Bengaluru: ಸಂಸ್ಕೃತ ಕಲಿಕೆ ಪುನರುಜ್ಜೀವನಗೊಳಿಸಿ: ವೆಂಕಯ್ಯ ನಾಯ್ಡು

By Govindaraj SFirst Published Jul 10, 2022, 8:29 AM IST
Highlights

ದೇಶದಲ್ಲಿ ಸಂಸ್ಕೃತ ಭಾಷೆಯ ಕಲಿಕೆಯನ್ನು ಪುನರುಜ್ಜೀವನಗೊಳಿಸಲು ಸಂಬಂಧಿಸಿದ ಭಾಷಾ ಪಂಡಿತರು, ಸಾಹಿತಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಾಮೂಹಿಕ ಆಂದೋಲನ ನಡೆಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. 

ಬೆಂಗಳೂರು (ಜು.10): ದೇಶದಲ್ಲಿ ಸಂಸ್ಕೃತ ಭಾಷೆಯ ಕಲಿಕೆಯನ್ನು ಪುನರುಜ್ಜೀವನಗೊಳಿಸಲು ಸಂಬಂಧಿಸಿದ ಭಾಷಾ ಪಂಡಿತರು, ಸಾಹಿತಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಾಮೂಹಿಕ ಆಂದೋಲನ ನಡೆಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 9ನೇ ದೀಕ್ಷಾಂತರ ಘಟಿಕೋತ್ಸವ ಮತ್ತು ದಶಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತ ಭಾಷೆ ನಮ್ಮ ದೇಶದ ಪರಂಪರೆ. ದೇಶದ ಆತ್ಮವನ್ನು ತಿಳಿಯಲು ನೆರವಾಗುವ ಭಾಷೆ. 

ನಮ್ಮೆಲ್ಲರನ್ನೂ ಒಗ್ಗೂಡಿಸುವ ಭಾಷೆಯೂ ಕೂಡ ಆಗಿದೆ. ಅಂತಹ ಭಾಷೆಯ ಕಲಿಕೆಯನ್ನು ದೇಶದಲ್ಲಿ ಪುನರುಜ್ಜೀವನಗೊಳಿಸಲು ಭಾಷಾ ಪಂಡಿತರು, ಸಾಹಿತಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಾಮೂಹಿಕವಾಗಿ ಆಂದೋಲನ ನಡೆಸಬೇಕು. ಆ ಮೂಲಕ ಭಾರತದ ಶ್ರೀಮಂತ ಸನಾತನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮರುಸ್ಥಾಪಿಸುವ ಕೆಲಸ ಮಾಡಬೇಕು. ದೇಶದ ಸಾಂಸ್ಕೃತಿಕ ಭಾಷೆಗಳನ್ನು ಉಳಿಸಲು ತಂತ್ರಜ್ಞಾನ ವಿಫುಲ ಅವಕಾಶಗಳನ್ನು ಸೃಷ್ಟಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.

ಬೆಂಗಳೂರಿನಲ್ಲಿಂದು ಖೇಲೋ ಇಂಡಿಯಾ ವಿವಿ ಗೇಮ್ಸ್ ಉದ್ಘಾಟನೆ

ಮಕ್ಕಳನ್ನು ಪ್ರೇರೇಪಿಸಬೇಕು: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಾತನಾಡಿ, ಪ್ರಾದೇಶಿಕ ಭಾಷೆಗಳ ಜೊತೆಗೆ ಸಂಸ್ಕೃತ ಭಾಷೆಯನ್ನು ಕಲಿಯಲು ಮಕ್ಕಳನ್ನು ಪ್ರೇರೇಪಿಸಬೇಕಾಗಿದೆ. ಸಂಸ್ಕೃತ ಭಾಷೆಯು ಜ್ಞಾನದ ಧ್ವನಿಯಾಗಿದೆ. ಇದನ್ನು ಅನೇಕ ಭಾಷೆಗಳ ತಾಯಿ ಎಂದು ಪರಿಗಣಿಸಲಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇವಾಲಯ ಸಂಸತ್‌ ಭವನದ ಮುಖ್ಯ ದ್ವಾರದ ಮೇಲೆ ಸಂಸ್ಕೃತದಲ್ಲಿರುವ ಉಲ್ಲೇಖವು ನಮಗೆ ರಾಷ್ಟ್ರದ ಸಾರ್ವಭೌಮತ್ವವನ್ನು ನೆನಪಿಸುತ್ತದೆ. ಸಂಸತ್‌ ಭವನದಲ್ಲಿ ಕೆತ್ತಲಾದ ಅನೇಕ ಸಂಸ್ಕೃತ ಉಲ್ಲೇಖಗಳು ಇಂದಿಗೂ ಪ್ರಸ್ತುತವಾಗಿವೆ. 

ಸಂಸ್ಕೃತ ಭಾಷೆಯ ವೈಜ್ಞಾನಿಕತೆಯನ್ನು ಅಧ್ಯಯನ ಮಾಡಿದ ನಂತರ, ಸಂಶೋಧನಾ ಸಂಸ್ಥೆಗಳು, ಕಂಪ್ಯೂಟರ್‌ ಸಾಫ್ಟ್‌ವೇರ್‌ಗೆ ಸಂಸ್ಕೃತವನ್ನು ಅತ್ಯಂತ ಸೂಕ್ತವಾದ ಭಾಷೆ ಎಂದು ಪರಿಗಣಿಸಿದೆ ಎಂದು ತಿಳಿಸಿದರು. ಅಮೆರಿಕನ್‌ ಹಿಂದೂ ವಿಶ್ವವಿದ್ಯಾನಿಲಯದ ಪ್ರಕಾರ, ಸಂಸ್ಕೃತವನ್ನು ಮಾತನಾಡುವುದರಿಂದ ದೇಹದಲ್ಲಿ ಶಕ್ತಿಯು ಹರಡುತ್ತದೆ. ರಕ್ತದ ಹರಿವು ಉತ್ತಮವಾಗಿರುತ್ತದೆ. ಸಂಸ್ಕೃತದಲ್ಲಿರುವ ವೈಜ್ಞಾನಿಕತೆಯಿಂದಾಗಿ ಅಮೆರಿಕ, ರಷ್ಯಾ, ಸ್ವೀಡನ್‌, ಕೆನಡಾ, ಜರ್ಮನಿ, ಬ್ರಿಟನ್‌, ಫ್ರಾನ್ಸ್‌, ಜಪಾನ್‌, ಆಸ್ಟ್ರಿಯಾ ಮುಂತಾದ ದೇಶಗಳಲ್ಲಿ ಮಕ್ಕಳು ನರ್ಸರಿಯಿಂದ ಸಂಸ್ಕೃತ ಕಲಿಸಲು ಆರಂಭಿಸಿದ್ದಾರೆ. 

ಶಿಕ್ಷಣವನ್ನ ಕೇಸರೀಕರಣ ಮಾಡೋದ್ರಲ್ಲಿ ತಪ್ಪೇನಿದೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನೆ!

ಹಾಗಾಗಿ, ಪ್ರಾದೇಶಿಕ ಭಾಷೆಗಳ ಅಧ್ಯಯನದ ಜೊತೆಗೆ ಮಕ್ಕಳಿಗೆ ಸಂಸ್ಕೃತ ಭಾಷೆ ಕಲಿಯಲು ಪ್ರೇರೇಪಿಸಬೇಕು ಎಂದು ಹೇಳಿದರು. ಹಿರಿಯ ವಿದ್ವಾಂಸರಾದ ಆಚಾರ್ಯ ಪ್ರದ್ಯುಮ್ನ, ಡಾ.ವಿ.ಎಸ್‌.ಇಂದಿರಮ್ಮ ಮತ್ತು ವಿದ್ವಾನ್‌ ಉಮಾಕಾಂತ್‌ ಭಟ್‌ ಅವರಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಗೌರವ ಡಾಕ್ಟರೇಟ್‌ ಪದವಿ ನೀಡಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ.ಕೆ.ಇ.ದೇವನಾಥನ್‌ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

click me!