
ಬೆಂಗಳೂರು(ಅ.11): ಕೇಸು ಸೋತಿದ್ದಕ್ಕೆ ತನ್ನದೇ ವಕೀಲರ ಪ್ಯಾನೆಲ್‌ನಲ್ಲಿದ್ದ ವಕೀಲರೊಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ (ಆರ್‌ಜಿಯುಎಚ್‌ಎಸ್) ಧೋರಣೆಗೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ವಿಶ್ವವಿದ್ಯಾಲಯ ತಮ್ಮ ವಿರುದ್ಧ ದಾಖಲಿಸಿರುವ ವಂಚನೆ ಪ್ರಕರಣ ರದ್ದುಪಡಿಸುವಂತೆ ಕೋರಿ ಧಾರವಾಡದಲ್ಲಿ ಕಳೆದ 15 ವರ್ಷಗಳಿಂದ ವಿವಿ ಪರ ವಾದ ಮಂಡಿಸುತ್ತಿದ್ದ ವಕೀಲ ಶಿವಕುಮಾರ ಎಸ್.ಬಾದವಾಡಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ವಿರುದ್ಧ ವಿಶ್ವವಿದ್ಯಾಲಯ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ. ಅಲ್ಲದೆ, ವ್ಯಾಜ್ಯದಲ್ಲಿ ಸೋಲುಂಟಾದ ಮಾತ್ರಕ್ಕೆ ವಕೀಲರು ಕಕ್ಷಿದಾರರೊಂದಿಗೆ ಶಾಮೀಲಾಗಿದ್ದಾರೆ ಹಾಗೂ ಅವರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಆರೋಪ ಮಾಡುವುದು ಸರಿಯಲ್ಲ. ಇಂತಹ ದೂರು ದಾಖಲಿಸುವಾಗ ಎಚ್ಚರಿಕೆ ವಹಿಸಬೇಕು. ಇದು ಪುನರಾವರ್ತನೆಯಾದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯಕ್ಕೆ ನ್ಯಾಯಪೀಠ ಎಚ್ಚರಿಸಿದೆ.
ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಕಳಂಕಿತ ವ್ಯಕ್ತಿ ವೀಸಿ ವಿವಾದ. ಡಾ. ಜಯಕರ ಶೆಟ್ಟಿ ಸ್ಪಷ್ಟನೆ
2010ರಲ್ಲಿ ನಡೆಸಿದ್ದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯ ಅವ್ಯವಹಾರದ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ, ವಿವಿಯನ್ನು ಅರ್ಜಿದಾರರು ಪ್ರತಿನಿಧಿಸಿದ್ದರು. ಪ್ರಕರಣದ ಇತರೆ ಆರೋಪಿಗಳು ಸಲ್ಲಿಸಿದ ಇದೇ ರೀತಿಯ ಅರ್ಜಿಯಲ್ಲಿ ಹಿಂದೆ ನೀಡಲಾದ ಆದೇಶದ ಪ್ರಕಾರ ಹೈಕೋರ್ಟ್ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು. ಇದೇ ಕಾರಣಕ್ಕೆ ಆರೋಪಿಗಳ ಜೊತೆ ಸೇರಿಕೊಂಡು ಶಿವಕುಮಾರ್ ಅರ್ಜಿಗಳು ವಿಲೇವಾರಿ ಮಾಡಲು ಸಹಾಯ ಮಾಡಿದ್ದಾರೆಂದು ಆರೋಪಿಸಿ 2022ರ ಜು.29ರಂದು ವಿವಿ ಕ್ರಿಮಿನಲ್ ಕೇಸು ದಾಖಲಿಸಿತ್ತು.