲಿ ಸಂಚರಿಸಿದ್ದು, ಮಾರ್ಚ್‌ 1ರಂದು ಕೂಡಲ ಸಂಗಮ ದೇವಸ್ಥಾನ ಆವರಣದಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಎಸ್‌.ಆರ್‌. ಹಿರೇಮಠ ಹೇಳಿದ್ದಾರೆ.
 

click me!