ಕಾರ್ಯದೊತ್ತಡದ ಮಧ್ಯೆಯೂ ಮಾನವೀಯತೆ ಮೆರೆದ ಕಂದಾಯ ಇಲಾಖೆ ಸಿಬ್ಬಂದಿ| ವೃದ್ಧೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಬೆಂಗಳೂರಿನಿಂದ ಔಷಧಿ ತರಿಸಿ ಕೊಟ್ಟ ಕಂದಾಯ ಇಲಾಖೆ ಸಿಬ್ಬಂದಿ|
ಧಾರವಾಡ(ಮೇ.02): ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಮ್ಮ ಕಾರ್ಯದೊತ್ತಡದ ಮಧ್ಯೆಯೂ ಮಾನವೀಯತೆಯಿಂದ ವೃದ್ಧೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಬೆಂಗಳೂರಿನಿಂದ ಔಷಧಿ ತರಿಸಿ ಕೊಟ್ಟಿದ್ದಾರೆ ಕಂದಾಯ ಇಲಾಖೆ ಸಿಬ್ಬಂದಿ.
ನಗರದ ಚರಂತಿಮಠ ಗಾರ್ಡನ್‌ನ ಜೈಜಿನೇಂದ್ರ ಕಾಲನಿಯ ನಿವಾಸಿ ಶಕುಂತಲಾ ಎಂಬ ವಯೋವೃದ್ಧೆ ಯೊಬ್ಬರು ಕ್ಯಾನ್ಸರ್ ಪೀಡಿತನಾಗಿರುವ ಮೊಮ್ಮಗನಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಪ್ರತಿ ತಿಂಗಳು ಸುಮಾರು 30 ಸಾವಿರ ಮೌಲ್ಯದ ಔಷಧಿ, ಮಾತ್ರೆಗಳು ಬೇಕಾಗುತ್ತದೆ. ಕಿದ್ವಾಯಿಯಲ್ಲಿ ಈ ಮಾತ್ರೆಗಳು ಅಲ್ಲಿನ ವೈದ್ಯರಾದ ಡಾ. ಶ್ಯಾಮಸುಂದರ ಅವರ ಸಹಾಯದಿಂದ ತಮಗೆ ಉಚಿತವಾಗಿ ಸಿಗುತ್ತಿವೆ. ಪ್ರತಿ ತಿಂಗಳು ಆ ವೈದ್ಯರೇ ಬಸ್ ಚಾರ್ಜ್ ಸಹ ನೀಡಿ ಉಪಕರಿಸುತ್ತಿರುವುದನ್ನು ಜಿಲ್ಲಾಧಿಕಾರಿಗಳ ಎದುರು ವೃದ್ಧೆ ವಿವರಿಸಿದ್ದಾರೆ.
ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢ: ಹುಬ್ಬಳ್ಳಿ ಅಕ್ಷರಶಃ ತಲ್ಲಣ
ಈ ಕಾರಣದಿಂದ ಬೆಂಗಳೂರಿಗೆ ಹೋಗಲು ಪಾಸ್ ಕೇಳಲು ಬಂದ ಜಿಲ್ಲಾ ಖಜಾನೆಯ ಸಿಬ್ಬಂದಿಯೊಬ್ಬರ ಮೂಲಕ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಔಷಧಿ ತರಿಸಿಕೊಡಲಾಯಿತು. ಔಷಧಿ ಬಂದ ನಂತರ ಅದನ್ನು ನೇರವಾಗಿ ರೋಗಿಗೆ ಕೊಡುವ ಮೊದಲು ರಕ್ತ ಪರೀಕ್ಷೆಯೊಂದು ಕಡ್ಡಾಯವಾಗಿತ್ತು. ಆಗ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಡಾ. ಉಮೇಶ ಹಳ್ಳಿಕೇರಿಯವರನ್ನು ಸಂಪರ್ಕಿಸಿದಾಗ ಅವರೂ ಕೂಡ ಉಚಿತವಾಗಿ ಪರೀಕ್ಷೆ ಮಾಡಿ ವರದಿ ನೀಡಿದ ನಂತರ, ಆ ವರದಿಯನ್ನು ಬೆಂಗಳೂರಿನ ತಜ್ಞ ವೈದ್ಯರಾದ ಡಾ. ಶಾಮಸುಂದರ್ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ, ಅವರ ಸಲಹೆ ಪಡೆದ ನಂತರ ರೋಗಿಗೆ ಔಷಧಿ ತೆಗೆದುಕೊಳ್ಳಲು ಸಾಧ್ಯವಾಗಿದೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅವರ ಕಚೇರಿಯ ಪಾಸ್ ವಿತರಣಾ ವಿಭಾಗದ ನೋಡಲ್ ಅಧಿಕಾರಿ ದೀಪಕ ಮಡಿವಾಳರ, ತಹಸೀಲ್ದಾರ ಪ್ರವೀಣ ಹುಚ್ಚಣ್ಣವರ, ಕೆ.ಎ.ಜಂಗೂರ, ಧರಣೇಂದ್ರ ಕಸಮಾಳಗಿ, ಇಸ್ಮಾಯಿಲ್ ಮಳಲಿ, ಜಿ.ಬಿ.ಪಾಟೀಲ, ಅರವಿಂದ, ಸುನೀಲ ,ಅಶೋಕ ನಿಂಗೋಳಿ ಮತ್ತಿತರರು ಮುತುವರ್ಜಿ ವಹಿಸಿ ತನ್ನ ಮೊಮ್ಮಗನ ಚಿಕಿತ್ಸೆಗೆ ನೆರವಾಗಿದ್ದನ್ನು ಶುಕ್ರವಾರ ವಯೋವೃದ್ಧ ಅಜ್ಜಿ ಶಕುಂತಲಾ ಸ್ವತಃ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನದುಂಬಿ ಕೃತಜ್ಞತೆ ಸಲ್ಲಿಸಿದರು.