ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಮುಂಗಾರು ಮಳೆಯ ಕೃಪೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯ ತುಂಬಿ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗ ಕನಕಪುರ ತಾಲೂಕಿನ ಸಂಗಮ, ಮೇಕೆದಾಟು ಬಳಿ ಕಾವೇರಿ ನದಿ ಭೋರ್ಗರೆಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.
ಕೆ.ವಿ.ಮನು
ಕನಕಪುರ : ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಮುಂಗಾರು ಮಳೆಯ ಕೃಪೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯ ತುಂಬಿ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗ ಕನಕಪುರ ತಾಲೂಕಿನ ಸಂಗಮ, ಮೇಕೆದಾಟು ಬಳಿ ಕಾವೇರಿ ನದಿ ಭೋರ್ಗರೆಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.
ಕೆಆರ್‌ಎಸ್ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ಹಾಗೂದಿಂದ 50 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕಾವೇರಿ ನದಿ ಮತ್ತು ಉಪನದಿಗಳ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕನಕಪುರ ತಾಲೂಕಿನ ಸಂಗಮ- ಬಳಿ 2.20 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹರಿಯುತ್ತಿದೆ.
ಜಂಗಲ್ ಲಾಡ್ಜ್ ಜಲಾವೃತ:
ತಾಲೂಕಿನ ಸಂಗಮ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿರುವ ಜಂಗಲ್ ಲಾಡ್ಜ್ ಸಂಪೂರ್ಣ ಜಲಾವೃತಗೊಂಡಿದೆ. ಜಂಗಲ್ ಲಾಡ್ಜಸ್‌ನ ಕೆಳಭಾಗದಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ನಿರ್ಮಿಸಿದ್ದ ಟೆಂಟ್‌ಗಳು ನೀರಿನಲ್ಲಿ ಮುಳುಗಿವೆ. ಮೂರು ದಿನಗಳಿಂದ ಜಂಗಲ್‌ಲಾಡ್ಜ್ ಪ್ರವಾಸಿಗರು ಮಾಡಿದ್ದ ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಪಡಿಸಲಾಗಿದೆ.
ಮಯೂರ ಅತಿಥಿಗೃಹವೂ ಜಲಾವೃತ:
ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ ಸಂಗಮ ಬಳಿಯ ಮಯೂರ ಅತಿಥಿಗೃಹದ ಸುತ್ತಲೂ ನೀರು ತುಂಬಿದ್ದು, ಮಯೂರ ಲಾಡ್ಜ್ ಪಕ್ಕದಲ್ಲೇ ಇರುವ ಸಂಗಮೇಶ್ವರ ದೇವಾಲಯದವರೆಗೂ ನದಿ ನೀರು ತುಂಬಿ ಹರಿಯುತ್ತಿದೆ. ಸಂಗಮ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಅನಾಹುತಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಪ್ರವಾಸಿಗರಿಗೆ ನಿರ್ಬಂಧ:
ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಗಮ- ಮೇಕೆದಾಟಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಸ್ಥಳೀಯರೂ ನದಿಯ ಬಳಿ ಸುಳಿದಾಡದಂತೆ ಎಚ್ಚರಿಸಲಾಗಿದೆ. ಸಂಗಮದಿಂದ ಮೇಕೆದಾಟಿಗೆ ಹೋಗಲು ಇದ್ದ ತೆಪ್ಪ, ಬಸ್ ವ್ಯವಸ್ಥೆ ರದ್ದುಪಡಿಸಲಾಗಿದೆ. ಸಂಗಮಕ್ಕೆ ಹೋಗುವ ಪ್ರವಾಸಿಗರನ್ನು ಸಾಕಷ್ಟು ದೂರದಲ್ಲೇ ಪೊಲೀಸರು ತಡೆಯುತ್ತಿದ್ದಾರೆ.
ತಹಸೀಲ್ದಾರ್ ಭೇಟಿ:
ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕನಕಪುರ ತಹಸೀಲ್ದಾರ್ ಸ್ಮಿತಾ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಅಧಿಕಾರಿಗಳು ಸಂಗಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದು, ತಾಲೂಕು ಆಡಳಿತದಿಂದ ತುರ್ತು ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಪ್ರಕೃತಿ ವಿಕೋಪ ನಿರ್ವಹಣಾ ತಂಡವನ್ನು ಸಜ್ಜುಗೊಳಿಸಲಾಗಿದೆ.
ಬೊಮ್ಮಸಂದ್ರಕ್ಕೆ ರಸ್ತೆ ಸಂಪರ್ಕ ಕಡಿತ
ಕಾವೇರಿ ನದಿಯಲ್ಲಿ 2 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ಪ್ರಮಾಣದ ನೀರು ಹರಿಯುತ್ತಿದ್ದು, ಕಾವೇರಿ ನದಿ ಪಾತ್ರದಲ್ಲಿರುವ ಬೊಮ್ಮಸಂದ್ರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗಿದೆ. ಗ್ರಾಮಕ್ಕೆ ಹೋಗಿಬರಲು ರಸ್ತೆ ಸಂಪರ್ಕ ಇದ್ದ ಹಳ್ಳ ಜಲಾವೃತಗೊಂಡಿದೆ. ಗ್ರಾಮಕ್ಕೆ ಜನ ಮತ್ತು ವಾಹನ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರ ಓಡಾಟಕ್ಕೆ ಅರಣ್ಯ ಇಲಾಖೆ ತೆಪ್ಪದ ವ್ಯವಸ್ಥೆ ಮಾಡಿದೆ. ಸ್ಥಳಕ್ಕೆ ತಹಸೀಲ್ದಾರ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ೩೦ ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಗ್ರಾಮ ದ್ವೀಪದಂತಾಗಿದೆ.
ಬೊಮ್ಮಸಂದ್ರ ಗ್ರಾಮಸ್ಥರ ಸಂಚಾರಕ್ಕೆ ತಾತ್ಕಾಲಿಕ ತೆಪ್ಪದ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮದಿಂದ ಹೊರಗೆ ಹೋಗಬೇಕಾದರೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ.
-ಅನಿಲ್‌ಕುಮಾರ್, ಪ್ರಬಾರ ಆರ್‌ಎಫ್‌ಒ, ಸಂಗಮ ಅರಣ್ಯ ವಲಯ