ರಿಮ್ಸ್ ಆಸ್ಪತ್ರೆ ವೈದ್ಯರು ಬಾಲಕನ ಶ್ವಾಸಕೋಶ ಸೇರಿದ ಗುಂಡು ಸೂಜಿ ಹೊರತೆಗೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದಕ್ಕೆ ಅನ್ನುವುದು ವೈದ್ಯೋ ನಾರಾಯಣೋ ಹರಿಃ' ಎಂಬ ಉಕ್ತಿಯಂತೆ ಬಾಲಕನ ಪಾಲಿಗೆ ರಿಮ್ಸ್ ಆಸ್ಪತ್ರೆ ವೈದ್ಯರು ದೇವರು ಆಗಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ಡಿ.03): ರಾಯಚೂರಿನ ರಿಮ್ಸ್ ಆಸ್ಪತ್ರೆ ಕಲ್ಯಾಣ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗೆ ಅತೀ ದೊಡ್ಡ ಆಸ್ಪತ್ರೆ ಆಗಿದೆ. ಈ ಆಸ್ಪತ್ರೆಗೆ ನಿತ್ಯ ನೂರಾರು ಜನರು ನಾನಾ ಕಾಯಿಲೆಗಳಿಂದ ನರಳುತ್ತಾ ಬಂದು ಆಸ್ಪತ್ರೆಗೆ ದಾಖಲು ಆಗುತ್ತಾರೆ. ವೈದ್ಯರ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳುತ್ತಾರೆ. ಇದರ ಮಧ್ಯೆ ಕೆಲ ವ್ಯವಸ್ಥೆಗಳು ಇಲ್ಲವೆಂದು ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಗರಂ ಆಗಿ ಗಲಾಟೆ ಮಾಡಿದ ಪ್ರಕರಣಗಳು ಇವೆ. ಇದರ ನಡುವೆ ಈಗ ರಿಮ್ಸ್ ಆಸ್ಪತ್ರೆ ವೈದ್ಯರು ಬಾಲಕನ ಶ್ವಾಸಕೋಶ ಸೇರಿದ ಗುಂಡು ಸೂಜಿ ಹೊರತೆಗೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದಕ್ಕೆ ಅನ್ನುವುದು ವೈದ್ಯೋ ನಾರಾಯಣೋ ಹರಿಃ' ಎಂಬ ಉಕ್ತಿಯಂತೆ ಬಾಲಕನ ಪಾಲಿಗೆ ರಿಮ್ಸ್ ಆಸ್ಪತ್ರೆ ವೈದ್ಯರು ದೇವರು ಆಗಿದ್ದಾರೆ.
undefined
ಏನಿದು ಪ್ರಕರಣ?:
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮುಚ್ಚುಳ ಕ್ಯಾಂಪ್ ನ 13 ವರ್ಷದ ಬಾಲಕ ಶಾಲೆಯಲ್ಲಿ ಆಟ ಆಡುವಾಗ ಗುಂಡು ಸೂಚಿ ಬಾಯಿಯಲ್ಲಿ ಇಟ್ಟುಕೊಂಡು ನುಂಗಿ ಬಿಟ್ಟಿದ್ದನು. ಇದನ್ನ ನೋಡಿದ ಶಿವಕುಮಾರ್ ಸ್ನೇಹಿತರು ಶಿಕ್ಷಕರಿಗೆ ಮಾಹಿತಿ ನೀಡಿದ್ರು. ಆತಂಕಗೊಂಡ ಶಿಕ್ಷಕರು ಮತ್ತು ಪೋಷಕರು ಕೂಡಲೇ ಬಾಲಕ ಶಿವಕುಮಾರ್ ಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ರು. ಬಾಲಕನಿಗೆ ಆಸ್ಪತ್ರೆಗೆ ದಾಖಲು ಮಾಡಿದ ಪೋಷಕರು ಬಾಲಕನ ಉಸಿರಾಟದ ಸಮಸ್ಯೆ ನೋಡಿ ಆತಂಕಗೊಂಡಿದ್ರು. ಕೂಡಲೇ ಅಲರ್ಟ್ ಆದ ರಿಮ್ಸ್ ಆಸ್ಪತ್ರೆ ವೈದ್ಯರು, ಬಾಲಕನ ಆರೋಗ್ಯ ತಪಾಸಣೆ ಮಾಡಿದ್ರು. ಬಾಲಕನ ಎರಡು ಶ್ವಾಸಕೋಶವನ್ನ ಎಕ್ಸ್ ರೇ ಮಾಡಿದ್ರು. ಆಗ ಬಾಲಕನ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡು ಸೂಜಿ ಇರುವುದು ವೈದ್ಯರಿಗೆ ಖಚಿತವಾಯ್ತು. ಆ ಬಳಿಕ ರಿಮ್ಸ್ ಆಸ್ಪತ್ರೆ ವೈದ್ಯರು ಮತ್ತು ತಜ್ಞ ವೈದ್ಯರ ಜೊತೆಗೆ ಚರ್ಚೆ ನಡೆಸಿ ಆತಂಕಗೊಂಡ ಪೋಷಕರಿಗೆ ಧೈರ್ಯ ತುಂಬಿದ್ರು. ಬಾಲಕ ಶಿವಕುಮಾರ್ ಶ್ವಾಸಕೋಶ ಸೇರಿದ ಗುಂಡು ಸೂಜಿ ಹೊರತೆಗೆಯುವ ಬಗ್ಗೆ ಪೋಷಕರಿಂದ ಅನುಮತಿ ಪತ್ರ ಬರೆಸಿಕೊಂಡರು. ಆ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ರೂಂಗೆ ಬಾಲಕನನ್ನ ಕರೆದುಕೊಂಡು ಹೋಗಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೂಗಿನ ಮೂಲಕ ಬ್ರಾಂಕೋಸ್ಕೋಪ್ ಮಾಡಿ ಬಾಲಕನ ಶ್ವಾಸಕೋಶ ಸೇರಿದ ಗುಂಡು ಸೂಜಿ ಹೊರ ತೆಗೆಯುವಲ್ಲಿ ರಿಮ್ಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.
ಮಂತ್ರಾಲಯದ ರಾಯರ ಹುಂಡಿಗೂ ತಟ್ಟಿದ ಬರದ ಬಿಸಿ; 31 ದಿನದಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?
ಗುಂಡು ಸೂಜಿ ಹೊರ ತೆಗೆದ ವೈದ್ಯರ ತಂಡ:
ಶಾಲೆಯಲ್ಲಿ 13 ವರ್ಷದ ಬಾಲಕ ಆಟವಾಡುವ ಗುಂಡು ಸೂಜಿ ನುಂಗಿ ನರಳಾಟ ನಡೆಸಿದ್ದನು. ಪೋಷಕರು ಆತಂಕಗೊಂಡ ಮಗನನ್ನ ರಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಬಂದ್ರೂ ತಕ್ಷಣವೇ ಪೋಷಕರು ಆತಂಕ ನೋಡಿದ ವೈದ್ಯರು, ಪೋಷಕರಿಗೆ ಧೈರ್ಯ ತುಂಬಿ, ತಮ್ಮ ಚಿಕಿತ್ಸೆ ಮುಂದುವರೆಸಿ ಬಾಲಕನ ಜೀವ ಉಳಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಚಿಕಿತ್ಸೆ ತಂಡದಲ್ಲಿ ಇಎನ್ ಟಿ ನುರಿತ ತಜ್ಞ ವೈದ್ಯರಾದ ಡಾ. ಅರವಿಂದ್ ಸಂಗವಿ, ಅರವಳಿಕೆ ತಜ್ಞ ಡಾ. ಕಿರಣ್ ನಾಯಕ, ಡಾ. ಮಲ್ಲಿಕಾರ್ಜುನ ಕೆ.ಪಾಟೀಲ್ ಹಾಗೂ ಪಿಜಿ ವಿದ್ಯಾರ್ಥಿನಿಯಾದ ಡಾ.ಸಿಂಧು, ಡಾ. ಇಂದುಮಣಿ ಮತ್ತು ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಂತ್ರಜ್ಞಾನರಾದ ಲಿಂಗರಾಜ್ , ಸುಮನ್ ಕ್ಲ್ಯಾರಿ, ನಾರಾಯಣ, ಶಂಕರ್ ಅವರ ಸತತ ಪ್ರಯತ್ನದ ಫಲವಾಗಿ ಬಾಲಕನ ಶ್ವಾಸಕೋಶ ಸೇರಿದ ಗುಂಡು ಪಿನ್ ಈಗ ಹೊರಬಂದಿದೆ.
ರಿಮ್ಸ್ ಆಸ್ಪತ್ರೆ ಮುಖ್ಯಸ್ಥರಿಂದ ವೈದ್ಯರ ತಂಡಕ್ಕೆ ಅಭಿನಂದನೆ:
ಸೂಕ್ತ ಸಮಯಕ್ಕೆ ಬಾಲಕನಿಗೆ ಬ್ರಾಂಕೋಸ್ಕೋಪಿ ಮಾಡಿ ಶ್ವಾಸಕೋಶ ಸೇರಿದ ಗುಂಡು ಸೂಜಿ ಹೊರತೆಗೆದ ವೈದ್ಯರ ತಂಡಕ್ಕೆ ರಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಬಸವರಾಜ್ ಪೀರಾಪುರ್, ರಿಮ್ಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಬಸವರಾಜ್. ಎಂ. ಪಾಟೀಲ್, ರಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ.ಭಾಸ್ಕರ್ ಕೆಂಪೇಗೌಡ, ಇ ಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಹಾಗೂ ಅರವಳಿಕೆ ಮುಖ್ಯಸ್ಥ ಡಾಕ್ಟರ್ ನಂದನ್ ಪಡಶೆಟ್ಟಿ, ಓಟಿ ಇಂಚಾರ್ಜ್ ಶುಶ್ರುಷಕ ಮೇಲ್ವಿಚಾರಕಿ ಆಶಾ ಹುಂಬಿ ಅಭಿನಂದನೆ ಸಲ್ಲಿಸಿದರು.