ಬೆಂಗಳೂರು ಸಮೀಪ ಇರುವ ನಂದಿಬೆಟ್ಟಕ್ಕೆ ಹೊಸ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶೀಘ್ರವೇ ಈ ವ್ಯವಸ್ಥೆ ಮಾಡುವ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಮಾ.23): ನಂದಿ ಗಿರಿಧಾಮವನ್ನು ಇನ್ನಷ್ಟುಆಕರ್ಷಿಣಿಯ ಮಾಡುವ ಮೂಲಕ ಪ್ರವಾಸಿಗರನ್ನು ಸೆಳೆಯಲು ರೋಪ್‌ವೇ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವ ಸಂಬಂಧ ವಿಸ್ತೃತ ರೂಪುರೇಷೆಯನ್ನು ಸಿದ್ಧಪಡಿಸಿ ಒಂದು ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ವಿಕಾಸಸೌಧದಲ್ಲಿ ಶುಕ್ರವಾರ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅಧ್ಯಕ್ಷತೆಯಲ್ಲಿ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ವೇಳೆ ಐಡೇಕ್ ಸಂಸ್ಥೆಯು ಯೋಜನೆಯ ಪ್ರಾತ್ಯಕ್ಷಿಕೆಯನ್ನು ತೋರಿಸಿತು. 2.90 ಕಿ.ಮೀ. ಎತ್ತರ ಇರುವ ನಂದಿಬೆಟ್ಟಕ್ಕೆ ರೋಪ್‌ವೇ ನಿರ್ಮಿಸಲು ನಿರ್ಧರಿಸಲಾಯಿತು. ನಂದಿಬೆಟ್ಟದ ಕೆಳಗೆ ಅಂದಾಜು 25 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್, ಫುಡ್‌ಕೋರ್ಟ್, ಶೌಚಾಲಯ, ಕರ್ನಾಟಕದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು, ವೈನ್ ಪ್ರವಾಸೋದ್ಯಮ ಸೇರಿದಂತೆ ಪ್ರವಾಸಿಗರಿಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸುವ ತೀರ್ಮಾನ ಕೈಗೊಳ್ಳಲಾಯಿತು.
ಕೇಂದ್ರ ಸರ್ಕಾರ ಶೇ.20ರಷ್ಟುಹಣವನ್ನು ರೋಪ್‌ವೇ ಯೋಜನೆಗೆ ಹಣ ನೀಡಲಿದೆ. ಯೋಜನೆಯು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸರಹದ್ದಿನಲ್ಲಿ ಬರಲಿದ್ದು, ಎರಡು ಜಿಲ್ಲೆಗಳ ಕಂದಾಯ ಅಧಿಕಾರಿಗಳಿಗೆ ಅಗತ್ಯ ಜಮೀನನ್ನು ಸ್ವಾಧೀನಪಡಿಸಿಕೊಂಡು ನೀಡಬೇಕು. ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಕಳೆದ 30 ವರ್ಷಗಳಿಂದ ನಂದಿಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಬಗ್ಗೆ ಮಾತನಾಡಲಾಗುತ್ತಿದೆ. ದಿವಂಗತ ಶಂಕರನಾಗ್ ಮೂರು ದಶಕಗಳ ಹಿಂದೆಯೇ ಯೋಜನೆಯ ಕನಸು ಕಂಡಿದ್ದರು. ಇದೀಗ ಕಾಲ ಕೂಡಿ ಬಂದಿದ್ದು, ಒಂದು ವರ್ಷದಲ್ಲಿ ನಂದಿಬೆಟ್ಟಕ್ಕೆ ರೋಪ್‌ವೇ ನಿರ್ಮಿಸಲಾಗುವುದು ಎಂದು ಸಚಿವ ಯೋಗೇಶ್ವರ್ ಹೇಳಿದರು.
ನಂದಿಬೆಟ್ಟದಲ್ಲಿ ಪ್ರವಾಸಿಗರಿಗಿಲ್ಲ ಕೊರೊನಾ ಭೀತಿ, ಜೋರಾಗಿದೆ ವೀಕೆಂಡ್ ಮೋಜು-ಮಸ್ತಿ! ...
ಎರಡನೇ ಹಂತದಲ್ಲಿ ನಂದಿಬೆಟ್ಟಮತ್ತು ಸ್ಕಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರೋಪ್‌ವೇ ನಿರ್ಮಾಣ ಮಾಡಲು ಯೋಜನೆ ರೂಪಿಸಬೇಕು. ಶಿವಗಂಗೆ, ಮಧುಗಿರಿಯ ಏಕಶಿಲಾ ಬೆಟ್ಟಮತ್ತು ಗುಂಡಿಬಂಡೆಯ ಆವಲಬೆಟ್ಟಗಳಿಗೆ ರೋಪ್‌ವೇ ನಿರ್ಮಾಣ ಮಾಡಲು ಸಹ ಯೋಜನೆ ರೂಪಿಸುವಂತೆ ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮಾ ಇತರರು ಉಪಸ್ಥಿತರಿದ್ದರು.